ಕೋಲ್ಕತಾ: ನಾರದ ಹಗರಣ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ನ ನಾಲ್ವರು ಮುಖಂಡರಿಗೆ ಸಿಬಿಐ ವಿಶೇಷ ಕೋರ್ಟ್ ಸೋಮವಾರ(ಮೇ 17) ಸಂಜೆ ನೀಡಿದ್ದ ಜಾಮೀನಿಗೆ ಕೋಲ್ಕತಾ ಹೈಕೋರ್ಟ್ ತಡೆ ನೀಡಿರುವ ಘಟನೆ ನಡೆದಿದೆ.
ಇದನ್ನೂ ಓದಿ:ಭಾರತ: ಕಳೆದ 24ಗಂಟೆಗಳಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ ಇಳಿಕೆ, ಸಾವಿನ ಪ್ರಮಾಣ ಹೆಚ್ಚಳ
ನಾರದ ಸ್ಟಿಂಗ್ ಪ್ರಕರಣದಲ್ಲಿ ಸಿಬಿಐ ತೃಣಮೂಲ ಕಾಂಗ್ರೆಸ್ ನ ನಾಲ್ವರು ಮುಖಂಡರನ್ನು ಬಂಧಿಸಿತ್ತು. ನಂತರ ಸಿಬಿಐ ವಿಶೇಷ ಕೋರ್ಟ್ ನಾಲ್ವರಿಗೂ ಜಾಮೀನು ನೀಡಿತ್ತು. ಆದರೆ ಹೊಸ ಬೆಳವಣಿಗೆಯಲ್ಲಿ ಸಿಬಿಐ ಕೋರ್ಟ್ ನ ಜಾಮೀನು ಆದೇಶಕ್ಕೆ ಕೋಲ್ಕತಾ ಹೈಕೋರ್ಟ್ ತಡೆ ನೀಡಿದ್ದು, ಇದರಿಂದ ಎಲ್ಲಾ ಬಂಧಿತ ಆರೋಪಿಗಳು ಮೇ 19ರವರೆಗೆ ನ್ಯಾಯಾಂಗ ಬಂಧನದಲ್ಲಿ ಇರಬೇಕಾಗಿದೆ ಎಂದು ವರದಿ ತಿಳಿಸಿದೆ.
ಜಾಮೀನು ಆದೇಶವನ್ನು ಬಂಕ್ಷಾಲ್ ನ್ಯಾಯಾಲಯ ಅಂಗೀಕರಿಸಿದ್ದು, ನಂತರ ಸಿಬಿಐ ಈ ಆದೇಶವನ್ನು ಕೋಲ್ಕತಾ ಹೈಕೋರ್ಟ್ ನಲ್ಲಿ ಪ್ರಶ್ನಿಸಿತ್ತು. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರಾಜಯಗೊಂಡಿರುವುದಕ್ಕೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಿಬಿಐಯನ್ನು ರಾಜಕೀಯದ ಹಗೆತನ ಸಾಧಿಸಲು ಬಳಸಿಕೊಳ್ಳುತ್ತಿದೆ ಎಂದು ಟಿಎಂಸಿ ಆರೋಪಿಸಿದೆ.
2014ರಲ್ಲಿ ನಾರದ ನ್ಯೂಸ್ ಚಾನೆಲ್ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಟಿಎಂಸಿಯ ಮುಖಂಡರು ಲಂಚ ಸ್ವೀಕರಿಸಿರುವುದು ಬಯಲಾಗಿತ್ತು. ಈ ಪ್ರಕರಣವನ್ನು ಬಳಿಕ ಹೈಕೋರ್ಟ್ ಸಿಬಿಐಗೆ ಒಪ್ಪಿಸಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ(ಮೇ 17) ಸಿಬಿಐ ಟಿಎಂಸಿ ನಾಲ್ವರು ಮುಖಂಡರನ್ನು ಬಂಧಿಸಿತ್ತು.