Advertisement

Nanthoor, ಕೆಪಿಟಿ ಫ್ಲೈ ಓವರ್‌ ಟೆಂಡರ್‌ ರದ್ದು : ಗುತ್ತಿಗೆದಾರರಿಗೆ ನಳಿನ್‌ ಎಚ್ಚರಿಕೆ

11:37 PM Feb 14, 2024 | Team Udayavani |

ಮಂಗಳೂರು: ಮಂಗಳೂರಿನ ನಂತೂರು ಮತ್ತು ಕೆಪಿಟಿ ಫ್ಲೈ ಓವರ್‌ ಯೋಜನೆಗಳಿಗೆ ಟೆಂಡರ್‌ ಆಗಿ ಒಂದೂವರೆ ವರ್ಷ ಕಳೆದಿದ್ದು, ಭೂಸ್ವಾಧೀನದಂತಹ ಕೆಲಸಗಳನ್ನು ಪೂರ್ಣಗೊಳಿಸಬೇಕು. ಇಲ್ಲವಾದರೆ ಗುತ್ತಿಗೆದಾರರು ಟೆಂಡರ್‌ ರದ್ದುಗೊಳಿಸುವ ಸಾಧ್ಯತೆ ಇದೆ; ಅಲ್ಲದೆ ಕಾಮಗಾರಿ ವಿಳಂಬವಾದರೆ ಜನ ನಮ್ಮನ್ನು ದೂರುತ್ತಾರೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ದ.ಕ. ಜಿಲ್ಲಾ ಪಂಚಾಯತ್‌ನಲ್ಲಿ ಬುಧವಾರ ಜರಗಿದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೆಪಿಟಿ ಪ್ರತಿನಿಧಿಗಳು ಮಾತನಾಡಿ, ಜಮೀನು ಬಿಟ್ಟುಕೊಡುವುದಕ್ಕೆ ಯಾವುದೇ ಆಕ್ಷೇಪವಿಲ್ಲ. ಆದರೆ ಈ ವಿಚಾರದಲ್ಲಿ ಅನುಮತಿ ಕೋರಿ ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಪತ್ರ ಬರೆಯಲಾಗಿದೆ ಎಂದರು. ಕ್ಷಿಪ್ರವಾಗಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಜಿಲ್ಲಾಧಿಕಾರಿ ಮುಲ್ಲೆ$ç ಮುಗಿಲನ್‌, ಭೂಸ್ವಾಧೀನ ಹೊರತುಪಡಿಸಿ ಕಂಬ, ಪೈಪ್‌ಲೈನ್‌ ತೆರವು ಇತ್ಯಾದಿ ಕೆಲಸಗಳನ್ನು ಆದಷ್ಟು ಬೇಗ ಮುಗಿಸುವಂತೆ ತಿಳಿಸಿದರು.

ಎರಡು ಪ್ಯಾಕೇಜ್‌ಗಳಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿಯ ಅಡ್ಡಹೊಳೆ- ಬಿ.ಸಿ. ರೋಡ್‌ ಭಾಗ ಬಹುತೇಕ ಎಪ್ರಿಲ್‌ ಅಂತ್ಯದ ವೇಳೆಗೆ ಪೂರ್ಣಗೊಳ್ಳಬಹುದು. ಆದರೆ ಕಲ್ಲಡ್ಕ ಫ್ಲೈ ಓವರ್‌ ಕೆಲಸ ನಿಧಾನವಾಗಿ ಆಗುತ್ತಿರುವ ಕಾರಣ ಎಲ್ಲ ಕಾಮಗಾರಿ ಪೂರ್ತಿಯಾಗುವಾಗ 2025ರ ಫೆಬ್ರವರಿ ಆಗಬಹುದು ಎಂದು ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಅಬ್ದುಲ್ಲ ಜಾವೇದ್‌ ಅಜ್ಮಿ ತಿಳಿಸಿದರು.

ಸಾಣೂರು- ಕುಲಶೇಖರ ರಾ. ಹೆದ್ದಾರಿ ಚತುಷ್ಪಥಕ್ಕೆ ಸಂಬಂಧಿಸಿ ಭೂಸ್ವಾಧೀನಕ್ಕಿದ್ದ ಅಡೆತಡೆ ನಿವಾರಣೆ ಯಾಗಿದ್ದು, ಕಾಮಗಾರಿ ನಡೆಯುತ್ತಿದೆ ಎಂದು ವಿಶೇಷ ಭೂ ಸ್ವಾಧೀನಾಧಿಕಾರಿ ಮೊಹಮ್ಮದ್‌ ಇಸಾಕ್‌ ತಿಳಿಸಿದರು.

Advertisement

ಧರ್ಮಸ್ಥಳ ಉಜಿರೆ ರಸ್ತೆ ಅಭಿವೃದ್ಧಿ
ಚಾರ್ಮಾಡಿ ಘಾಟಿಯಿಂದ ಎಸ್‌.ಕೆ. ಬಾರ್ಡರ್‌ ವರೆಗಿನ 10.20 ಕಿ.ಮೀ. ಉದ್ದದ ರಸ್ತೆಯನ್ನು 313 ಕೋಟಿ ರೂ. ವೆಚ್ಚದಲ್ಲಿ ದ್ವಿ ಪಥದಲ್ಲಿ ಅಗಲಗೊಳಿಸಲು ಶೀಘ್ರದಲ್ಲೇ ಟೆಂಡರ್‌ ಕರೆಯಲಾಗುವುದು. ಧರ್ಮಸ್ಥಳ-ಉಜಿರೆ ಪೆರಿಯಶಾಂತಿ ವರೆಗಿನ 30 ಕಿ.ಮೀ. ರಸ್ತೆಯನ್ನು 613 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಇದು ಅಭಿವೃದ್ಧಿಗೊಂಡ ಬಳಿಕ ರಸ್ತೆಯ ಉದ್ದ 28.5 ಕಿ.ಮೀ.ಗಿಳಿಯಲಿದೆ. ಉಜಿರೆಯಿಂದ ಧರ್ಮಸ್ಥಳದವರೆಗಿನ ರಸ್ತೆಯನ್ನು ಚತುಷ್ಪಥ ಮಾಡಲಾ ಗುವುದು. ಧರ್ಮಸ್ಥಳದಿಂದ ಪೆರಿಯ ಶಾಂತಿವರೆಗಿನ ರಸ್ತೆಯು ಪೇವ್‌ ಲೇನ್‌ನೊಂದಿಗೆ ದ್ವಿಪಥವಾಗಿ ಅಭಿವೃದ್ಧಿಯಾಗಲಿದೆ. ರಸ್ತೆಯನ್ನು ಹೈಬ್ರಿಡ್‌ ಮಾದರಿಯಲ್ಲಿ ಅಭಿವೃದ್ಧಿ ಮಾಡಲಾಗುವುದು.

ರೈಲ್ವೇ ದಾರಿ ತೆರವಿಗೆ ಸೂಚನೆ
ಸ್ಥಳೀಯ ಆಡಳಿತಕ್ಕೆ ಯಾವುದೇ ಮಾಹಿತಿ ನೀಡದೆ ದಕ್ಷಿಣ ರೈಲ್ವೇಯವರು ತೊಕ್ಕೊಟ್ಟು, ಉಚ್ಚಿಲ ಸಹಿತ ಹಲವು ಕಡೆ ರೈಲು ಹಳಿ ದಾಟಿ ಹೋಗುವಂತಹ ಸ್ಥಳೀಯರ ದಾರಿಗಳನ್ನು ಮುಚ್ಚಿದ್ದು, ಇದನ್ನು ಕೂಡಲೇ ತೆರವು ಮಾಡಬೇಕು ಎಂದು ಸಂಸದರು ಸೂಚಿಸಿದರು.

ಮಳವೂರಿನಿಂದ ನೀರು ಕೊಡಿ
ಜಲಜೀವನ್‌ಮಿಷನ್‌ ಅಡಿ ಅಡ್ಯಾರು ಗ್ರಾಮದಲ್ಲಿ ಮಂಗಳೂರಿಗೆ ಬರುವ ನೀರನ್ನೇ ಪಡೆಯಲಾಗುತ್ತಿದೆ. ಇದರಿಂದ ನಗರದ ನೀರು ಪೂರೈಕೆಗೆ ಸಮಸ್ಯೆಯಾಗಿದೆ ಎಂದು ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಆಕ್ಷೇಪಿಸಿದರು. ಇದಕ್ಕೆ ಬದಲಾಗಿ ಮಳವೂರು ಡ್ಯಾಂನೀರನ್ನು ಮಂಗಳೂರಿಗೆ ನೀಡುವುದು ಸಾಧ್ಯವೇ ಎಂದು ಪರಿಶೀಲಿಸುವಂತೆ ಸಂಸದರು ಗ್ರಾಮೀಣ ಕುಡಿಯುವ ನೀರು ಪೂರೈಕೆ ಅಧಿಕಾರಿಗೆ ಸೂಚಿಸಿದರು.

ಬಿಎಸ್‌ಎನ್‌ಎಲ್‌ಗೆ ಸೂಚನೆ
ಕುಗ್ರಾಮಗಳಲ್ಲಿ ವಿದ್ಯುತ್‌ ನಿಲುಗಡೆಯಾಗುವ ಸಂದರ್ಭ ಬಿಎಸ್‌ಎನ್‌ಎಲ್‌ ಟವರ್‌ಗಳಲ್ಲಿ ನೆಟ್‌ವರ್ಕ್‌ ಸಮಸ್ಯೆ ಉಂಟಾಗುತ್ತಿದೆ. ಕೊಲ್ಲಮೊಗ್ರು ಗ್ರಾಮದಲ್ಲೂ ಈ ಸಮಸ್ಯೆ ಇದೆ. ಸೂಕ್ತ ಕ್ರಮ ವಹಿಸಿ ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ತಿಳಿಸಿದರು. ದ.ಕ. ಟೆಲಿಕಾಂ ಜಿಲ್ಲೆ ಗೆ 196 ಹೊಸ ಬ್ಯಾಟರಿಗಳು ಬಂದಿದ್ದು, ಈಗಾಗಲೇ ಕುಗ್ರಾಮಗಳ ಟವರ್‌ಗಳಿಗೆ ಅಳವಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಜಿ.ಪಂ. ಸಿಇಒ ಡಾ| ಆನಂದ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ ಆ್ಯಂಟನಿ ಎಸ್‌. ಮರಿಯಪ್ಪ, ಮನಪಾ ಆಯುಕ್ತ ಆನಂದ್‌ ಉಪಸ್ಥಿತರಿದ್ದರು.

ಬಂದರು ಭೂಮಿ ಬಾಡಿಗೆಗೆ:
ಡಿಸಿಯಿಂದ ವಿಚಾರಣೆಗೆ ಆದೇಶ
ಬಂದರು ಇಲಾಖೆಗೆ ಸೇರಿದ ನೇತ್ರಾವತಿ ನದಿ ಬದಿಯ ಜಾಗವನ್ನು ಲೀಸ್‌ ಮುಗಿದರೂ ಸಂಬಂಧಪಟ್ಟವರಿಂದ ಹಿಂಪಡೆಯದೆ ಬಾಡಿಗೆಗೆ ನೀಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಂಸದರು, ಈ ಬಗ್ಗೆ ಸಮಗ್ರ ವಿಚಾರಣೆ ನಡೆಸಿ ಕೇಸ್‌ ದಾಖಲಿಸುವಂತೆ ಜಿಲ್ಲಾಧಿಕಾರಿಯವರಿಗೆ ಸೂಚಿಸಿದರು.

ಸ್ಮಾರ್ಟ್‌ಸಿಟಿಯ ವಾಟರ್‌ಫ್ರಂಟ್‌ ಕಾಮಗಾರಿಗಳನ್ನು ನಿರ್ವಹಿಸುವುದಕ್ಕೆ ಕೆಲವು ಖಾಸಗಿಯವರು ನ್ಯಾಯಾಲಯಕ್ಕೆ ತೆರಳಿ ಅಡ್ಡಿಪಡಿಸುತ್ತಿದ್ದಾರೆ. ವಾಸ್ತವವಾಗಿ ಲೀಸ್‌ ಮುಗಿದಿದ್ದರೂ ಕೆಲವು ಅಧಿಕಾರಿಗಳು ಬಾಡಿಗೆಗೆ ಜಾಗ ನೀಡಿರುವುದು ಕಂಡುಬಂದಿದೆ, ಈ ಬಗ್ಗೆ ಸೂಕ್ತ ಕ್ರಮ ಜರಗಿಸಬೇಕು ಎಂದು ತಿಳಿಸಿದರು. ಬಂದರು ಇಲಾಖೆಯ ಹಿರಿಯ ಅಧಿಕಾರಿ ಸಭೆಯಲ್ಲಿ ಹಾಜರಿರಲಿಲ್ಲ. ಈ ಬಗ್ಗೆ ಆಕ್ಷೇಪಿಸಿದ ನಳಿನ್‌, ಅವರು ಯಾಕೆ ಸಭೆಗೆ ಬರುತ್ತಿಲ್ಲ? ಲೀಸ್‌ ಮುಗಿದರೂ ಮತ್ತೆ ಯಾಕೆ ಬಾಡಿಗೆಗೆ ನೀಡಿದ್ದೀರಿ? ನಿಮಗೆಷ್ಟು ಹಣ ಬರುತ್ತದೆ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next