ನರಗುಂದ: ಮಕರ ಸಂಕ್ರಮಣ ಅಂಗವಾಗಿ ಕೊಣ್ಣೂರ ಹಾಗೂ ಸುತ್ತ ಗ್ರಾಮಗಳ ಗಂಗಾಮತಸ್ಥ ಸಮಾಜದಿಂದ ಗ್ರಾಮದ ಬಳಿ ಮಲಪ್ರಭಾ ನದಿ ತೀರದಲ್ಲಿ ಸೋಮವಾರ ಮರಳಿನಿಂದ ವಿಶೇಷವಾಗಿ ತಯಾರಿಸಿದ ಗಂಗಾ-ಪರಮೇಶ್ವರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಸಂಕ್ರಮಣವನ್ನು ಸಡಗರದಿಂದ ಆಚರಿಸಲಾಯಿತು.
ಪ್ರಾಚೀನ ರಾಮೇಶ್ವರ ದೇವಸ್ಥಾನ ಬಳಿ ಮಲಪ್ರಭಾ ದಂಡೆಯಲ್ಲಿ ಕಲಾವಿದನ ಕೈಚಳಕದಲ್ಲಿ ಸುಂದರವಾಗಿ ತಯಾರಿಸಿದ ಗಂಗಾ ಪರಮೇಶ್ವರಿ ಮೂರ್ತಿಗೆ ಪೂಜಾ ಕೈಂಕರ್ಯದಲ್ಲಿ ಬೆಳಗ್ಗೆಯಿಂದ ಕೊಣ್ಣೂರು, ವಾಸನ,ಬೆಳ್ಳೇರಿ, ಲಖಮಾಪುರ ಗ್ರಾಮಗಳ ಎಲ್ಲ ಸಮಾಜ ಬಾಂಧವರು, ಯುವಕ-ಯುವತಿಯರು ಪಾಲ್ಗೊಂಡು ಗಂಗಾ ಪರಮೇಶ್ವರಗೆ ಪೂಜೆ ಸಲ್ಲಿಸಿ ಸೂರ್ಯ ನಮಸ್ಕಾರ ಹಾಕಿದರು.
ಬೆಳ್ಳೇರಿ ಶಿವಾನಂದ ಮಠದ ಸಚ್ಚಿದಾನಂದ ಸ್ವಾಮೀಜಿ, ಬಸವಾನಂದ ಸ್ವಾಮೀಜಿ, ಅಥಣಿ ಶಿವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನೆರವೇರಿತು. ಗಂಗಾಮತಸ್ಥ ಸಮಾಜ ಅಧ್ಯಕ್ಷ ಬಸಪ್ಪ ಶಿರಹಟ್ಟಿ, ತಾಪಂ ಸದಸ್ಯ ಟಿ.ಬಿ. ಶಿರಿಯಪ್ಪಗೌಡ್ರ, ಎಪಿಎಂಸಿ ಸದಸ್ಯ ಶಂಕರಗೌಡ ಯಲ್ಲಪ್ಪಗೌಡ್ರ, ವಾಸನ ಗ್ರಾಪಂ ಅಧ್ಯಕ್ಷ ಶ್ರೀಕಾಂತಯ್ಯ ಹಿರೇಮಠ, ಮುರಗಯ್ಯ ಹಿರೇಮಠ, ತುಳಸೀಗೇರಿ ಸೋಮಾಪುರ, ಮಲ್ಲಪ್ಪ ಕರಿಯಪ್ಪನವರ, ಈರಣ್ಣ ಶಿರಸಂಗಿ, ಅರವಿಂದ ದೀಕ್ಷಿತ, ಭರಮ್ಮ ಬಾರಕೇರ, ಯಲ್ಲಪ್ಪ ಕಾಣಿಕರ, ಹನಮಂತ ಕಟ್ಟಿಮನಿ, ಬಸಪ್ಪ ಕಟ್ಟಿಮನಿ, ಫಕೀರಪ್ಪ ಸುಣಗಾರ, ಬಸವರಾಜ ಅಂಬಿಗೇರ, ಚನ್ನಪ್ಪ ಶಿರಹಟ್ಟಿ, ನಿಂಗಪ್ಪ ಹಿರೇಹೊಳಿ, ಬಸವರಾಜ ಬಾರಕೇರ, ಹನಮಂತ ಅಂಬಿಗೇರ, ತಾಪಂ ಮಾಜಿ ಅಧ್ಯಕ್ಷೆ ಭೀಮವ್ವ ಶಿರಹಟ್ಟಿ ಮುಂತಾದವರು ಪಾಲ್ಗೊಂಡಿದ್ದರು. ಅಚ್ಚುಕಟ್ಟು ಪ್ರದೇಶದ ಜೀವನಾಡಿ ಮಲಪ್ರಭೆಗೆ ಪೂಜೆ ಸಲ್ಲಿಸಿದ ಬಳಿಕವೇ ನಾವಿಕ ವೃತ್ತಿ ನಡೆಸುತ್ತಿದ್ದ ವಿಶಿಷ್ಟ ಹಿನ್ನೆಲೆ ಇಲ್ಲಿನ ಗಂಗಾಮತಸ್ಥ ಸಮಾಜಕ್ಕಿದೆ. ಹೀಗಾಗಿ ತಾಲೂಕಿನ ಕೊಣ್ಣೂರ ಗ್ರಾಮದ ಬಳಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಜೀವನದಿ ಮಲಪ್ರಭೆ ತಟದಲ್ಲಿ ಗಂಗಾ ಪರಮೇಶ್ವರ ಪೂಜೆಗೆ ದಶಕಗಳ ಇತಿಹಾಸವಿದೆ.
ಮೂಲತಃ ನಾವಿಕ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಸಮಾಜ ಬಾಂಧವರು ಪ್ರತಿವರ್ಷ ಸಂಕ್ರಮಣ ದಿನ ಗಂಗಾ ಪರಮೇಶ್ವರಗೆ ಪೂಜಿಸಿದ ಬಳಿಕ ನದಿಯಲ್ಲಿ ನಾವಿಕ ವೃತ್ತಿ ಪ್ರಾರಂಭಿಸುತ್ತಿದ್ದರು ಎನ್ನಲಾಗಿದೆ. ಕಳೆದ 14 ವರ್ಷದಿಂದ ಈ ಕಾರ್ಯಕ್ರಮ ಸಂಭ್ರಮದಿಂದ ಆಚರಿಸುತ್ತಿದ್ದು, ಎಲ್ಲ ಸಮಾಜ ಬಾಂಧವರು ಒಗ್ಗಟ್ಟಿನಿಂದ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ.
ಕಳಸಾ-ಬಂಡೂರಿಗೆ ಹರಕೆ
ಗಂಗಾಮತಸ್ಥ ಸಮಾಜದಿಂದ ಈ ಬಾರಿ ವಿಶೇಷವಾಗಿ ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆ ಶೀಘ್ರ ಅನುಷ್ಠಾನಗೊಂಡು ಮಲಪ್ರಭೆ ಒಡಲು ತುಂಬಲಿ, ಇದರಿಂದ ಈ ಭಾಗದ ಸಮಸ್ತ ರೈತ ಬಾಂಧವರ ಬದುಕು ಹಸನಾಗಲಿ ಎಂದು ಮಲಪ್ರಭೆಯ ಗಂಗಾ ಮಾತೆಗೆ ಹರಕೆ ಸಲ್ಲಿಸಲಾಯಿತು.