Advertisement

ಜಪಾನ್‌ ಟೆನಿಸ್‌ ತಾರೆ ಒಸಾಕಾ ನಿರ್ಗಮನ

10:09 PM Jul 27, 2021 | Team Udayavani |

ಟೋಕಿಯೋ : ವಿಶ್ವ ನಂ.2 ಮಹಿಳಾ ಟೆನಿಸ್‌ ಆಟಗಾರ್ತಿ ಆತಿಥೇಯ ಜಪಾನಿನ ನವೋಮಿ ಒಸಾಕಾ ಆಘಾತಕಾರಿ ಸೋಲನುಭವಿಸಿದ್ದಾರೆ. ಈ ಬಾರಿ ಒಲಿಂಪಿಕ್ಸ್‌ ಮಹಿಳಾ ಸಿಂಗಲ್ಸ್‌ನಲ್ಲಿ ಒಸಾಕಾ ಚಿನ್ನವನ್ನು ಗೆದ್ದೇ ಗೆಲ್ಲುತ್ತಾರೆಂದು ಊಹಿಸಲಾಗಿತ್ತು. ಆದರೆ ಎಲ್ಲ ಲೆಕ್ಕಾಚಾರಗಳೂ ತಲೆಕೆಳಗಾಗಿವೆ.

Advertisement

ಮೂರನೇ ಸುತ್ತಿನಲ್ಲಿ ಅವರು ಚೆಕ್‌ ಗಣರಾಜ್ಯದ ಮರ್ಕೆಟ ವಾಂಡ್ರೊಸೊವಾ ವಿರುದ್ದ 6-1, 6-4ರಿಂದ ಸೋಲನುಭವಿಸಿದರು. ವಾಂಡ್ರೊಸೊವಾ ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲ್ಯಾಮ್‌ನಲ್ಲಿ ಫೈನಲ್‌ಗೇರಿದ್ದರು ಎನ್ನುವುದನ್ನು ಇಲ್ಲಿ ಗಮನಿಸಬೇಕು. ಜಪಾನ್‌ನಲ್ಲಿ ಹುಟ್ಟಿ, ಅಮೆರಿಕದಲ್ಲಿ ಬೆಳೆದ ಒಸಾಕಾ ಈ ಪಂದ್ಯದಲ್ಲಿ ತಿಣುಕಾಡಿದರು. ಅವರ ಸಹಜ ಆಟ ಇಲ್ಲಿ ಕಂಡು ಬರಲಿಲ್ಲ. ತನ್ನದೇ ನೆಲದಲ್ಲಿ, ಅದೂ ಒಲಿಂಪಿಕ್ಸ್‌ನಲ್ಲಿ ಆಡಿದ ಪರಿಣಾಮ ಒಸಾಕಾ ಒತ್ತಡಕ್ಕೆ ಸಿಲುಕಿದರು ಎಂದು ಗೆದ್ದ ವಾಂಡ್ರೊಸೊವಾ ಹೇಳಿದ್ದು ಪರಿಸ್ಥಿತಿಯ ಸ್ಪಷ್ಟ ಚಿತ್ರಣವಿದ್ದಂತಿತ್ತು.

ಟೋಕ್ಯೊ ಒಲಿಂಪಿಕ್ಸ್‌ ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾಜ್ಯೋತಿಯನ್ನು ಬೆಳಗುವ ಹೊಣೆ ಹೊತ್ತಿದ್ದ ಒಸಾಕಾ ಸೋತಿದ್ದು ಇಡೀ ಜಪಾನೀಯರಿಗೆ ನಿರಾಶೆ ಮೂಡಿಸಿದೆ. ಜಪಾನ್‌ನಲ್ಲಿ ಆಕೆ ಸೂಪರ್‌ ಸ್ಟಾರ್‌ ಎನ್ನುವುದನ್ನು ಗಮನಿಸಬೇಕು. ಪಂದ್ಯದಲ್ಲಿ ಸೋತ ಬಳಿಕ, ಒಸಾಕಾ ಮೈದಾನದಿಂದ ನೇರವಾಗಿ ಹೊರ ನಡೆದರು, ಮಾಧ್ಯಮದವರಿಗೂ ಪ್ರತಿಕ್ರಿಯೆ ನೀಡಲಿಲ್ಲ. ಇತ್ತೀಚೆಗೆ ಒಸಾಕಾ ಮಾಧ್ಯಮದವರನ್ನು ದೂರವಿಟ್ಟಿದ್ದಾರೆ. ವಿಂಬಲ್ಡನ್‌ನಲ್ಲೂ ಅವರು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡದೇ, ಕೂಟದಿಂದಲೇ ಹೊರ ನಡೆದಿದ್ದರು, ಆಗದು ವಿವಾದವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next