Advertisement

ಹಾಲು ಒಕ್ಕೂಟಗಳಿಗೆ ಕೊರೊನಾ ಹಾಲಾಹಲ : ಹಾಲು ಸಂಗ್ರಹ ಹೆಚ್ಚಳ, ಮಾರಾಟ ಇಳಿಕೆ

01:01 AM May 31, 2021 | Team Udayavani |

ಶಿವಮೊಗ್ಗ: ರಾಜ್ಯಾದ್ಯಂತ ಹಾಲು ಉತ್ಪಾದನೆಯಲ್ಲಿ ಭಾರೀ ಏರಿಕೆ ಕಂಡುಬಂದಿದ್ದು, ಲಾಕ್‌ಡೌನ್‌ ಕಾರಣ ನಿಗದಿತ ಪ್ರಮಾಣದಲ್ಲಿ ಹಾಲು, ಮೊಸರು ಮಾರಾಟವಾಗದೆ ಒಕ್ಕೂಟಗಳು ಒತ್ತಡಕ್ಕೆ ಸಿಲುಕಿವೆ.

Advertisement

ಎರಡು ತಿಂಗಳ ಹಿಂದೆ 70 ಲಕ್ಷ ಲೀ. ಆಸುಪಾಸು ಇದ್ದ ದೈನಿಕ ಹಾಲು ಸಂಗ್ರಹ ಮೇಯಲ್ಲಿ 90 ಲಕ್ಷ ಲೀ. ವರೆಗೆ ಹೆಚ್ಚಿದೆ. ಕೊರೊನಾ, ಲಾಕ್‌ಡೌನ್‌ ಕಾರಣ ಸಭೆ, ಸಮಾರಂಭಗಳಿಗೆ ಕಡಿವಾಣ ಬಿದ್ದಿದ್ದು, ಹಾಲು ಮಾರಾಟದಲ್ಲಿ ತೀವ್ರ ಕುಸಿತ ಉಂಟಾಗಿದೆ. ಉತ್ಪಾದನೆ ಏರಿಕೆ, ಮಾರಾಟ ಕಡಿಮೆ ಹಾಲು ಒಕ್ಕೂಟ ಗಳಿಗೆ ನುಂಗಲಾರದ ತುತ್ತಾಗಿದೆ. ಬಾಕಿ ಹಾಲಿನಿಂದ ಪುಡಿ ಉತ್ಪಾದನೆ ಲಾಭದಾಯಕವಲ್ಲ. ಆದರೂ ಅದನ್ನೇ ಅವಲಂಬಿಸುವುದು ಅನಿವಾರ್ಯವಾಗಿದೆ.

ಮೊಸರು, ಮಜ್ಜಿಗೆ, ಹಾಲು, ಸಿಹಿತಿನಿಸು ಎಂದು ಅಂದಾಜು 45 ಲಕ್ಷ ಲೀ. ಹಾಲು ಖರ್ಚಾಗು ತ್ತಿದೆ. ಉಳಿದ ಹಾಲನ್ನು ಪುಡಿಗಾಗಿ ಕಳುಹಿಸಲಾಗುತ್ತಿದೆ.

ಆದಾಯಕ್ಕಿಂತ ನಷ್ಟ ಜಾಸ್ತಿ
ಪ್ರಸ್ತುತ 1 ಕೆ.ಜಿ. ಹಾಲಿನ ಪುಡಿಗೆ 180 ರೂ. ಇದೆ. ಇದರ ಉತ್ಪಾದನೆಗೆ 10 ಲೀ. ಹಾಲು ಬೇಕು. ಒಕ್ಕೂಟಗಳು ಹೈನುಗಾರರಿಂದ ಪ್ರತೀ ಲೀ.ಗೆ ಕನಿಷ್ಠ 23ರಿಂದ 29.50 ರೂ. ನೀಡಿ ಖರೀದಿಸುತ್ತವೆ. ಈ ನಷ್ಟ ಭರಿಸಬೇಕಾದರೆ 1 ಕೆ.ಜಿ. ಪೌಡರ್‌ಗೆ 230 ರೂ.ನಿಂದ 300 ರೂ.ವರೆಗೆ ದರ ನಿಗದಿ ಮಾಡಬೇಕು. ದರ ಹೆಚ್ಚಿಸಿದರೆ ಮಾರಾಟ ಕುಸಿಯುತ್ತದೆ. ಶಾಲಾ ಮಕ್ಕಳಿಗೆ ಹಾಲಿನ ಪುಡಿ ನೀಡಲಾಗುತ್ತಿತ್ತು. ಈಗ ಅದೂ ಇಲ್ಲ.

ಕರಾವಳಿ ಗ್ರಾಹಕರಿಗೆ ಸಿಗಲಿದೆ ಹೆಚ್ಚು ಹಾಲು
ಮಂಗಳೂರು, ಮೇ 30: ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟವು ಜೂ. 1ರಿಂದ ಗ್ರಾಹಕರಿಗೆ ಪ್ರತೀ ಅರ್ಧ ಲೀಟರ್‌ಗೆ 20 ಮಿ.ಲೀ.ಗಳಂತೆ ಹೆಚ್ಚುವರಿ ಹಾಲು ನೀಡಲಿದೆ.

Advertisement

ಲಾಕ್‌ಡೌನ್‌ ಪರಿಣಾಮ ಶುಭ ಸಮಾರಂಭ, ದೇವಸ್ಥಾನ, ಹೊಟೇಲ…ಗಳಿಗೆ ನಿರ್ಬಂಧ ಇರುವುದರಿಂದ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದಲ್ಲೂ ಹಾಲು ಉಳಿಯುತ್ತಿದೆ. ಇದರ ಪ್ರಯೋಜನವನ್ನು ಗ್ರಾಹಕರಿಗೆ ಒದಗಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.

ಪ್ರಸ್ತುತ ಒಕ್ಕೂಟದಲ್ಲಿ ದಿನಂಪ್ರತಿ ದಾಖಲೆಯ 5.60 ಲಕ್ಷ ಲೀ. ಹಾಲು ಸಂಗ್ರಹವಾಗುತ್ತಿದ್ದು, ಸುಮಾರು 1.50 ಲಕ್ಷ ಲೀ. ಉಳಿಯುತ್ತಿದೆ ಎಂದು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ತಿಳಿಸಿದ್ದಾರೆ.

ಗ್ರಾಹಕರಿಗೆ ಹೆಚ್ಚುವರಿ ಹಾಲು ಒದಗಿಸುವುದ ರಿಂದ ಸುಮಾರು 12 ಸಾವಿರ ಲೀ. ಹೆಚ್ಚುವರಿ ಹಾಲು ವಿಲೇವಾರಿ ಆಗಲಿದೆ ಎಂದಿದ್ದಾರೆ.

ಹಾಲು ಸಾಕಷ್ಟು ಉಳಿಯುತ್ತಿರುವುದರಿಂದ ಪುಡಿ ಉತ್ಪಾದಿಸುವ ಅನಿವಾರ್ಯ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರವೇ 64 ಲಕ್ಷ ಶಾಲಾ ಮಕ್ಕಳಿಗಾಗಿ 144 ರೂ. ದರದಲ್ಲಿ ಅರ್ಧ ಕೆ.ಜಿ. ಪ್ಯಾಕೆಟ್‌ ಖರೀದಿಸಿ ವಿತರಿಸಿದರೆ ಸರಕಾರಕ್ಕೆ ಕೇವಲ 92 ಕೋ.ರೂ. ಮಾತ್ರ ವೆಚ್ಚವಾಗುತ್ತದೆ. ಇದನ್ನು ಸಿಎಂ ಗಮನಕ್ಕೆ ತರಲಾಗಿದೆ.
– ಬಾಲಚಂದ್ರ ಜಾರಕಿಹೊಳಿ, ಕೆಎಂಎಫ್ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next