Advertisement

ನಂತೂರು ಮೇಲ್ಸೇತುವೆ ಕಾಮಗಾರಿಗೆ ಒತ್ತಾಯ

12:03 PM Dec 29, 2017 | |

ನಂತೂರು: ಇಲ್ಲಿನ ಜಂಕ್ಷನ್‌ ನಲ್ಲಿ ದಿನದಿಂದ ದಿನಕ್ಕೆ ಅಪಘಾತಗಳು ಹೆಚ್ಚಾಗುತ್ತಿದ್ದು, ಜಿಲ್ಲಾಡಳಿತ ಕೂಡಲೇ ಮೇಲ್ಸೇತುವೆ ಕಾಮಗಾರಿಯನ್ನು ಆರಂಭಿಸಬೇಕು ಎಂದು ಪ್ರಜಾವಿಕಾಸ ಸೇವಾ ಟ್ರಸ್ಟ್‌ನ ಧರ್ಮೇಂದ್ರ ಒತ್ತಾಯಿಸಿದ್ದಾರೆ. ಪ್ರಜಾವಿಕಾಸ ಸೇವಾ ಟ್ರಸ್ಟ್‌ ಸಹಿತ ವಿವಿಧ ಸಂಘಟನೆಗಳ ಒಕ್ಕೂಟದಿಂದ ನಂತೂರು ಜಂಕ್ಷನ್‌ ಮೇಲ್ಸೇತುವೆ ಕಾಮಗಾರಿಗೆ ಒತ್ತಾಯಿಸಿ ನಂತೂರು ವೃತ್ತದಲ್ಲಿ ಗುರುವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

Advertisement

ನಗರದಲ್ಲಿ ಜನಸಂದಣಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕೂಡುರಸ್ತೆಗಳ ಸಂಚಾರವನ್ನು ನಿಭಾಯಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಇದಕ್ಕೆ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಕೆಲವೊಂದು ಕಡೆ ರಸ್ತೆ ವಿಸ್ತರಣೆ, ಮೇಲ್ಸೇತುವೆ, ಅಂಡರ್‌ ಪಾಸ್‌ನಂತಹ ಅಗತ್ಯವನ್ನು ಮನಗಂಡು ನಂತೂರು, ಬಸವಣ್ಣ ವೃತ್ತಗಳಲ್ಲಿ ಸೂಕ್ತ ವ್ಯವಸ್ಥೆಯನ್ನು ನೀಡಲು ಶಾಸಕ, ಸಂಸದರು ವಿಳಂಬ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ದೂರಿದರು.

ಕಾಲಹರಣ: ಆರೋಪ
ಆಮ್‌ ಆದ್ಮಿ ಪಕ್ಷದ ಸಂಚಾಲಕ ರಾಜೇಂದ್ರ ಮಾತನಾಡಿ, ನಂತೂರು ವೃತ್ತದ ಅಪಾಯಕಾರಿಯಾಗಿ ಮಾರ್ಪಾಡಾಗುತ್ತಿದೆ. ಜಿಲ್ಲಾಡಳಿತಕ್ಕೆ 2004ರಿಂದಲೂ ಮೇಲ್ಸೇತುವೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದ್ದು ,ಕಾಮಗಾರಿ ನಡೆಸಲು ಸರಕಾರ ಕಾಲಹರಣ ಮಾಡುತ್ತಿದೆ ಎಂದು ತಿಳಿಸಿದರು. ನಂತೂರು ವೃತ್ತ ಪಕ್ಕದಲ್ಲಿಯೇ ಇರುವ ಬಸ್‌ ನಿಲ್ದಾಣವನ್ನು ಸ್ಥಳಾಂತರ ಮಾಡಿ ಫುಟ್‌ಪಾತ್‌ ನಿರ್ಮಾಣ ಮಾಡುತ್ತೇವೆ ಎಂದು ಮೇಯರ್‌ ಕವಿತಾ ಸನಿತ್‌ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದು, ಇದರಿಂದ ಸಮಸ್ಯೆ ಬಗೆಹರಿಯಲು ಸಾಧ್ಯವಿಲ್ಲ ಎಂದರು.

ನಂತೂರು ವೃತ್ತದ ಮೂಲಕ ಕೆಪಿಟಿ ಕಡೆಗೆ ತೆರಳುವ ಬಸ್‌ಗಳ ನಿಲ್ದಾಣವನ್ನು ಇಲ್ಲೇ ಪಕ್ಕದಲ್ಲಿರುವ ಉಲ್ಲಾಸ್‌ ಬಾರ್‌ ಪಕ್ಕಕ್ಕೆ ಸ್ಥಳಾಂತರಿಸಲಿ, ಅಲ್ಲದೆ ವೃತ್ತದ ಬಳಿಯೇ ಎರಡು ಬದಿಯಲ್ಲಿ ರಿಕ್ಷಾ ನಿಲ್ದಾಣವಿದ್ದು, ಒಂದು ಸರದಿಯ ರಿಕ್ಷಾಗಳು ಕೆಪಿಟಿ ಕಡೆಗೆ ಮಾತ್ರ ತೆರಳಲಿ ಮತ್ತೂಂದು ಸಾಲಿನ ರಿಕ್ಷಾಗಳು ಕದ್ರಿ ಮಾರ್ಗದಲ್ಲಿ ತೆರಳಲಿ, ಹೀಗಿದ್ದಾಗ ಅಪಘಾತ ಪ್ರಮಾಣ ಕಡಿಮೆಯಾಗಬಹುದು ಎಂದು ಸಲಹೆ ನೀಡಿದರು. ಇದೇ ವೇಳೆ ವಿಶ್ವನಾಥ್‌ ಕೆ.ಬಿ., ಪದ್ಮನಾಭ ಉಳ್ಳಾಲ್‌, ಮೊಹಮ್ಮದ್‌ ಮೊಹಿಸಿನ್‌, ಅಜಯ್‌ ಡಿ’ಸಿಲ್ವ, ರಾಜೇಂದ್ರ ಕುಮಾರ್‌, ಲೋಕೇಶ್‌ ಉಳ್ಳಾಲ್‌, ನಿತಿನ್‌ ಪಾಂಡೇಶ್ವರ್‌ ಸಹಿತ ವಿವಿಧ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next