Advertisement

ಕೇಂದ್ರದ ಸಹಯೋಗದಲ್ಲಿ ಬಹುನಿರೀಕ್ಷಿತ ನ್ಯಾನೊ ಟೆಕ್‌ ಪಾರ್ಕ್‌; ಸಿಎಂ

09:56 AM Mar 03, 2020 | sudhir |

ಬೆಂಗಳೂರು: ಕೇಂದ್ರ ಸರ್ಕಾರದ ಸಹಯೋಗದಲ್ಲಿ ಬಹುನಿರೀಕ್ಷಿತ ನ್ಯಾನೊ ಟೆಕ್‌ ಪಾರ್ಕ್‌ ನಿರ್ಮಿಸಲು ಸರ್ಕಾರ ಉದ್ದೇಶಿಸಿದ್ದು, ಜತೆಗೆ ಉದಯೋನ್ಮುಖ ಕ್ಷೇತ್ರದ ಬೆಳವಣಿಗೆಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು.

Advertisement

ನಗರದ ಹೋಟೆಲ್‌ ಲಲಿತ್‌ ಅಶೋಕದಲ್ಲಿ ಹಮ್ಮಿಕೊಂಡ ಮೂರು ದಿನಗಳ “ಬೆಂಗಳೂರು ಇಂಡಿಯಾ ನ್ಯಾನೊ-2020’ರ 11ನೇ ಆವೃತ್ತಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ನ್ಯಾನೊ ತಂತ್ರಜ್ಞಾನ ಅಭಿವೃದ್ಧಿ ಸರ್ಕಾರದ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಮೂಲಸೌಕರ್ಯ, ಕೌಶಲ್ಯಯುತ ಮಾನವ ಸಂಪನ್ಮೂಲ ಪೂರೈಕೆ ಒಳಗೊಂಡಂತೆ ರಾಜ್ಯದಲ್ಲಿ ಈ ಕ್ಷೇತ್ರದ ಉತ್ತೇಜನಕ್ಕೆ ಪೂರಕ ವಾತಾವರಣ ನಿರ್ಮಿಸಲಾಗುವುದು. ಇದರೊಂದಿಗೆ “ನ್ಯಾನೊ ರಾಜಧಾನಿ’ಯನ್ನಾಗಿ ರೂಪಿಸಲಾಗುವುದು ಎಂದು ಹೇಳಿದರು.

ಆಹಾರ, ಕೃಷಿ, ಇಂಧನ, ಜಲ ಶುದ್ಧೀಕರಣ, ಆರೋಗ್ಯ, ತ್ಯಾಜ್ಯ ನಿರ್ವಹಣೆ ಸೇರಿದಂತೆ ಮತ್ತಿತರ ಕ್ಷೇತ್ರಗಳಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ನ್ಯಾನೊ ತಂತ್ರಜ್ಞಾನದಲ್ಲಿ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ಹೆಚ್ಚು ಆವಿಷ್ಕಾರ ನಡೆಸುವ ಅಗತ್ಯ ಇದೆ ಎಂದ ಅವರು, ದೇಶದ ಆರ್ಥಿಕತೆಯಲ್ಲಿ 2019-20ನೇ ಸಾಲಿಗೆ ಕೈಗಾರಿಕಾ ಕ್ಷೇತ್ರದಲ್ಲಿ ಕರ್ನಾಟಕದ ಪಾಲು 15.80 ಲಕ್ಷ ಕೋಟಿ ರೂ. ಆಗಿದೆ. ಅತಿ ಹೆಚ್ಚು ಆದಾಯ ತಂದುಕೊಡುತ್ತಿರುವ ನಾಲ್ಕನೇ ರಾಜ್ಯವೂ ಆಗಿದೆ ಎಂದರು.

ದೇವನಹಳ್ಳಿ ಬಳಿ ಬರಲಿದೆ ಪಾರ್ಕ್‌?
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಬಳ್ಳಾರಿ ರಸ್ತೆಯಲ್ಲಿ ಈ ಪಾರ್ಕ್‌ಗೆ ಜಾಗ ಗುರುತಿಸಲಾಗಿದೆ ಎಂದೂ ಹೇಳಿದರು. ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಮೂಲಗಳ ಪ್ರಕಾರ ದೇವನಹಳ್ಳಿ ಬಳಿ 15 ಎಕರೆ ಜಾಗ ಇದ್ದು, ಅಲ್ಲಿ ಈ ಪಾರ್ಕ್‌ ತಲೆಯೆತ್ತಲಿದೆ.

ಭಾರತ ರತ್ನ ಪುರಸ್ಕೃತ ಖ್ಯಾತ ವಿಜ್ಞಾನಿ ಪ್ರೊ.ಸಿ.ಎನ್‌.ಆರ್‌.ರಾವ್‌ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ನ್ಯಾನೊ ತಂತ್ರಜ್ಞಾನದ ಬಳಕೆ ಹೆಚ್ಚಾಗಬೇಕು. ಯುವ ವಿಜ್ಞಾನಿಗಳು ಈ ಕುರಿತು ಹೆಚ್ಚಿನ ಸಂಶೋಧನೆಗಳ ಮೂಲಕ ವೈದ್ಯಕೀಯ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.

Advertisement

ಸಂಶೋಧನೆ, ವೈದ್ಯಕೀಯ, ಶೈಕ್ಷಣಿಕ ಸೇರಿದಂತೆ ಪ್ರವರ್ಧಮಾನಕ್ಕೆ ಬರುತ್ತಿರುವ ಉದ್ಯಮಗಳ ಅವಕಾಶ ಸೇರಿದಂತೆ ಹಲವು ವಿಚಾರಗಳ ಚರ್ಚೆಗೆ ಈ ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನ ಜಾಗತಿಕ ವೇದಿಕೆಯಾಗಿದೆ. ಈ ಬಾರಿಯ ಸಮ್ಮೇಳನ ಇ-ಮೊಬಿಲಿಟಿ, ಕೃಷಿ, ಶುದ್ಧ ನೀರು, ಪರಿಸರ, ಉತ್ಪಾದನೆಯಲ್ಲಿ ನ್ಯಾನೋ ತಂತ್ರಜ್ಞಾನವನ್ನು ಕೇಂದ್ರೀಕರಿಸಿದೆ ಎಂದರು.

ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮಾತನಾಡಿ, ರಾಜ್ಯ ಸರ್ಕಾರವು ಶೀಘ್ರ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ ಜಾರಿಗೆ ಬರಲಿದೆ.

ಅದರಲ್ಲಿ ಸಂಶೋಧನೆ ಹಾಗೂ ಅಭಿವೃದ್ಧಿಗೆ ಪೂರಕವಾದ ಹಲವಾರು ಅಂಶಗಳು ಇರಲಿವೆ. ನೀತಿ-ನಿರೂಪಣೆಯಲ್ಲಿ ಪ್ರೊ.ಸಿ.ಎನ್‌.ಆರ್‌.ರಾವ್‌ ಮಾರ್ಗದರ್ಶನದ ವಿಜನ್‌ ಗ್ರೂಪ್‌ ನೆರವಾಗಲಿದೆ. ನ್ಯಾನೊ ತಂತ್ರಜ್ಞಾನದ ಹಬ್‌ ಮಾಡಲು ಐಐಎಸ್ಸಿ, ಐಐಟಿ ಸೇರಿದಂತೆ ಹಲವು ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳ ನೆರವು ಪಡೆಯಲಾಗುವುದು ಎಂದರು.

ಇದೇ ವೇಳೆ ನ್ಯಾನೋ ತಂತ್ರಜ್ಞಾನದ ಉತ್ತಮ ಸಂಶೋಧನೆಗಾಗಿ ಐಐಎಸ್ಸಿ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪಿ.ಎಸ್‌. ಅನಿಲ್‌ ಕುಮಾರ್‌ ಅವರಿಗೆ “ಪ್ರೊ.ಸಿ.ಎನ್‌.ಆರ್‌.ರಾವ್‌ ಬೆಂಗಳೂರು ಇಂಡಿಯಾ ನ್ಯಾನೋ ವಿಜ್ಞಾನ ಪ್ರಶಸ್ತಿ 2020′ ಪ್ರದಾನ ಮಾಡಲಾಯಿತು. ಸ್ಟಾನ್‌ಫೋರ್ಡ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರೋಜರ್‌ ಹೋವೆ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ, ಐಐಎಸ್ಸಿ ಬೆಂಗಳೂರಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಅಜಯ್‌ ಕುಮಾರ್‌ ಸೂದ್‌, ಶಾಸಕ ರಿಜ್ವಾನ್‌ ಅರ್ಷದ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next