Advertisement

Nanthoor: ಮನೆಯಿಂದ ಮಣ್ಣು ತಂದು ರಸ್ತೆಗುಂಡಿ ಮುಚ್ಚುವ ಹಿರಿಯ!

03:13 PM Jan 10, 2025 | Team Udayavani |

ನಂತೂರು: ರಸ್ತೆ ಹೊಂಡ ಬಿದ್ದಾಗ ಎಲ್ಲರೂ ಆಡಳಿತಕ್ಕೆ ಹಿಡಿಶಾಪ ಹಾಕುತ್ತಾರೆ. ಕೆಲವರು ರೀಲ್ಸ್‌ ಮಾಡುತ್ತಾರೆ. ಆದರೆ, ಇಲ್ಲೊಬ್ಬ ಹಿರಿಯರು ರಸ್ತೆ ಹೊಂಡಗಳಿಂದ ಯಾರಿಗೂ ಅಪಾಯವಾಗಬಾರದು ಎಂಬ ಕಾರಣಕ್ಕಾಗಿ ಸ್ವತಃ ತಾನೇ ಮಣ್ಣು ತಂದು ಮುಚ್ಚುತ್ತಿದ್ದಾರೆ.

Advertisement

ರಾಷ್ಟ್ರೀಯ ಹೆದ್ದಾರಿ 66ರ ಮಂಗಳೂರಿನ ನಂತೂರು ಬಳಿ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಈ ಭಾಗದಲ್ಲಿ ಹೆದ್ದಾರಿಯಲ್ಲಿರುವ ಹೊಂಡಗಳು ವಾಹನ ಸವಾರರಿಗೆ ಭಾರಿ ಸಮಸ್ಯೆ ಉಂಟು ಮಾಡುತ್ತಿವೆ. ಇದನ್ನೆಲ್ಲ ಗಮನಿಸಿದ ಮಂಗಳೂರಿನ ಹಿರಿಯ ನಾಗರಿಕ ಪಾಂಡುರಂಗ ಕಾಮತ್‌ ಅವರು ತಾನೇ ಸ್ವತಃ ರಸ್ತೆ ಹೊಂಡ ಮುಚ್ಚುತ್ತಿದ್ದಾರೆ. ಅದೂ ತನ್ನ ಮನೆಯಿಂದಲೇ ಕಾರಿನಲ್ಲಿ ಮಣ್ಣು ತಂದು ಹೊಂಡಗಳನ್ನು ಮುಚ್ಚುವ ಕೆಲಸ ಮಾಡಿದ್ದಾರೆ.
ಪಾಂಡುರಂಗ ಕಾಮತ್‌ ಅವರು ಕದ್ರಿಯಲ್ಲಿ ಅಂಗಡಿ ವ್ಯಾಪಾರ ಹೊಂದಿದ್ದಾರೆ. ನಿತ್ಯ ನಂತೂರು ರಸ್ತೆಯ ಮೂಲಕ ಸಂಚರಿಸುತ್ತಾರೆ. ದ್ವಿಚಕ್ರ ವಾಹನದಲ್ಲಿ ತೆರಳುವ ವೇಳೆ ಹೊಂಡಗಳು ಅಪಾಯಕಾರಿಯಾಗಿ ಪರಿಣಮಿಸಿದ ತೊಂದರೆ ಅನುಭವಿಸಿ ಸ್ವಂತ ಅನುಭವ ಪಡೆದಿದ್ದಾರೆ. ಈ ಕಾರಣದಿಂದಾಗಿ ಕಾಮತ್‌ ಅವರು ಹೊಂಡಗಳನ್ನು ಮುಚ್ಚುವ ಕೆಲಸ ಮಾಡಿದ್ದಾರೆ.

ರಾತ್ರಿ ಕಾರ್ಯಾಚರಣೆ
ಪಾಂಡುರಂಗ ಕಾಮತ್‌ ಅವರು ಅಂಗಡಿ ಮುಚ್ಚಿ ಮನೆಗೆ ಹೋಗು ವಾಗಲೇ ರಾತ್ರಿಯಾಗುತ್ತದೆ. ಮನೆಗೆ ಹೋಗಿ ಅಲ್ಲಿಂದ ಗೋಣಿ ಚೀಲದಲ್ಲಿ ಮಣ್ಣು ತಂದು ರಸ್ತೆಯ ಗುಂಡಿಗಳಿಗೆ ಹಾಕಿ ಮುಚ್ಚುವ ಕೆಲಸ ಮಾಡುತ್ತಿದ್ದಾರೆ. ದ್ವಿಚಕ್ರ ವಾಹನಗಳು ರಸ್ತೆ ಹೊಂಡಗಳಿಗೆ ಬಿದ್ದು ಅಪಘಾತ ಸಂಭವಿಸಬಾರದು ಎಂಬ ನಿಟ್ಟಿಲ್ಲಿ ಅಳಿಲು ಸೇವೆ ಸಲ್ಲಿಸಿದ್ದಾರೆ. ಅವರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ಪೊಲೀಸರೂ ದುರಸ್ತಿ ಮಾಡಿದ್ದರು!
ನಂತೂರು ಸಮೀಪ ಹೆದ್ದಾರಿ ಹಲವು ಬಾರಿ ದುರಸ್ತಿ ಮಾಡಿದ್ದರೂ ಮತ್ತೆ ರಸ್ತೆ ಹದಗೆಡುತ್ತಲೇ ಇದೆ. ಮಳೆಗಾಲದಲ್ಲಿ ಟ್ರಾಫಿಕ್‌ ಪೊಲೀಸರೇ ಸಿಮೆಂಟ್‌ ಮಿಶ್ರಣ ಹಾಕಿ ಇಲ್ಲಿ ರಸ್ತೆ ಹೊಂಡ ಮುಚ್ಚಿದ್ದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಹೆದ್ದಾರಿಯನ್ನು ಸಮರ್ಪಕವಾಗಿ ದುರಸ್ತಿ ಮಾಡುತ್ತಿಲ್ಲ ಎನ್ನುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರ ಪತ್ನಿ, ನನ್ನ ಪತಿಗೆ ಮೊದಲಿನಿಂದಲೂ ಸಮಾಜ ಸೇವೆಯಲ್ಲಿ ಹೆಚ್ಚು ಆಸಕ್ತಿ ಇದೆ. ಮನೆ ಸುತ್ತಮುತ್ತ ರಸ್ತೆಯಲ್ಲಿರುವ ಹೊಂಡಗಳನ್ನು ಮುಚ್ಚುವ ಕೆಲಸ ಮಾಡುತ್ತಾರೆ. ರಸ್ತೆ ಅಂಚಿನಲ್ಲಿರುವ ಹೊಂಡಗಳಿಗೂ ಮಣ್ಣು ಹಾಕುವ ಕೆಲಸ ಮಾಡುತ್ತಾ ತಮ್ಮ ಪಾಡಿಗೆ ಇರುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

Advertisement

ರಸ್ತೆಯಲ್ಲಿರುವ ಹೊಂಡಗ ಳಿಂದಾಗಿ ದ್ವಿಚಕ್ರ ವಾಹನ ಸವಾರರು ಪರದಾಡುತ್ತಾರೆ. ಅದರಲ್ಲೂ ಮಹಿಳೆಯರು ಹಾಗೂ ಬೆಳಗ್ಗೆ ಹಾಗೂ ಸಂಜೆ ಮಕ್ಕಳನ್ನು ಕರೆದುಕೊಂಡು ಶಾಲೆಗೆ ತೆರಳುವ ದ್ವಿಚಕ್ರ ವಾಹನ ಸವಾರರು ಸಂಕಷ್ಟ ಅನುಭವಿಸುವುದನ್ನು ಕಂಡಿದ್ದೆ. ಅವರ ನೋವು ಕಂಡು ರಾತ್ರಿ ವೇಳೆ ಹೊಂಡ ಮುಚ್ಚುವ ಕೆಲಸಕ್ಕೆ ಮುಂದಾದೆ.
-ಪಾಂಡುರಂಗ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next