ಮುಂಬೈ: ಖಡ್ಗಧಾರಿ ಸಿಖ್ ಪ್ರತಿಭಟನಾಕಾರರು ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಘಟನೆ ಮಹಾರಾಷ್ಟ್ರದ ನಾಂದೇಡ್ ಗುರುದ್ವಾರ ಪ್ರದೇಶದಲ್ಲಿ ನಡೆದಿದ್ದು, ಘಟನೆಯಲ್ಲಿ ನಾಲ್ವರು ಪೊಲೀಸರು ಗಾಯಗೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 500 ಅಂಕ ಜಿಗಿತ, ನಿಫ್ಟಿ 14,650ಕ್ಕೆ ಏರಿಕೆ
ರಾಜ್ಯದಲ್ಲಿ ಕೋವಿಡ್ 19 ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಧಾರ್ಮಿಕ ಮೆರವಣಿಗೆಗೆ ಅವಕಾಶ ನೀಡುವುದಿಲ್ಲ ಎಂದು ಪೊಲೀಸರು ತಿಳಿಸಿದಾಗ ಖಡ್ಗಧಾರಿ ಸಿಖ್ ಪ್ರತಿಭಟನಾಕಾರರು ದಾಳಿ ನಡೆಸಿರುವುದಾಗಿ ವರದಿ ವಿವರಿಸಿದೆ.
ಘಟನೆಗೆ ಸಂಬಂಧಿಸಿದಂತೆ ಹಿಂಸಾಚಾರ ಮತ್ತು ರಾಜ್ಯದ ಕೋವಿಡ್ ಸುರಕ್ಷಾ ಕಾಯ್ದೆಯನ್ನು ಉಲ್ಲಂಘಿಸಿರುವ ದೂರನ್ನು ದಾಖಲಿಸಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಹಿಂಸಾಚಾರ ಘಟನೆಗೆ ಸಂಬಂಧಿಸಿದಂತೆ ಸುಮಾರು 18 ಮಂದಿಯನ್ನು ಬಂಧಿಸಲಾಗಿದೆ.
ಗುರುದ್ವಾರದಲ್ಲಿ ನಡೆದ ಹಿಂಸಾಚಾರದ ಘಟನೆಯ ವೀಡಿಯೊ ಆನ್ ಲೈನ್ ನಲ್ಲಿ ಭರ್ಜರಿಯಾಗಿ ಶೇರ್ ಆಗಿದ್ದು, ಬೃಹತ್ ಪ್ರಮಾಣದಲ್ಲಿ ಗುರುದ್ವಾರದೊಳಗೆ ಸೇರಿದ್ದ ಸಿಖ್ ಗುಂಪು ಖಡ್ಗದೊಂದಿಗೆ ಬ್ಯಾರಿಕೇಡ್ ದೂಡಿ ಪೊಲೀಸರ ಮೇಲೆ ದಾಳಿ ನಡೆಸಿರುವುದು ವೀಡಿಯೊದಲ್ಲಿ ಸೆರೆಯಾಗಿದೆ. ಅಲ್ಲದೇ ಪೊಲೀಸರ ವಾಹನಗಳನ್ನು ಉದ್ರಿಕ್ತ ಗುಂಪು ಜಖಂಗೊಳಿಸಿರುವುದಾಗಿ ವರದಿ ತಿಳಿಸಿದೆ.