Advertisement

ದ್ವೀಪದಂತಾದ ನಂಜನಗೂಡು

11:21 PM Aug 10, 2019 | Team Udayavani |

ಮೈಸೂರು: ಕಪಿಲಾ ನದಿಯಲ್ಲಿ ಪ್ರವಾಹ ಬಂದಿದ್ದು, ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ದಾಸೋಹ ಭವನದ ಊಟದ ಹಾಲ್‌ಗ‌ೂ ನೀರು ನುಗ್ಗಿದೆ. ಹೀಗಾಗಿ, ಇದೇ ಮೊದಲ ಬಾರಿಗೆ ಇಲ್ಲಿ ದಾಸೋಹ ವ್ಯವಸ್ಥೆ ಸ್ಥಗಿತಗೊಳಿಸಲಾಗಿದೆ.

Advertisement

ಕಪಿಲೆ ನದಿ ನಂಜನಗೂಡು ನಗರವನ್ನು ಸುತ್ತುವರಿದಿದ್ದು, ನಗರ ದ್ವೀಪದಂತಾಗಿದೆ. ಇಲ್ಲಿಗೆ ಸಮೀಪದ ಶೃಂಗೇರಿ ಶಂಕರಮಠದಲ್ಲಿ ತಾತ್ಕಾಲಿಕವಾಗಿ ದಾಸೋಹ ವ್ಯವಸ್ಥೆ ಕೈಗೊಂಡಿದ್ದು, ಇಲ್ಲಿ ತಯಾರಿಸಿದ ಆಹಾರವನ್ನು ಪುನರ್ವಸತಿ ಕೇಂದ್ರಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ನಂಜನಗೂಡು ತಾಲೂಕಿನಲ್ಲಿ 75ಕ್ಕೂ ಹೆಚ್ಚು ಮನೆಗಳು ಶಿಥಿಲಗೊಂಡಿವೆ.

ಕಬಿನಿ ಜಲಾಶಯದಿಂದ ಲಕ್ಷಕ್ಕೂ ಅಧಿಕ ಕ್ಯೂಸೆಕ್‌ ನೀರನ್ನು ಹೊರ ಬಿಟ್ಟಿರುವುದರಿಂದ ತಿ.ನರಸೀಪುರ ಪಟ್ಟಣದ ತ್ರಿವೇಣಿ ಸಂಗಮದಲ್ಲಿ ಕಪಿಲಾ ನದಿ ಮೈದುಂಬಿ ಹರಿಯುತ್ತಿದೆ. ಈ ಮಧ್ಯೆ, ಲಕ್ಷ್ಮಣತೀರ್ಥ ನದಿಯ ಪ್ರವಾಹದಲ್ಲಿ ಒಂದು ಟ್ಯಾಂಕರ್‌ ಕೊಚ್ಚಿಕೊಂಡು ಹೋಗಿದೆ. ಮತ್ತೂಂದು ಟ್ಯಾಂಕರ್‌ ಪಂಪ್‌ಹೌಸ್‌ ಬಳಿ ಸಿಲುಕಿಕೊಂಡಿದೆ.

ಹಾಸನಕ್ಕೆ ಸಿಎಫ್ಟಿಆರ್‌ಐನಿಂದ ಸಿದ್ಧ ಆಹಾರ ಪೂರೈಕೆ: ಮೈಸೂರು: ಹಾಸನ ಜಿಲ್ಲೆಯ ಪ್ರವಾಹ ಸಂತ್ರಸ್ತರಿಗಾಗಿ ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯ (ಸಿಎಫ್ಟಿಆರ್‌ಐ) ಸಿದ್ಧ ಆಹಾರವನ್ನು ಕಳುಹಿಸಿಕೊಟ್ಟಿದೆ.

2,500 ಜನರಿಗಾಗುವಷ್ಟು 4 ಸಾವಿರ ಚಪಾತಿ, 70 ಕೇಜಿ ಟೊಮೇಟೊ ಗೊಜ್ಜು (ಚಟ್ನಿ), 1 ಸಾವಿರ ಜನರಿಗಾಗುವಷ್ಟು 100 ಕೆ.ಜಿ. ರಸ್ಕ್, 6 ಸಾವಿರ ನೀರಿನ ಬಾಟಲಿಗಳು, ನೀರಿನಲ್ಲಿ ಕಲಸಿ ಸಿದ್ಧಪಡಿಸಬಹುದಾದ 300 ಕೆ.ಜಿ. ಅವಲಕ್ಕಿ ಮಿಶ್ರಣವನ್ನು ಹಾಸನ ಜಿಲ್ಲಾಧಿಕಾರಿಯ ಕೋರಿಕೆ ಮೇರೆಗೆ ಶನಿವಾರ ಕಳುಹಿಸಲಾಗಿದೆ.

Advertisement

ಇತರೆಡೆ ಪ್ರವಾಹ ಪೀಡಿತ ಪ್ರದೇಶಗಳಿಂದ ಬೇಡಿಕೆ ಬಂದಲ್ಲಿ ಅಲ್ಲಿಗೂ ಆಹಾರ ಕಳುಹಿಸಲು ಸಂಸ್ಥೆ ಸಿದ್ಧವಿದೆ ಎಂದು ಸಿಎಫ್ಟಿಆರ್‌ಐನ ಮಾಹಿತಿ ಮತ್ತು ಪ್ರಚಾರ ವಿಭಾಗದ ಸಂಯೋಜಕರಾದ ಎ.ಎಸ್‌.ಕೆ.ವಿ.ಎಸ್‌.ಶರ್ಮ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next