Advertisement

ಒಣ ಕೊಬ್ಬರಿಗೆ ಈಗ ಬಂಗಾರದ ಬೆಲೆ; ಬೆಲೆ ಹೆಚ್ಚಳಕ್ಕೇನು ಕಾರಣ?

04:34 PM Oct 04, 2024 | Team Udayavani |

■ ಉದಯವಾಣಿ ಸಮಾಚಾರ
ಹೊಸದುರ್ಗ: ಮಾರುಕಟ್ಟೆಯಲ್ಲಿ ಒಣ ಕೊಬ್ಬರಿ ಧಾರಣೆಯಲ್ಲಿ ಏರಿಕೆ ಕಂಡಿದ್ದು, ತೆಂಗು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಕ್ವಿಂಟಲ್‌ಗೆ 16 ಸಾವಿರ ರೂಪಾಯಿ ದಾಟಿರುವ ಕೊಬ್ಬರಿ ಬೆಲೆ ದೀಪಾವಳಿ ವೇಳೆಗೆ ಮತ್ತಷ್ಟು ಏರಿಕೆ ಆಗಬಹುದು ಎಂದು ಅಂದಾಜಿಸಲಾಗಿದೆ.

Advertisement

ಹಲವು ತಿಂಗಳಿನಿಂದ 10 ಸಾವಿರ ರೂ. ಒಳಗಡೆಯೇ ವಹಿವಾಟು ನಡೆಸುತ್ತಿದ್ದ ಒಣ ಕೊಬ್ಬರಿ ಬೆಲೆ ಸುದೀರ್ಘ‌ ಕಾಯುವಿಕೆಯ
ನಂತರ ಏರಿಕೆ ಹಾದಿ ಹಿಡಿದಿದೆ. ಜೂನ್‌ ತಿಂಗಳವರೆಗೆ ಕ್ವಿಂಟಲ್‌ಗೆ 8 ಸಾವಿರದ ಆಸುಪಾಸಿನಲ್ಲಿದ್ದ ದರ ಆಗಸ್ಟ್‌ನಲ್ಲಿ 10,250
ರೂ. ದಾಖಲಿಸುವ ಮೂಲಕ 10 ಸಾವಿರದ ಗಡಿ ದಾಟಿತ್ತು. ಕಳೆದ ಎರಡು ತಿಂಗಳಿನಿಂದ ಸತತವಾಗಿ ಏರಿಕೆಯಾಗುತ್ತಿರುವ ಕೊಬ್ಬರಿ ಧಾರಣೆ ಇದೀಗ 16 ಸಾವಿರ ರೂ ಗಡಿ ದಾಟಿದೆ.

ಸತತ ಬರ, ತೆಂಗಿಗೆ ಬಾಧಿಸಿರುವ ರೋಗದ ನಡುವೆಯೂ ರೈತರು ಕಷ್ಟಪಟ್ಟು ತೆಂಗು ಉಳಿಸಿಕೊಂಡಿದ್ದರು ಆದರೂ ಕೊಬ್ಬರಿಗೆ ಉತ್ತಮ ಬೆಲೆ ಸಿಕ್ಕಿರಲಿಲ್ಲ. ಕೊಬ್ಬರಿ ಧಾರಣೆ ಕುಸಿದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿ ಮಾಡಿತ್ತು. ಖರೀದಿಗೆ ಹಲವು ಮಾನದಂಡಗಳನ್ನು ವಿಧಿಸಿದ್ದರಿಂದ ಬಹುಪಾಲು ರೈತರಿಗೆ ಇದರ ಪ್ರಯೋಜನ ಲಭಿಸಿರಲಿಲ್ಲ.

ಪ್ರಸ್ತುತ ಕೊಬ್ಬರಿ ದರ ಏರಿಕೆಯಾಗುತ್ತಿದ್ದಂತೆಯೇ ರೈತರು ಮಾರುಕಟ್ಟೆಗೆ ಕೊಬ್ಬರಿ ತರುತ್ತಿದ್ದಾರೆ. ಹೊಸದುರ್ಗ ಹಾಗೂ
ಶ್ರೀರಾಂಪುರ ಎಪಿಎಂಸಿ ಮಾರುಕಟ್ಟೆಯಲ್ಲಿರುವ ವರ್ತಕರು ಕೊಬ್ಬರಿಯನ್ನು ಖರೀದಿಸುತ್ತಾರೆ. ತಿಪಟೂರು ಕೊಬ್ಬರಿ ಮಾರುಕಟ್ಟೆಯಲ್ಲಿ ನಡೆಯುವ ಹರಾಜು ಪ್ರಕ್ರಿಯೆ ಆಧಾರದ ಮೇಲೆ ಇಲ್ಲಿನ ವಹಿವಾಟು ನಡೆಯುತ್ತದೆ.

ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ತೆಂಗು ಹಲವು ಕುಟುಂಬಗಳನ್ನು ಸಲಹುತ್ತಿದೆ. ತಾಲೂಕಿನಲ್ಲಿ 43 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ಕಳೆದ 2 ವಾರದ ಹಿಂದೆ ಮಾರುಕಟ್ಟೆಯಲ್ಲಿ ತೆಂಗಿನಕಾಯಿ ಕೆಜಿಗೆ 51 ರೂ.ಗಳಿಂದ 53 ರೂ. ಗಳವರೆಗೂ ಮಾರಾಟ ಆಗಿದೆ. ಕಳೆದ ವಾರ ಏರಿಕೆ ಕಂಡಿದ್ದ ತೆಂಗಿನ ಕಾಯಿ ಬೆಲೆ 10 ರೂ ಇಳಿಕೆ ಕಂಡಿದೆ. ದಸರಾ, ದೀಪಾವಳಿ ಹಬ್ಬಕ್ಕೆ ಬೇಕಾಗುವಷ್ಟು ತೆಂಗಿನ ಕಾಯಿ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವುದರಿಂದ ದರ ಇಳಿಕೆ ಕಂಡಿದೆ ಎನ್ನುತ್ತಾರೆ ವ್ಯಾಪಾರಸ್ಥರು.

Advertisement

ಬೆಲೆ ಹೆಚ್ಚಳಕ್ಕೇನು ಕಾರಣ?
ಸತರ ಬರಗಾಲ, ರೋಗ ಬಾಧೆಯಿಂದ ತೆಂಗು ಇಳುವರಿ ಕಡಿಮೆ ಆಗಿದೆ. ಮತ್ತೂಂದೆಡೆ ಸಾಕಷ್ಟು ರೈತರು ಕೊಬ್ಬರಿ ಆಗುವವರೆಗೂ ಕಾಯದೆ ಎಳನೀರು, ತೆಂಗಿನಕಾಯಿ ಮಾರಾಟಕ್ಕೆ ಮುಂದಾಗಿದ್ದಾರೆ. ಹಾಗಾಗಿ ಕೊಬ್ಬರಿ ಉತ್ಪಾದನೆ ಕಡಿಮೆಯಾಗಿದ್ದು, ಬೇಡಿಕೆ ಹೆಚ್ಚುತ್ತಿದೆ. ಉತ್ತರ ಭಾರತೀಯರು ಚಳಿಗಾಲದಲ್ಲಿ ಹೆಚ್ಚು ಕೊಬ್ಬರಿ ಬಳಸಲಿದ್ದು, ದರ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಗರಿಗೆದರಿದೆ. ಇದೀಗ ದಸರಾ, ದೀಪಾವಳಿ ಹಬ್ಬದ ಪ್ರಯುಕ್ತ ಹೆಚ್ಚು ಬೇಡಿಕೆ ಇರುವುದೇ ಬೆಲೆ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ.

ವಾರದ ಹಿಂದೆ ಕೊಬ್ಬರಿಗೆ ಕ್ವಿಂಟಲ್‌ಗೆ 18 ಸಾವಿರ ರೂ. ಗಡಿ ದಾಟಿತ್ತು. ದಲ್ಲಾಳಿಗಳು ಮತ್ತು ರವಾನೆದಾರರ ತಂತ್ರದಿಂದ ಕೊಬ್ಬರಿ ಬೆಲೆ ಇಳಿಕೆ ಕಂಡಿದೆ. ರೋಗ, ಕೀಟ ಬಾಧೆ, ಇಳುವರಿ ಕುಂಠಿತ ಆಗಿರುವುದರಿಂದ ಕೊಬ್ಬರಿ ದರ ಇನ್ನಷ್ಟು ಏರಿಕೆ ಆಗಬೇಕು. ಪ್ರಸ್ತುತ ತೆಂಗಿನಕಾಯಿ ಪ್ರತಿ ಕ್ವಿಂಟಲ್‌ಗೆ 55 ಸಾವಿರ ರೂ. ದರ ಸಿಗುತ್ತಿರುವುದು ಖುಷಿ ತಂದಿದೆ.
* ಕೊರಟಿಕೆರೆ ಮಹೇಶ್ವರಪ್ಪ, ತೆಂಗು ಬೆಳೆಗಾರ

ರೋಗ ಬಾಧೆಯಿಂದ ಇಳುವರಿ ಕಡಿಮೆ ಆಗಿರುವುದರಿಂದ ತೆಂಗಿನಕಾಯಿಗೆ ಉತ್ತಮ ಬೆಲೆ ಸಿಗುತ್ತಿದೆ. ಕೆಜಿಗೆ 50 ರೂ. ಒಳ್ಳೆಯ ಬೆಲೆ ಸಿಗುತ್ತಿರುವುದರಿಂದ ಹೆಚ್ಚಿನ ರೈತರು ತೆಂಗಿನಕಾಯಿ ಮಾರಾಟ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಬ್ಬರಿ ಬೆಲೆ 20 ಸಾವಿರ ಗಡಿ ತಲುಪಿದರೂ ಆಶ್ಚಯವಿಲ್ಲ.
*ಬಾಗೂರು ರಂಗಪ್ಪ, ತೆಂಗು ಬೆಳೆಗಾರ

Advertisement

Udayavani is now on Telegram. Click here to join our channel and stay updated with the latest news.

Next