ಮುಂಬಯಿ : ಮಹಾರಾಷ್ಟ್ರದ ಪ್ರಭಾವಿ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ ಅವರು ಕೊನೆಗೂ ಕಾಂಗ್ರೆಸ್ ಪಕ್ಷಕ್ಕೆ ಗುಡ್‌ಬೈ ಹೇಳಿದ್ದು, ಅವರು ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆಗಳು ಹೆಚ್ಚಿವೆ.
ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಣೆ ನಾನು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದು, ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ರಾಜೀನಾಮೆ ಪತ್ರ ನೀಡಿರುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಶಿವಸೇನೆಯನ್ನು ಮುಗಿಸುತ್ತೇನೆ ಎಂದು ಈ ವೇಳೆ ರಾಣೆ ಶಪಥ ಮಾಡಿದರು. ಶಿವಸೇನೆ ಬಿಜೆಪಿ ಸರ್ಕಾರಕ್ಕೆ ನೀಡಿರುವ ಬೆಂಬಲ ಹಿಂಪಡೆಯುವುದಾಗಿ ನಾಟಕ ಮಾಡುತ್ತಿದೆ ಎಂದು ಕಿಡಿ ಕಾರಿದರು.
ಸಿಂಧದುರ್ಗ ಭಾಗದ ಪ್ರಭಾವಿ ನಾಯಕರಾಗಿದ್ದ ನಾರಾಯಣ ರಾಣೆ ಶಿವಸೇನೆಯಿಂದ ಮುಖ್ಯಮಂತ್ರಿಯಾಗಿದ್ದರು.ಭಿನ್ನಮತದ ಹಿನ್ನಲೆಯಲ್ಲಿ ಪಕ್ಷದಿಂದ ಉಚ್ಛಾಟಿತರಾಗಿ 2005 ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.
65 ರ ಹರೆಯದ ರಾಣೆ ಇದೀಗ ಬಿಜೆಪಿ ಸೇರ್ಪಡೆಯಾಗಿ ತಮ್ಮ ಪುತ್ರರಾದ ನಿಲೇಶ್ ರಾಣೆ ಮತ್ತು ನಿತೇಶ್ ರಾಣೆ ಅವರ ಉತ್ತಮ ರಾಜಕೀಯ ಭವಿಷ್ಯ ರೂಪಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ರಾಣೆ ಬಿಜೆಪಿ ಸೇರ್ಪಡೆ ಕುರಿತು ಹಲವು ದಿನಗಳಿಂದ ಬಿಜೆಪಿಯಲ್ಲಿ ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ.