Advertisement

ನೀರಿನ ಘಟಕಗಳ ಮಾಹಿತಿಗೆ ತಾಕೀತು

11:05 AM Feb 10, 2019 | Team Udayavani |

ನರಗುಂದ: ಜೂನ್‌ ತಿಂಗಳಿನಿಂದ ಫೆಬ್ರುವರಿವರೆಗೆ ಮತಕ್ಷೇತ್ರ ವ್ಯಾಪ್ತಿಯಲ್ಲಿ ಶುದ್ಧ ಕುಡಿವ ನೀರಿನ ಎಷ್ಟು ಘಟಕಗಳಿಗೆ ಮೆಮೋರಿ ಅಳವಡಿಸಲಾಗಿದೆ, ಅವುಗಳ ಸ್ಥಿತಿಗತಿ ಹೇಗಿದೆ ಎಂಬುದರ ಸಮಗ್ರ ಮಾಹಿತಿ ಕೂಡಲೇ ಸಲ್ಲಿಸಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಮತಕ್ಷೇತ್ರ ವ್ಯಾಪ್ತಿಯ ಮೂರು ತಾಪಂ ಇಒಗಳಿಗೆ ಸೂಚಿಸಿದರು.

Advertisement

ಪಟ್ಟಣದ ತಾಪಂ ಸಭಾಂಗಣದಲ್ಲಿ ಶನಿವಾರ ನರಗುಂದ ಮತಕ್ಷೇತ್ರ ವ್ಯಾಪ್ತಿಯ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಮಾರ್ಚ್‌ ಒಳಗಾಗಿ ಗುರುತಿಸಲಾದ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಠರಾವ್‌ ಪಾಸ್‌: ಯಾವಗಲ್ಲ ಗ್ರಾಮದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಗ್ರಾಮೀಣ ಕುಡಿಯುವ ನೀರಿನ ಯೋಜನೆ(ಡಿಬಿಓಟಿ) ಇದ್ದರೂ ನೀರಿನ ಕೊರತೆಯಾಗುತ್ತಿದ್ದರಿಂದ ಯಾವಗಲ್ಲ ಗ್ರಾಮಕ್ಕೆ ಸೇರುವ 49 ಬಿ, 49ಸಿ ಕಾಲುವೆಗಳ ದುರಸ್ತಿಗೆ ಇಂದೇ ಠರಾವ್‌ ಪಾಸ್‌ ಮಾಡಿ ನೀರಾವರಿ ನಿಗಮ ಮುಖ್ಯ ಅಭಿಯಂತರರಿಗೆ ವರದಿ ಸಲ್ಲಿಸುವಂತೆ ಶಾಸಕ ಪಾಟೀಲ ಸೂಚಿಸಿದರು.

ಪಂಚಾಯತ್‌ ಇಲಾಖೆ: ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆ ಪ್ರಗತಿ ಪರಿಶೀಲನೆಯಲ್ಲಿ ಗದಗ ಎಇಇ ಅವರು ಪ್ರಗತಿ ವರದಿ ಸಲ್ಲಿಸುತ್ತಿದ್ದಂತೆ ಗದಗ-ಬಳಗಾನೂರ ರಸ್ತೆ ಸುಧಾರಣೆ ಕಾಮಗಾರಿ ವಿಷಯ ಪ್ರಸ್ತಾಪಿಸಿದ ಶಾಸಕರು, ಈ ಬಗ್ಗೆ ಎಇಇ ಅಸಮರ್ಪಕ ಮಾಹಿತಿ ನೀಡಿದಾಗ ಕೂಡಲೇ ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ಗದಗ ತಾಪಂ ಎಇಇ ಜಿಣಗಾ ಅವರಿಗೆ ಸೂಚಿಸಿದರು.

ಗದಗ ತಾಲೂಕು ದುಂದೂರ ಗ್ರಾಮದಲ್ಲಿ ಗ್ರಾಮ ವಿಕಾಸ ಯೋಜನೆ ಅಡಿಯಲ್ಲಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ದೂರು ಬಂದಿವೆ. ಕೂಡಲೇ ಅಲ್ಲಿನ ಕಾಮಗಾರಿ ಮೂರನೇ ವ್ಯಕ್ತಿ ತನಿಖೆಗೆ ಕ್ರಮ ಕೈಗೊಳ್ಳಬೇಕು ಎಂದು ಗದಗ ಇಒಗೆ ಸಲಹೆ ನೀಡಿದರು.

Advertisement

2017/18ನೇ ಸಾಲಿನ ಸುವರ್ಣ ಗ್ರಾಮ ಯೋಜನೆಯಡಿ ವಿಶೇಷ ಅನುದಾನದ ಕಾಮಗಾರಿ ಪ್ರಗತಿಯಲ್ಲಿವೆ. ಇದುವರೆಗೂ ಅಗತ್ಯ ಅನುದಾನ ಬಿಡುಗಡೆ ಆಗಿಲ್ಲ ಎಂದು ಗದಗ ಎಇಇ ತಿಳಿಸಿದಾಗ, 2018/19ನೇ ಸಾಲಿನ ಬಜೆಟ್ ಮಂಡನೆಯಾಗಿದೆ. 2017/18ನೇ ಬಜೆಟ್‌ನಲ್ಲಿ ಅನುಮೋದನೆ ಪಡೆದ ಅನುದಾನ ಇದುವರೆಗೆ ಬಂದಿಲ್ಲ ಎಂದರೆ ಹೇಗೆ?. ಅನುದಾನ ಬರದಿದ್ದರೂ ಕಾಮಗಾರಿ ಹೇಗೆ ಪ್ರಗತಿಯಲ್ಲಿವೆ ಎಂದು ಗದಗ ಪಂಚಾಯತ್‌ ರಾಜ್‌ ಇಲಾಖೆ ಎಇಇ ಅವರನ್ನು ಪ್ರಶ್ನಿಸಿದ ಶಾಸಕ ಸಿ.ಸಿ. ಪಾಟೀಲ, ಅಲ್ಲಿನ 86 ಲಕ್ಷ ವೆಚ್ಚದ ಕಾಮಗಾರಿ ಕೂಡಲೇ ಪರಿಶೀಲನೆ ಮಾಡಿ ವರದಿ ಸಲ್ಲಿಸಲು ಗದಗ ತಾಪಂ ಇಒಗೆ ಸೂಚಿಸಿದರು.

ಅಧಿಕಾರಿಗಳಿಗೆ ಬಿಸಿ: ಕೆಡಿಪಿ ಸಭೆ ಮುನ್ನವೇ ಅಧಿಕಾರಿಗಳಿಗೆ ಸಮಗ್ರ ಮಾಹಿತಿ ಇದ್ದರೆ ಮಾತ್ರ ನಿಮ್ಮ ಇಲಾಖೆ ಪ್ರಗತಿ ವರದಿ ಸಲ್ಲಿಸಿ ಎಂದು ತಾಕೀತು ಮಾಡಿದ ಶಾಸಕರು, ಬಳಿಕ ಪಂಚಾಯತ್‌ ರಾಜ್‌ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಮಾಹಿತಿ ನೀಡದ ಕಾರಣ ತರಾಟೆಗೆ ತೆಗೆದುಕೊಂಡರು. ಅಲ್ಲದೇ ಇಂದು ಅನಗತ್ಯವಾಗಿ ಗೈರು ಉಳಿದ ಇಲಾಖಾ ಅಧಿಕಾರಿಗಳಿಗೆ ಇಂದೇ ಕಾರಣ ಕೇಳಿ ನೊಟೀಸ್‌ ಜಾರಿ ಮಾಡುವಂತೆ ತಾಪಂ ಇಒ ನಾರಾಯಣರಡ್ಡಿ ಕನಕರಡ್ಡಿ ಅವರಿಗೆ ಸೂಚಿಸಿದರು. ಮೆಣಸಗಿಯಲ್ಲಿ ಅಕ್ಕಮಹಾದೇವಿ ಸಾಂಸ್ಕೃತಿಕ ಭವನ ನಿರ್ಮಾಣ ಜಾಗೆ ಬಗ್ಗೆ ಅಲ್ಲಿನ ಪಿಡಿಒ ಗೊಂದಲದ ಸ್ಪಷ್ಟನೆ ನೀಡಿದಾಗ ಸೋಮವಾರವೇ ಅಲ್ಲಿಗೆ ಭೇಟಿ ನೀಡಿ ವರದಿ ನೀಡಬೇಕು ಎಂದು ರೋಣ ತಾಪಂ ಇಒ ವಿ.ಎಸ್‌. ಚಳಗೇರಿ ಅವರಿಗೆ ತಾಕೀತು ಮಾಡಿದರು.

ತಾಪಂ ಉಪಾಧ್ಯಕ್ಷೆ ದೀಪಾ ನಾಗನೂರ, ತಹಶೀಲ್ದಾರ್‌ ಆಶಪ್ಪ ಪೂಜಾರ, ಪುರಸಭೆ ಅಧ್ಯಕ್ಷ ಚಂದ್ರು ಪವಾರ, ಎಪಿಎಂಸಿ ಅಧ್ಯಕ್ಷ ಹನಮಂತಪ್ಪ ಹದಗಲ್ಲ, ಸದಸ್ಯ ಎನ್‌.ವಿ. ಮೇಟಿ, ತಾಪಂ ಸದಸ್ಯರಾದ ಅನ್ನಪೂರ್ಣ ಹೂಗಾರ, ಪಾರ್ವತಿ ಸೋಮಾಪುರ, ಶಂಕ್ರವ್ವ ಮುದ್ದನಗೌಡ್ರ, ಈರವ್ವ ಜೋಗಿ ಪಾಲ್ಗೊಂಡಿದ್ದರು.

ನರಗುಂದ ಮತಕ್ಷೇತ್ರ ವ್ಯಾಪ್ತಿಯ ನರಗುಂದ, ಗದಗ, ರೋಣ ತಾಲೂಕುಗಳ ಎಲ್ಲ ಇಲಾಖಾ ಅಧಿಕಾರಿಗಳು, ಪಿಡಿಒಗಳು ಪಾಲ್ಗೊಂಡಿದ್ದರು.

ಅಂಗನವಾಡಿ ಕೇಂದ್ರಗಳ ಅವ್ಯವಸ್ಥೆಗೆ ಆಕ್ರೋಶ
ಅಂಗನವಾಡಿ ಕೇಂದ್ರಗಳ ಅವ್ಯವಸ್ಥೆ, ಮಕ್ಕಳ ಹಾಜರಾತಿ, ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ ಹಾಗೂ ಮೇಲ್ವಿಚಾರಕರ ಕಾರ್ಯವೈಖರಿ ಬಗ್ಗೆ ಗಂಭೀರ ಚರ್ಚೆ ನಡೆಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಜಿ ಸಚಿವರೂ ಆದ ಶಾಸಕ ಸಿ.ಸಿ.ಪಾಟೀಲ, ಮಹಿಳಾ ಇಲಾಖೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು. ಕೆಡಿಪಿ ಸಭೆಯಲ್ಲಿ ಮಹಿಳಾ ಇಲಾಖೆ ಬಗ್ಗೆ ಸುದೀರ್ಘ‌ ಚರ್ಚೆ ನಡೆಸಿದ ಶಾಸಕರು, ಮತಕ್ಷೇತ್ರದ ಗದಗ ತಾಲೂಕಿನ ಹಳ್ಳಿಯಲ್ಲಿ ಅಂಗನವಾಡಿ ಕೇಂದ್ರಗಳ ಕಟ್ಟಡಕ್ಕೆ ಮೀಸಲಾದ ಶಾಸಕರ ನಿಧಿ ಬಳಕೆ ಕುರಿತಂತೆ ಗದಗ ಪ್ರಭಾರ ಸಿಡಿಪಿಒ ಗೊಂದಲದ ಹೇಳಿಕೆಗೆ ಆಕ್ರೋಶಗೊಂಡು ಸ್ಥಳದಲ್ಲಿದ್ದ ಮಹಿಳಾ ಇಲಾಖೆ ಉಪ ನಿರ್ದೇಶಕ ರಾಮಕೃಷ್ಣ ಪಡಗಣ್ಣವರ ಅವರನ್ನೇ ತರಾಟೆಗೆ ತೆಗೆದುಕೊಂಡರು. ಗದಗ ತಾಲೂಕಿನಲ್ಲಿ ಹಿಂದಿನ ಅವಧಿ ಶಾಸಕರ ನಿಧಿ 12 ಲಕ್ಷ ರೂ.ಈವರೆಗೆ ಬಳಕೆಯಾಗಿಲ್ಲ. ಕಟ್ಟಡಕ್ಕೆ ಸೂಕ್ತ ನಿವೇಶನ ಬಗ್ಗೆ ಅಸಮರ್ಪಕ ಮಾಹಿತಿ ನೀಡಿದ ಗದಗ ತಾಲೂಕು ಪ್ರಭಾರ ಸಿಡಿಪಿಒ ಮೃತ್ಯುಂಜಯ ಎಂಬುವರನ್ನು ಶಾಸಕರು ತೀವ್ರ ತರಾಟೆಗೆ ತೆಗೆದುಕೊಂಡರು. ಈ ವೇಳೆ ತಾಲೂಕು ಮಟ್ಟದ ಅಧಿಕಾರಿಗಳ ಸಾಲಿನಲ್ಲಿ ಕುಳಿತಿದ್ದ ಜಿಲ್ಲಾ ಉಪ ನಿರ್ದೇಶಕ ರಾಮಕೃಷ್ಣ ಪಡಗಣ್ಣವರ ಅವರನ್ನು ವೇದಿಕೆಗೆ ಕರೆದು ತರಾಟೆ ತೆಗೆದುಕೊಂಡು ಕೂಡಲೇ ಗದಗ ಪ್ರಭಾರ ಸಿಡಿಪಿಒ ಅವರನ್ನು ಬದಲಿಸಿ ಎಂದು ತಾಕೀತು ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next