Advertisement

ನಂಜನಗೂಡು ಉಪಚುನಾವಣೆ: 12ಕ್ಕೆ ರಣಕಹಳೆ

12:23 PM Mar 10, 2017 | |

ಮೈಸೂರು: ಮಾಜಿ ಸಚಿವ ವಿ. ಶ್ರೀನಿವಾಸಪ್ರಸಾದ್‌ ಅವರ ರಾಜೀನಾಮೆಯಿಂದ ತೆರವಾಗಿರುವ ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆಯ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದರೆ, ಜೆಡಿಎಸ್‌ ಎಂದಿನಂತೆ ಕಾದುನೋಡುವ ತಂತ್ರ ಅನುಸರಿಸುತ್ತಿದೆ.

Advertisement

ಸಚಿವ ಸಂಪುಟ ಪುನಾರಚನೆ ವೇಳೆ ತಮ್ಮನ್ನು ಕೈಬಿಟ್ಟಿದ್ದರಿಂದ ಮುಖ್ಯಮಂತ್ರಿ ವಿರುದ್ಧ ಸಿಡಿದೆದ್ದ, ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಕಂದಾಯ ಸಚಿವರಾಗಿದ್ದ ವಿ.ಶ್ರೀನಿವಾಸಪ್ರಸಾದ್‌ ಕಳೆದ ಅಕ್ಟೋಬರ್‌ 17ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ ಪಕ್ಷಕ್ಕೂ ಗುಡ್‌ ಬೈ ಹೇಳಿದ್ದರು.

ಪ್ರಸಾದ್‌ ಹೊರ ನಡೆದ ಬೆನ್ನಲ್ಲೇ ನಂಜನಗೂಡು ಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಶ್ರೀನಿವಾಸಪ್ರಸಾದ್‌ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಸ್ವಾಭಿಮಾನಿ ಸಮಾವೇಶ ನಡೆಸಿದ ಶ್ರೀನಿವಾಸಪ್ರಸಾದ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಆಪ್ತರಾದ ಲೋಕೋಪಯೋಗಿ ಸಚಿವ ಡಾ. ಎಚ್‌.ಸಿ. ಮಹದೇವಪ್ಪವಿರುದ್ಧ ಹರಿಹಾಯ್ದಿದ್ದರು.

ಒಪ್ಪಿಗೆ ಇಲ್ಲದಿದ್ದರೂ ಸಮ್ಮತಿ: ಈ ಮಧ್ಯೆ ಉಪ ಚುನಾವಣೆಯಲ್ಲಿ ತಮ್ಮ ಪುತ್ರ ಸುನೀಲ್‌ ಬೋಸ್‌ ಅವರನ್ನು ಕಣಕ್ಕಿಳಿಸಲು ತೆರೆಯ ಮರೆಯಲ್ಲಿ ಪ್ರಯತ್ನ ನಡೆಸಿದ ಸಚಿವ ಮಹದೇವಪ್ಪ, ಕ್ಷೇತ್ರದಲ್ಲಿ ಒಂದು ಸುತ್ತಿನ ಪ್ರವಾಸವನ್ನೂ ನಡೆಸಿ ಎಲ್ಲ ಮುಖಂಡರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದರು. ಅಲ್ಲದೆ, ವಿವಿಧ ಅಭಿವೃದ್ಧಿ ನಿಗಮಗಳ ಸಾಲದ ಪ್ಯಾಕೇಜ್‌ ಘೋಷಣೆ, ಸೇರಿದಂತೆ ಮುಖ್ಯ ಮಂತ್ರಿಯವರನ್ನೇ ಎರಡು ಬಾರಿ ಕರೆತಂದು ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ಹಾಕಿಸಿ ಜನರ ಗಮನಸೆಳೆಯುವ ಕೆಲಸ ಮಾಡಿದ್ದರು.

ಆದರೆ, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಪ್ರಸಾದ್‌ ವಿರುದ್ಧ ಸುನೀಲ್‌ ಬೋಸ್‌ ಸ್ಪರ್ಧೆ ಮಾಡಿದರೆ ಪಕ್ಷದ ಗೆಲುವಿಗೆ ಕಷ್ಟವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಸಂಸದ ಆರ್‌.ಧ್ರುವನಾರಾಯಣ ಅವರ ಮಧ್ಯಸ್ಥಿಕೆಯಲ್ಲಿ ಜೆಡಿಎಸ್‌ನ ಕಳಲೆ ಕೇಶವಮೂರ್ತಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ನಂತರ ಆಂತರಿಕವಾಗಿ ವಿರೋಧ ವಿದ್ದರೂ ಸಿದ್ದರಾಮಯ್ಯ ಅವರಿಗೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿರುವುದರಿಂದ ಅವರ ಪರಮಾಪ್ತರಾದ ಮಹದೇವಪ್ಪ ಬಹಿರಂಗವಾಗಿ ತಮ್ಮ ವಿರೋಧವನ್ನು ತೋರ್ಪಡಿಸಿಕೊಳ್ಳಲಾಗದ ಸ್ಥಿತಿಯಲ್ಲಿ ಕಳಲೆ ಕೇಶವಮೂರ್ತಿ ಕಾಂಗ್ರೆಸ್‌ ಸೇರ್ಪಡೆಯನ್ನು ಒಪ್ಪಿಕೊಂಡಿದ್ದಾರೆ. 

Advertisement

ಈ ಮಧ್ಯೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿ ಉಪ ಚುನಾವಣೆಯ ಅಭ್ಯರ್ಥಿಯೆಂದು ಘೋಷಣೆ ಯಾಗಿರುವ ಶ್ರೀನಿವಾಸಪ್ರಸಾದ್‌ ಅವರು ಪಕ್ಷದ ಸ್ಥಳೀಯ ಮುಖಂಡರೊಂದಿಗೆ ಈಗಾಗಲೇ ಕ್ಷೇತ್ರದಲ್ಲಿ ಒಂದು ಸುತ್ತಿನ ಪ್ರವಾಸವನ್ನು ಮುಗಿಸಿದ್ದಾರೆ. ಕಾಂಗ್ರೆಸ್‌ನ ಕಳಲೆ ಕೇಶವಮೂರ್ತಿ ಕೂಡ ಕ್ಷೇತ್ರ ಪ್ರವಾಸದಲ್ಲಿ ಹಿಂದೆ ಬಿದ್ದಿಲ್ಲ.

ಗೊಂದಲದಲ್ಲಿ ಜೆಡಿಎಸ್‌: ಇನ್ನು ಕಳಲೆ ಕೇಶವಮೂರ್ತಿ ಕಾಂಗ್ರೆಸ್‌ ಸೇರ್ಪಡೆಯಿಂದಾಗಿ ಜೆಡಿಎಸ್‌ನಲ್ಲಿ ಗೊಂದಲ ನಿರ್ಮಾಣವಾಗಿದ್ದು, ಉಪ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆ? ಕಣಕ್ಕೆ ಇಳಿಸುವುದಾದರೂ ಯಾರನ್ನು ಎಂಬ ಗೊಂದಲದಿಂದಾಗಿ ಪಕ್ಷದ ರಾಜಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಕೈಗೊಳ್ಳುವ ನಿರ್ಧಾರವನ್ನು ಎದುರು ನೀಡಲಾಗುತ್ತಿದೆ.

ಮತದಾನ ದಿನಾಂಕ ಘೋಷಣೆ: ಅಖಾಡ ರೆಡಿ
ಉಪ ಚುನಾವಣಾ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಮಾ.12ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜಾÂಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ನಂಜನಗೂಡು ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದು, ಯಡಿಯೂರಪ್ಪ 2 ದಿನಗಳ ಕಾಲ ಕ್ಷೇತ್ರದಲ್ಲಿ ಮೊಕ್ಕಾಂ ಹೂಡಿ ತಾಲೂಕಿನ 28 ಗ್ರಾಮ ಪಂಚಾಯ್ತಿ ಕೇಂದ್ರಗಳಿಗೂ ಭೇಟಿ ನೀಡಿ, ಅಲ್ಲಿನ ಮುಖಂಡರನ್ನು ಭೇಟಿ ಮಾಡಲಿದ್ದಾರೆ. ಇನ್ನು ನೀತಿಸಂಹಿತೆ ಜಾರಿ ಹಿನ್ನೆಲೆಯಲ್ಲಿ ಮುಖ್ಯ ಮಂತ್ರಿಯವರ ಸರ್ಕಾರಿ ಕಾರ್ಯಕ್ರಮ ರದ್ದಾಗಿ, ಕಾಂಗ್ರೆಸ್‌ ಸಮಾವೇಶವಾಗಿ ಪರಿವರ್ತನೆ ಯಾಗಿದೆ. ಒಂದೇ ದಿನ ಇಬ್ಬರೂ ಘಟಾನುಘಟಿ ನಾಯಕರು ಕ್ಷೇತ್ರದಲ್ಲಿ ತಮ್ಮ ಪಕ್ಷದ ಪರ ಚುನಾವಣಾ ರಣಕಹಳೆ ಮೊಳಗಿಸಲಿದ್ದಾರೆ.

ಹಾಗೆ ನೋಡಿದರೆ ಸಾಮಾನ್ಯ ಕ್ಷೇತ್ರವಾಗಿದ್ದ ನಂಜನಗೂಡು, ಕ್ಷೇತ್ರ ಪುರ್ನವಿಂಗಡಣೆ ನಂತರ 2008ರಲ್ಲಿ ಎಸ್‌ಸಿ ಮೀಸಲು ಕ್ಷೇತ್ರವಾದ ನಂತರ ಐದು ಬಾರಿ ಚಾಮರಾಜ ನಗರ ಕ್ಷೇತ್ರದಿಂದ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಶ್ರೀನಿವಾಸಪ್ರಸಾದ್‌, ಮೊದಲ ಬಾರಿಗೆ ಕಾಂಗ್ರೆಸ್‌ನಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಅಂದು ಬಿಜೆಪಿ ಅಭ್ಯರ್ಥಿಯಾಗಿದ್ದ ಎಸ್‌.ಮಹಾದೇವಯ್ಯ (42159 ಮತ) ವಿರುದ್ಧ 708 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಚುನಾವಣೆಯಲ್ಲಿ ಜೆಡಿಎಸ್‌ನ ಕಳಲೆ ಎನ್‌.ಕೇಶವಮೂರ್ತಿ 25551 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.

2013ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ವಿ.ಶ್ರೀನಿವಾಸಪ್ರಸಾದ್‌ ಅವರು 50784 ಮತ ಪಡೆದು ಪುನರಾಯ್ಕೆಯಾದರೆ, ಆ ವೇಳೆಗೆ ಬಿಜೆಪಿಯಿಂದ ಹೊರ ನಡೆದು ಯಡಿಯೂರಪ್ಪ ಸ್ಥಾಪಿಸಿದ್ದ ಕೆಜೆಪಿ ಯಿಂದ ಕಣಕ್ಕಿಳಿದಿದ್ದ ಎಸ್‌.ಮಹಾದೇವಯ್ಯ ಕೇವಲ 28312 ಮತಗಳನ್ನಷ್ಟೇ ಪಡೆದರೆ, ಕಳಲೆ ಕೇಶವಮೂರ್ತಿ 41843 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೇರಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಡಾ.ಶಿವರಾಂ 7074 ಮತಗಳನ್ನಷ್ಟೇ ಪಡೆಯಲು ಶಕ್ತವಾಗಿದ್ದರು. ಈ ಚುನಾವಣೆಯಲ್ಲಿ ಪ್ರಸಾದ್‌ 8941 ಮತಗಳ ಅಂತರ ಸಾಧಿಸಿದ್ದರು.

* ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next