Advertisement

ಈ ನ್ಯಾನೊ ಫೈಬರ್‌ ಜೈವಿಕ ಗೊಬ್ಬರದ ತೂಕ 5 ಗ್ರಾಂ!

08:58 AM Dec 01, 2019 | mahesh |

ಬೆಂಗಳೂರು: ನೋಡಲು ಅದು ಕೈ ಒರೆಸಿ ಕಸದ ಬುಟ್ಟಿಗೆ ಬಿಸಾಡುವ ಸಣ್ಣ ಟಿಶ್ಯು ಪೇಪರ್‌. ಕೇವಲ ಕಡ್ಡಿಪೊಟ್ಟಣದಲ್ಲಿ ಸುತ್ತಿ ಇಡಬಹುದಾದಷ್ಟು ಗಾತ್ರ ಹಾಗೂ ತೂಕ. ಅದನ್ನು ನೀರಿನಲ್ಲಿ ಬೆರೆಸಿ, ಸಿಂಪಡಿಸಿದರೆ ಸಾಕು. ಇಡೀ ಎಕರೆ ಜಮೀನಿನ ಬೆಳೆ ಉತ್ತಮವಾಗಿ ಬೆಳೆಯುತ್ತದೆ!

Advertisement

ಹೌದು. ಟಿಶ್ಯು ಪೇಪರ್‌ ಮಾದರಿಯ ಅತ್ಯಂತ ಹಗುರವಾದ “ನ್ಯಾನೊ ಫೈಬರ್‌ ಜೈವಿಕ ಗೊಬ್ಬರ’ ಇದು.
ಸಾಮಾನ್ಯವಾಗಿ ರೈತರು ಬೆಳೆ ಇಳುವರಿ ಹೆಚ್ಚಿಸಲು ಒಂದು ಎಕರೆಗೆ ಐದು ಕೆ.ಜಿ. ರಾಸಾಯನಿಕ ಗೊಬ್ಬರ ಸಿಂಪಡಿಸಿದರೆ ಅದರ ಬದಲಿಗೆ 5 ಗ್ರಾಂ ತೂಕದ ಈ ಒಂದು ತುಣುಕು ಹಾಳೆಯನ್ನು ನೀರಿನಲ್ಲಿ ಮಿಶ್ರಣ ಮಾಡಿ, ಸಿಂಪಡಿಸಿದರೆ ಸಾಕು. ವಿಶ್ವದ ಅತೀ ಹಗುರವಾದ ಜೈವಿಕ ಗೊಬ್ಬರ ಇದಾ ಗಿದೆ ಎಂದು ಇದನ್ನು ವಿಶ್ಲೇಷಿಸಲಾಗುತ್ತಿದೆ. ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ನೆಲಗಡಲೆ (ಶೇಂಗಾ) ಮತ್ತು ಟೊಮೇಟೊ ಮೇಲೆ ಇದರ ಪ್ರಯೋಗ ನಡೆಯುತ್ತಿದೆ.

ಈ ಬೆಳೆಗಳಿಗೆ ಪೂರಕವಾದ ಅತೀ ಹೆಚ್ಚು ಸೂಕ್ಷ್ಮಜೀವಿಗಳನ್ನು ನ್ಯಾನೊ ಫೈಬರ್‌ ಜೈವಿಕ ಗೊಬ್ಬರ ಹೊಂದಿದ್ದು, ಅದು ಒಂದು ಗ್ರಾಂ ರಾಸಾಯನಿಕ ಗೊಬ್ಬರದಲ್ಲಿರುವ ಸೂಕ್ಷ್ಮ ಜೀವಿಗಳಿಗಿಂತ ಸಾವಿರ ಪಟ್ಟು ಅಧಿಕ. ಈ ಜೈವಿಕ ಗೊಬ್ಬರದಿಂದ ಇಳುವರಿ ಪ್ರಮಾಣ ಶೇ.20 ರಷ್ಟು ಹೆಚ್ಚಳವಾಗಲಿದೆ.

ಜತೆಗೆ ಬೆಳೆಯ ಗುಣಮಟ್ಟ ಸಾಮಾನ್ಯ ಗೊಬ್ಬರ ಸಿಂಪಡಣೆಯಲ್ಲಿ ಬೆಳೆದ ಬೆಳೆಗಳಿಗಿಂತ ಉತ್ತಮವಾಗಿರುತ್ತದೆ. ಬೆಳೆಗಳ ರೋಗನಿರೋಧಕ ಶಕ್ತಿಯನ್ನು ಇದು ಹೆಚ್ಚಿಸುತ್ತದೆ. ಮದ್ರಾಸ್‌ನ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ ಮದ್ರಾಸ್‌) ಮತ್ತು ಫಿಬ್‌ ಸೊಲ್‌ ಲೈಫ್ ಟೆಕ್ನಾಲಜೀಸ್‌ ಪ್ರೈ.ಲಿ., ಸಂಯುಕ್ತವಾಗಿ ಇದನ್ನು ಅಭಿವೃದ್ಧಿಪಡಿಸಿದೆ.

ಏನಿದರ ಉಪಯೋಗ?
ಸಾರಜನಕ ಸ್ವೀಕರಿಸುವ ಈ ಬ್ಯಾಕ್ಟೀರಿಯಾ ಗಳು, ಫಾಸ್ಪೆಟ್‌ ಅನ್ನು ಕರಗಿಸುವುದರ ಜತೆಗೆ ಸಾವಯವವಲ್ಲದ ರೂಪದಿಂದ ಸಸ್ಯಗಳನ್ನು ಸಾವಯವ ರೂಪಕ್ಕೆ ಪರಿವರ್ತಿಸುತ್ತವೆ. ಇದರಿಂದ ಬೇರು, ಚಿಗುರುಗಳ ಬೆಳವಣಿಗೆಗೆ ಅನುಕೂಲ ಆಗುತ್ತದೆ. ಕಿಣ್ವದ ಚಟುವಟಿಕೆ ಸುಧಾರಿಸುವುದರಿಂದ ಮೊಳಕೆಯೊಡೆಯುವಿಕೆ ಪ್ರಮಾಣ ಹೆಚ್ಚಾಗುತ್ತದೆ. ಸಸ್ಯದ ರೋಗ ನಿರೋಧಕ ಶಕ್ತಿ ಸುಧಾರಿಸುವ ಮೂಲಕ ವಾತಾ ವರಣದ ಒತ್ತಡಗಳು ಮತ್ತು ಸೋಂಕುಗಳನ್ನು ಕಡಿಮೆಗೊಳಿಸಲು ಸಹಾಯ ಮಾಡುತ್ತವೆ. ನೆಲಗಡಲೆ, ಕಬ್ಬು, ಪ್ಲಾಂಟೇಶನ್‌ ಬೆಳೆಗಳು ಸೇರಿ ಒಂಬತ್ತು ಪ್ರಕಾರದ ಬೆಳೆಗಳ ಮೇಲೆ ಇದನ್ನು ಪ್ರಯೋಗ ಮಾಡಬಹುದು.

Advertisement

ಎಷ್ಟು ಬೆಲೆ?
ಒಂದು ಎಕರೆ ಜಮೀನಿನಲ್ಲಿ ಕೃಷಿ ಬೆಳೆಗಳಿಗೆ ಒಂದು ಹಂಗಾಮಿಗೆ ರೈತರು ಸರಾಸರಿ 4ರಿಂದ 5 ಸಾವಿರ ರೂ. ಗೊಬ್ಬರಕ್ಕಾಗಿ ಖರ್ಚು ಮಾಡುತ್ತಾರೆ. ಈ ನ್ಯಾನೊ ಫೈಬರ್‌ ಜೈವಿಕ ಗೊಬ್ಬರದಿಂದ ಆ ಖರ್ಚು ಅರ್ಧಕ್ಕರ್ಧ ಅಂದರೆ 2,500 ರೂ. ಆಗಲಿದೆ. ಒಂದು ಹಾಳೆಗೆ 400ರಿಂದ 600 ರೂ. ಆಗುತ್ತದೆ. ಕಳೆದ ವರ್ಷ ಇದು ಬಿಡುಗಡೆಯಾಗಿದ್ದು, ಮದ್ರಾಸ್‌ ಐಐಟಿ ಯಿಂದ ಪೇಟೆಂಟ್‌ ಕೂಡ ದೊರಕಿದೆ. ಕೇಂದ್ರ ಸರಕಾರದಿಂದ ಪೇಟೆಂಟ್‌ ಪಡೆಯುವ ಪ್ರಕ್ರಿಯೆ ನಡೆದಿದೆ ಎಂದು ಫಿಬ್‌ ಸೋಲ್‌ನ ಸಿಟಿಒ ಹಾಗೂ ನಿರ್ದೇಶಕ ಡಾ| ಅನಂತ್‌ ರಹೇಜಾ “ಉದಯವಾಣಿ’ಗೆ ಸ್ಪಷ್ಟಪಡಿಸಿದರು.

ನ್ಯಾನೊ ಗೊಬ್ಬರದ ಪ್ರಯೋಗ ಜಿಕೆವಿಕೆ ಆವರಣದಲ್ಲಿ ನೆಲಗಡಲೆ ಮತ್ತು ಟೊಮೇಟೊ ಮೇಲೆ ನಡೆಯುತ್ತಿದೆ. ಕೀಟಗಳ ಬಾಧೆ ನಿಯಂತ್ರಣ, ಇಳುವರಿ ಹೆಚ್ಚಳ, ಮಣ್ಣಿನ ಗುಣಮಟ್ಟ ಬಗ್ಗೆ ಪರೀಕ್ಷಿಸಲಾಗುವುದು.
– ಡಾ| ವೈ.ಜಿ. ಷಡಾಕ್ಷರಿ, ನಿರ್ದೇಶಕರು (ಸಂಶೋಧನೆ), ಜಿಕೆವಿಕೆ

- ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next