ಮಂಗಳೂರು: ಕರ್ನಾಟಕ ಹಾಲು ಮಹಾಮಂಡಳಿ ಉತ್ಪಾದಿಸುವ ಸುಮಾರು 50ರಷ್ಟು ವಿಧದ “ನಂದಿನಿ’ ಐಸ್‌ಕ್ರೀಂ ಉತ್ಪನ್ನಗಳನ್ನು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ ಸೋಮವಾರ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.
ಒಕ್ಕೂಟದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಐಸ್‌ಕ್ರೀಂ ಸಂಗ್ರಹದ ಕೋಲ್ಡ್ ಸ್ಟೋರೇಜ್ ಘಟಕ ಉದ್ಘಾಟನೆ, ಐಸ್‌ಕ್ರೀಂ ಬಿಡುಗಡೆ ನೆರವೇರಿಸಿದ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಮಾತನಾಡಿ, ಹಾಲು ಮಹಾಮಂಡಳವು ಒಕ್ಕೂಟವನ್ನು ಐಸ್‌ಕ್ರೀಂ ಮಾರಾಟಕ್ಕೆ ಸೂಪರ್ ಸ್ಟಾಕಿಸ್ಟ್ ಆಗಿ ನೇಮಿಸಿದೆ. ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಾರಂಭಿಕ ಹಂತದಲ್ಲಿ ನಂದಿನಿ 157 ಶ್ರೇಣಿಯ ಐಸ್‌ಕ್ರೀಂಗಳಲ್ಲಿ 50 ಶ್ರೇಣಿಗಳನ್ನು ಒಕ್ಕೂಟದ ವ್ಯಾಪ್ತಿಯಲ್ಲಿ ಮಾರಾಟ ಮಾಡಲು ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಮಹಾಮಂಡಳದಲ್ಲಿ ಉತ್ತಮ ದರ್ಜೆಯ ಕೆನೆಯಿಂದ ಸಂಪೂರ್ಣ ನೈಸರ್ಗಿಕ ಮತ್ತು ದೇಶೀಯವಾದ ಐಸ್‌ಕ್ರೀಂ ಜನರಿಗೆ ಕೈಗೆಟಕುವ ದರದಲ್ಲಿ ಲಭ್ಯವಿದೆ. ದಕ್ಷಿಣ ಕನ್ನಡ ಹಾಲು ಒಕ್ಕೂಟದಿಂದಲೇ ಐಸ್ ಕ್ರೀಂ ಮಾರುಕಟ್ಟೆಗೆ ಬಿಡುಗಡೆ ಮಾಡಬೇಕೆನ್ನುವುದು ಹಲವು ಸಮಯದ ಕನಸಾಗಿತ್ತು. ಐಸ್ ಕ್ರೀಂ ಕ್ಷೇತ್ರದಲ್ಲಿ ಮಂಗಳೂರಿನಲ್ಲಿ ಭಾರೀ ಪೈಪೋಟಿಯಿದೆ. ನಂದಿನಿ ಉತ್ತಮ ಗುಣಮಟ್ಟದ ಐಸ್‌ಕ್ರೀಂ ಆಗಿದ್ದು, ಈಗಾಗಲೇ ಉತ್ತಮ ಬೇಡಿಕೆ ಪಡೆದುಕೊಂಡಿದೆ ಎಂದರು.
ಹಾಲು ಮಹಾಮಂಡಳದ ನಿರ್ದೇಶಕ ಕಾಪು ದಿವಾಕರ ಶೆಟ್ಟಿ ಮಾತನಾಡಿ, ಕರ್ನಾಟಕ ಹಾಲು ಒಕ್ಕೂಟದಿಂದ ಸೀತಾಫಲ, ಅಂಜೂರಾ, ಬಟರ್‌ಸ್ಕಾಚ್ ಸೇರಿದಂತೆ ನಾನಾ ಬಗೆಯ ನೈಸರ್ಗಿಕ ಐಸ್ ಕ್ರೀಂ ತಯಾರಿಸುತ್ತಿದೆ. ಈ ಮೂಲಕ ಉಳಿದ ಐಸ್‌ಕ್ರೀಂ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಸ್ಪರ್ಧೆ ನೀಡುತ್ತಿದೆ. ಉತ್ತಮ ಸೇವೆ ಮತ್ತು ಮಾರುಕಟ್ಟೆಯಲ್ಲಿ ಗ್ರಾಹಕರ ಸೆಳೆಯಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ. ವಿವೇಕ್ ಮಾತನಾಡಿ, ದಕ್ಷಿಣ ಕನ್ನಡ ಹಾಲು ಒಕ್ಕೂಟಕ್ಕೆ ಕರ್ನಾಟಕ ಹಾಲು ಮಂಡಳವು ನೀಡಿದ ಉತ್ತಮ ಸಹಕಾರ ದಿಂದ ಐಸ್‌ಕ್ರೀಂ ಬಿಡುಗಡೆ ಮಾಡ ಲಾಗಿದೆ. ಒಕ್ಕೂಟದಲ್ಲಿ ಐಸ್‌ಕ್ರೀಮ್ ದಾಸ್ತಾನಿಗೆ 300 ಲೀ. ಸಾಮರ್ಥ್ಯದ 40 ಡೀಪ್ ಫ್ರೀಜರ್‌ಗಳು ಸೌಲಭ್ಯವಿದೆ. ಬೇಡಿಕೆಗೆ ಅನುಗುಣವಾಗಿ ಐಸ್ ಕ್ರೀಂ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. ಮೊದಲ ದಿನವೇ 55 ಸಾವಿರ ಲೀಟರ್‌ಗೆ ಬೇಡಿಕೆ ಬಂದಿದೆ ಎಂದರು.
ಮಾರುಕಟ್ಟೆ ವ್ಯವಸ್ಥಾಪಕ ಡಾ| ರವಿರಾಜ ಉಡುಪ, ದ.ಕ. ಹಾಲು ಒಕ್ಕೂಟದ ನಿರ್ದೇಶಕರಾದ ಸವಿತಾ ಶೆಟ್ಟಿ, ಸುಭದ್ರಾ ರಾವ್ ಉಪಸ್ಥಿತರಿದ್ದರು. ಉಪ ವ್ಯವಸ್ಥಾಪಕ ಸುಧಾಕರ್ ವಂದಿಸಿದರು.