Advertisement

ನಂಜುಂಡೇಶ್ವರ ಸ್ವಾಮಿ ಬ್ರಹ್ಮರಥೋತ್ಸವ

12:40 AM Apr 25, 2019 | Lakshmi GovindaRaju |

ಮಹದೇವಪುರ: ಕಾಡುಗುಡಿಯಲ್ಲಿನ ಶ್ರೀ ಪ್ರಸನ್ನ ನಂಜುಂಡೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಬುಧವಾರ ಸಂಭ್ರಮದಿಂದ ಜರುಗಿತು.

Advertisement

ಬೆಂಗಳೂರು ಪೂರ್ವ ತಾಲೂಕಿನ ಕಾಡುಗುಡಿಯ (ಅರಣ್ಯಪುರಿ) ವಿಶ್ವನಾಥ ಕ್ಷೇತ್ರದಲ್ಲಿರುವ ಶ್ರೀ ಪ್ರಸನ್ನ ನಂಜುಂಡೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವಕ್ಕೆ ಶಾಸಕ ಅರವಿಂದ ಲಿಂಬಾವಳಿ ಹಾಗೂ ಪಾಲಿಕೆ ಸದಸ್ಯ ಮುನಿಸ್ವಾಮಿ ಚಾಲನೆ ನೀಡಿದರು.

ಬ್ರಹ್ಮರಥೋತ್ಸವದ ಅಂಗವಾಗಿ ಸ್ವಾಮಿಗೆ ವಿವಿಧ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಜತೆಗೆ, ವಿಶೇಷ ಪೂಜಾ ಕೈಂಕರ್ಯಗಳು ನಡೆದವು.

ಉತ್ಸವದ ಪ್ರಯುಕ್ತ ನಂಜುಂಡೇಶ್ವರ ಸ್ವಾಮಿಗೆ ಒಂದು ವಾರದಿಂದ ಧ್ವಜಾರೋಹಣ, ಅಂಕುರಾರ್ಪಣೆ, ವೃಷಭಾರೋಹಣೋತ್ಸವ, ಶೇಷವಾಹನೋತ್ಸವ, ಕಾಶಿಯಾತ್ರೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.

ಕಾಡುಗುಡಿಯ ಪ್ರಮುಖ ಬೀದಿಗಳಲ್ಲಿ ಬ್ರಹ್ಮರಥೋತ್ಸವ ಸಾಗಿತು. ಈ ವೇಳೆ ಕೀಲುಕುದುರೆ, ಗಾರುಡಿಗೊಂಬೆ ಕುಣಿತ, ತಮಟೆ ವಾದ್ಯ, ನಾದಸ್ವರ, ನಾಯಂಡಿ ನೃತ್ಯ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳ ಪ್ರದರ್ಶನ ನೆರೆದಿದ್ದ ಭಕ್ತರ ಗಮನ ಸೆಳೆಯಿತು.

Advertisement

ಚನ್ನಸಂದ, ದಿನ್ನೂರು, ನಾಗೋಂಡನಹಳ್ಳಿ, ಬೆಳತ್ತೂರು ಮತ್ತು ಎಕೆಜಿ ಕಾಲೋನಿ ಸೇರಿದಂತೆ ಕಾಡುಗುಡಿಯ ಸುತ್ತಮುತ್ತಲಿನ ಬಡವಾಣೆಗಳ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಭಕ್ತರಿಗೆ ಕಾಡುಗುಡಿ ಗ್ರಾಮಸ್ಥರು ಪಾನಕ, ಮಜ್ಜಿಗೆ, ಕೊಸಂಬರಿ ವಿತರಿಸಿದರು. ನಂಜುಂಡ ದೀಕ್ಷಿತ್‌ ಮತ್ತು ನರಸಿಂಹಮೂರ್ತಿ ದೀಕ್ಷಿತ್‌ ಸಹೋದರರು, ಧರ್ಮಕರ್ತರು ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next