Advertisement

“ಕೈ”ಗೆ ಸೆಡ್ಡು; ಸಿನಿಮಾ, ರಾಜಕೀಯ ರಂಗದಲ್ಲಿ ಜನಾನುರಾಗಿ ಸ್ಟಾರ್!

12:01 PM Jan 17, 2019 | Sharanya Alva |

ಭಾರತದಲ್ಲಿ ಸಿನಿಮಾ ರಂಗಕ್ಕೂ, ರಾಜಕೀಯಕ್ಕೂ ಗಳಸ್ಯ, ಕಂಠಸ್ಯ ನಂಟು! ಭಾರತೀಯ ಚಿತ್ರರಂಗದಲ್ಲಿ ನಟನಾಗಿ, ನಿರ್ಮಾಪಕ, ನಿರ್ದೇಶಕ, ಪತ್ರಕರ್ತನಾಗಿ, ಸ್ಟಾರ್ ಆಗಿ ಹೊರಹೊಮ್ಮಿದ್ದ ಕೃಷ್ಣ ಅಲಿಯಾಸ್ ನಂದಮೂರಿ ತಾರಕ ರಾಮಾರಾವ್ ಮುಖ್ಯಮಂತ್ರಿ ಪಟ್ಟವನ್ನೂ ಅಲಂಕರಿಸಿಬಿಟ್ಟಿದ್ದರು. ಇವರು ಬೇರಾರು ಅಲ್ಲ ಎನ್ ಟಿ ಆರ್!

Advertisement

ಆಂಧ್ರಪ್ರದೇಶದ ಕಷ್ಣಾ ಜಿಲ್ಲೆಯ ಗುಡಿವಾಡ ತಾಲೂಕಿನ ನಿಮ್ಮಕೂರು ಎಂಬ ಪುಟ್ಟ ಹಳ್ಳಿಯಲ್ಲಿ 1923ರ ಮೇ 28ರಂದು ನಂದಮೂರಿ ಲಕ್ಷ್ಮಯ್ಯ ಮತ್ತು ವೆಂಕಟಾ ರಾಮಮ್ಮ ದಂಪತಿಯ ಮಗನಾಗಿ ಜನಿಸಿದ್ದ ಈ ಮಗುವಿಗೆ ಇಟ್ಟ ಹೆಸರು ಕೃಷ್ಣ! ರೈತ ದಂಪತಿ ಈ ಮಗುವನ್ನು (ಎನ್ ಟಿಆರ್ ಚಿಕ್ಕಪ್ಪ) ದತ್ತು ಕೊಟ್ಟು ಬಿಟ್ಟಿದ್ದರು. ಬಳಿಕ ಮಗುವಿನ ಹೆಸರನ್ನು ತಾರಕ ರಾಮುಡು (ತಾರಕ ರಾಮರಾವ್) ಅಂತ ಬದಲಾಯಿಸಿದ್ದರು. ಮುಂದೊಂದು ದಿನ ತಮ್ಮ ಮಗ(ಕೃಷ್ಣ) ಆಂಧ್ರಪ್ರದೇಶದ ಇತಿಹಾಸದಲ್ಲಿ ದಂತಕಥೆಯಾಗಲಿದ್ದಾನೆ ಎಂಬುದನ್ನು ಕನಸಿನಲ್ಲಿಯೂ ಊಹಿಸಿರಲಿಕ್ಕಿಲ್ಲ!

ಈ ಮಗು ಮುಂದೊಂದು ದಿನ ನೆಲವನ್ನು ಆಳುತ್ತಾನೆ ಎಂಬುದಾಗಿ ಹಳ್ಳಿಯಲ್ಲಿ ನಡೆದ ಹಬ್ಬದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಭವಿಷ್ಯ ನುಡಿದಿದ್ದರು. ಅದೇ ರೀತಿ 5ನೇ ವಯಸ್ಸಿಗೆ ರಾಮಾರಾವ್ ಗೆ ಶಿಕ್ಷಣದ ಅಭ್ಯಾಸ ಪ್ರಾರಂಭಿಸಲಾಗಿತ್ತು. ದಿನಾಲೂ ಮಗುವನ್ನು ಭುಜದ ಮೇಲೆ ಹೊತ್ತುಕೊಂಡು ಹೋಗಿ ಶಾಲೆಗೆ ಬಿಟ್ಟು ಬರುತ್ತಿದ್ದರಂತೆ. 5ನೇ ತರಗತಿ ನಂತರ ರಾಮಯ್ಯ ದಂಪತಿ ರಾಮಾರಾವ್ ನನ್ನು ವಿಜಯವಾಡದ ಶಾಲೆಗೆ ತಂದು ಸೇರಿಸಿದ್ದರು. ಹೀಗೆ ರಾಮಾರಾವ್ ನ ಮೆಟ್ರಿಕ್ಯೂಲೇಷನ್, ಕಾಲೇಜು ವಿದ್ಯಾಭ್ಯಾಸ ಪೂರ್ಣಗೊಂಡಿತ್ತು.

ಕಾಲೇಜು ದಿನಗಳಲ್ಲಿ ನಾಟಕಗಗಳಲ್ಲಿ ಅಭಿನಯಿಸುವ ಮೂಲಕ ರಾಮಾರಾವ್ ಹೆಸರು ಗಳಿಸಿದ್ದರು. ಕಾಲೇಜು ಶಿಕ್ಷಣಾಭ್ಯಾಸದ ವೇಳೆಯೇ 1942ರಲ್ಲಿ ಸೋದರ ಮಾವನ ಮಗಳಾದ ಬಸವರಾಮತಾರಕಂಳನ್ನು ವಿವಾಹವಾಗಿದ್ದರು.

Advertisement

ಅದೃಷ್ಟ ಪರೀಕ್ಷೆ..!

1947ರಲ್ಲಿ ರಾಮಾರಾವ್ ಪದವಿ ಶಿಕ್ಷಣ ಮುಗಿದ ಮೇಲೆ ಸಿನಿಮಾದಲ್ಲಿ ನಟಿಸಬೇಕೆಂಬ ಹಂಬಲದಿಂದ ಶೋಭಾಂಚಲ ಸ್ಟುಡಿಯೋದಲ್ಲಿ ತಮ್ಮ ಮೊತ್ತ ಮೊದಲ ಪರೀಕ್ಷೆಗೆ ಹಾಜರಾಗಿದ್ದರು. ಸುಮಾರು ಒಂದೂವರೆ ಗಂಟೆಗಳ ಪರೀಕ್ಷೆ, ರಿಹರ್ಸಲ್ ನಂತರ, ಆಯ್ತು ನೀವಿನ್ನು ಹೊರಟ ಬಹುದು ಫಲಿತಾಂಶ ನಂತರ ತಿಳಿಸುತ್ತೇವೆ ಎಂದು ಯುವಕ ರಾಮಾರಾವ್ ಗೆ ಹೇಳಿದ್ದರಂತೆ. ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ರಾಮಾರಾವ್ ಕೋಲ್ಕತಾ ಮೇಲ್ ರೈಲಿನಲ್ಲಿ ವಿಜಯವಾಡಕ್ಕೆ ವಾಪಸ್ ಆಗಿ ಹೆಂಡತಿ, ಮಗುವಿನ ಜತೆ ಮುಂದಿನ ಬದುಕಿನ ಬಗ್ಗೆ ಚಿಂತಿಸತೊಡಗಿದ್ದರು!

ಹಾಲಿನ ಮಾರಾಟ, ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರಾಮಾರಾವ್ ಎಲ್ಲಾ ಬಗೆಯ ಕೆಲಸಕ್ಕೆ ಅರ್ಜಿ ಗುಜರಾಯಿಸುತ್ತಲೇ ಇದ್ದರೂ ಏನೂ ಪ್ರಯೋಜನವಾಗಿರಲಿಲ್ಲ. ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ ಅರ್ಜಿ ಹಾಕಿ ಅಲ್ಲಿಯೂ ಅನುತ್ತೀರ್ಣರಾಗಿದ್ದರು. ತದನಂತರ ಕಿಂಗ್ಸ್ ಕಮಿಷನ್ಡ್ ಆಫೀಸರ್ ಹುದ್ದೆಯ(ಮಿಲಿಟರಿ) ಪರೀಕ್ಷೆ ಕೈ ಹಿಡಿದಿತ್ತು. ಆದರೆ ಮುಂದಿನ ಸಂದರ್ಶನಕ್ಕಾಗಿ ಡೆಹ್ರಾಡೂನ್ ಗೆ ಹೋಗಬೇಕು ಎಂಬ ಆದೇಶ ಬಂದಿತ್ತು. ಏತನ್ಮಧ್ಯೆ ಮಗ ಮಿಲಿಟರಿಗೆ ಸೇರುವುದು ಬೇಡ ಎಂದು ತಂದೆ ಒತ್ತಾಯಿಸಿದ್ದರಿಂದ ಕೊನೆಗೆ ಆ ಸಂದರ್ಶನ ಕೈಬಿಟ್ಟಿದ್ದರು. ಆ ಬಳಿಕ ಮದ್ರಾಸ್ ಸರ್ವೀಸ್ ಕಮಿಷನ್ ಪರೀಕ್ಷೆಯನ್ನು ಪಾಸು ಮಾಡಿದ್ದರು. ಒಟ್ಟು 1,100 ಮಂದಿ ಪರೀಕ್ಷೆ ಬರೆದಿದ್ದರು. ಅದರಲ್ಲಿ ರಾಮಾರಾವ್ ಸೇರಿದಂತೆ ಏಳು ಮಂದಿ ಮಾತ್ರ ಪಾಸ್ ಆಗಿದ್ದರು!.

ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದಿದ್ದ ಯುವಕ!

1947ರಲ್ಲಿ ಮಂಗಳಗಿರಿಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ರಾಮಾ ರಾವ್ ಕೆಲಸ ನಿರ್ವಹಿಸಲು ಆರಂಭಿಸಿದ್ದರು. ಮೊದಲ ದಿನವೇ ನಡೆದ ಘಟನೆ ರಾಮಾರಾವ್ ಬದುಕಿನ ಟರ್ನಿಂಗ್ ಪಾಯಿಂಟ್ ಗೆ ಕಾರಣವಾಗಿತ್ತು. ಬೆಳ್ಳಂಬೆಳಗ್ಗೆ ಕಚೇರಿಗೆ ಆಗಮಿಸಿದ್ದ ರಾಮಾರಾವ್ ತನ್ನ ಕೋಟನ್ನು ತೆಗೆದು ಕುರ್ಚಿಗೆ ತೂಗುಹಾಕಿ ಕೆಲಸ ಶುರು ಮಾಡಿದ್ದರು. ವಯಸ್ಸಾದ ಗುಮಾಸ್ತ ಕಾಪಿ ಮತ್ತು ತಿಂಡಿ ತಂದುಕೊಟ್ಟಿದ್ದ. ನೀನ್ಯಾಕೆ ಇದೆನ್ನೆಲ್ಲಾ ತಂದು ಕೊಡುತ್ತಿದ್ದೀಯಾ? ಎಂದು ರಾಮಾರಾವ್ ಪ್ರಶ್ನಿಸಿದ್ದರಂತೆ.

ಆದರೆ ಆತ ನಕ್ಕು ಸುಮ್ಮನಾಗಿಬಿಟ್ಟಿದ್ದ. ಸಂಜೆ ರಾಮಾರಾವ್ ಕಚೇರಿ ಕೆಲಸ ಮುಗಿದು ಹೊರಹೋಗುವಾಗ ಕೋಟ್ ಅನ್ನು ಹಾಕಿಕೊಂಡು ಕಿಸೆಗೆ ಕೈ ಹಾಕಿದಾಗ ನೂರು , ನೂರಿಪ್ಪತ್ತು ರೂಪಾಯಿ ಇದ್ದಿರುವುದನ್ನು ಕಂಡು ದಂಗಾಗಿದ್ದರು.(ಸಬ್ ರಿಜಿಸ್ಟ್ರಾರ್ ಗೆ ಬರುವ ಫೈಲ್ ಗೆ ಸಹಿ ಮಾಡಿಸಲು ಈ ಹಿರಿಯ ಗುಮಾಸ್ತ ಕಚೇರಿ ಹೊರಗೆ ಲಂಚ ಸಂಗ್ರಹಿಸಿ ಕಾಪಿ, ತಿಂಡಿ ತಂದು ಕೊಡುತ್ತಿದ್ದ) ನನ್ನ ಕಿಸೆಯಲ್ಲಿ ಇಷ್ಟೊಂದು ಹಣ(ಸಂಗ್ರಹವಾದ ಹಣವನ್ನು ಭಾಗ ಮಾಡಿ  ಸಂಜೆ ಎಲ್ಲರ ಕೋಟ್ ಕಿಸೆಯೊಳಗೆ ಗುಮಾಸ್ತ ಹಾಕಿ ಇಡುತ್ತಿದ್ದ) ಹೇಗೆ ಬಂತೆಂದು ಕೆಂಡಾಮಂಡಲರಾದ ರಾಮಾರಾವ್ ಕಚೇರಿಯಲ್ಲಿ ಕೂಗಾಡಿಬಿಟ್ಟಿದ್ದರು. ಈ ಹಣ ನನಗೆ ಬೇಕಾಗಿಲ್ಲ ಎಂದು ಖಡಕ್ ಆಗಿ ಹೇಳಿ ವಾಪಸ್ ಕೊಟ್ಟಿದ್ದರು. ಮೊದಲ ದಿನ ಲಂಚಾವತಾರದ ಘಟನೆ ಕಂಡು ರೋಸಿಹೋದ ರಾಮಾರಾವ್ ಶಾಕ್ ಗೆ ಒಳಗಾಗಿದ್ದರು.

ಪ್ರಾಮಾಣಿಕ ಮನುಷ್ಯ ಇಲ್ಲಿ ಬದುಕೋದು ಹೇಗೆ?ಈ ಕಡಿಮೆ ಸಂಬಳದಲ್ಲಿ ತನ್ನ ಮಕ್ಕಳನ್ನು ಒಳ್ಳೇ ಶಾಲೆಗೆ ಕಳುಹಿಸಲು ಹೇಗೆ ಸಾಧ್ಯ? ಹೆಂಡತಿಗೆ ಒಂದು ಸೀರೆಯನ್ನಾದರೂ ಖರೀದಿಸಲು ಆಗುತ್ತಾ? ಎಂಬ ಚಿಂತೆಯಲ್ಲಿದ್ದಾಗಲೇ ಸಿನಿಮಾದಲ್ಲಿ ನಟಿಸುವಂತೆ ಮದ್ರಾಸ್ ನಿಂದ ಆಫರ್ ಬಂದು ಬಿಟ್ಟಿತ್ತು! ಆಗ ಸರ್ಕಾರಿ ಕೆಲಸ ಬಿಡಬೇಕೋ, ಸಿನಿಮಾ ರಂಗ ಆಯ್ಕೆ ಮಾಡಿಕೊಳ್ಳಬೇಕೋ ಎಂಬ ಸಂದಿಗ್ಧ ಸ್ಥಿತಿ 25ರ ಹರೆಯದ ರಾಮಾರಾವ್ ಅವರದ್ದಾಗಿತ್ತು!

ಆಗ ರಾಮಾರಾವ್ ಗೆ ಜಂಟಿ ರಿಜಿಸ್ಟ್ರಾರ್ ಪಿ.ಚಲಪತಿ ರಾವ್ ಸರ್ಕಾರಿ ಕೆಲಸ ಹರಕೆ ಕುರಿ ಇದ್ದಂತೆ.ನಿನಗೆ ಒಳ್ಳೆ ಭವಿಷ್ಯವಿದೆ..ನೀನು ಮದ್ರಾಸ್ ಗೆ ಹೋಗು..ಒಳ್ಳೆಯದಾಗುತ್ತೆ ಎಂದು ಹುರಿದುಂಬಿಸಿದ್ದರು. ಕೊನೆಗೆ ಸಹೋದರ ತ್ರಿವಿಕ್ರಮ ರಾವ್ ಹೇಳಿದ ಮಾತುಗಳನ್ನು ಕೇಳಿ ರಾಮಾರಾವ್ ಮದ್ರಾಸ್ ಮೇಲ್ ರೈಲು ಹತ್ತಿಬಿಟ್ಟಿದ್ದರು!

ನಿಜ ಜೀವನದ ಕೃಷ್ಣ…ಸಿನಿಮಾದಲ್ಲೂ ಕೃಷ್ಣನಾಗಿ ಸ್ಟಾರ್ ಆಗಿಬಿಟ್ಟಿದ್ದರು!

ಮದ್ರಾಸ್ ಗೆ ಬಂದು ಬಿಎ ಸುಬ್ಬಾ ರಾವ್ ಅವರ ಕಚೇರಿಗೆ ಹೋಗಿ ನಾನು ಎನ್ ಟಿ ರಾಮಾರಾವ್ ಎಂದು ಪರಿಚಯಿಸಿಕೊಂಡಿದ್ದರು.  ಮಾತುಕತೆ ಬಳಿಕ ನೀನೇ ನನ್ನ ಸಿನಿಮಾಕ್ಕೆ ಹೀರೋ ಎಂದು ಹೇಳಿಬಿಟ್ಟಿದ್ದರು. ರಾವ್ ಅವರ ಪಲ್ಲೆತೂರಿ ಪಿಲ್ಲಾ(ಹಳ್ಳಿ ಹುಡುಗಿ) ಎಂಬ ಮೊದಲ ಸಿನಿಮಾದಲ್ಲಿ ಹೀರೋ ಪಾತ್ರ ಕೊಟ್ಟಿದ್ದರು. ಆದರೆ ಪ್ರಸಾದ್ ಗಲಿಬಿಲಿಗೊಂಡು ಸುಬ್ಬಾರಾವ್ ಬಳಿ ಏಕಾಏಕಿ ಆ ಹುಡುಗನನ್ನು ಹೀರೋ ಮಾಡಬೇಡಿ ಎಂದು ಹೇಳಿಬಿಟ್ಟಿದ್ದರು. ಆದರೆ ಸುಬ್ಬಾರಾವ್ ಪ್ರಸಾದ್ ಮಾತನ್ನು ಕೇಳದೆ ತಮ್ಮ ನಿರ್ಧಾರದಂತೆ ರಾಮಾರಾವ್ ಗೆ ಅವಕಾಶ ಕೊಟ್ಟಿದ್ದರು. ಜೀವಮಾನದ ಮೊತ್ತ ಮೊದಲ ಸಿನಿಮಾದ ಸಂಭಾವನೆ 1,116 ರೂಪಾಯಿ ರಾಮಾರಾವ್ ಕೈಸೇರಿತ್ತು! ತದನಂತರ ವಿಜಯವಾಡಕ್ಕೆ ಹೋಗಿ ಸಬ್ ರಿಜಿಸ್ಟ್ರಾರ್ ಹುದ್ದೆಗೆ ರಾಜೀನಾಮೆ ಕೊಟ್ಟುಬಿಟ್ಟಿದ್ದರು. ಆಗ ಕೆಲಸಕ್ಕೆ ಸೇರಿ ಕೇವಲ 3 ವಾರ ಕಳೆದಿತ್ತು!

ಮತ್ತೆ ಮದ್ರಾಸ್ ಗೆ ಬಂದ ರಾಮಾರಾವ್ ಥೌಸಂಡ್ ಲೈಟ್ಸ್ ಪ್ರದೇಶದಲ್ಲಿ ಚಿಕ್ಕದೊಂದು ಕೋಣೆಯಲ್ಲಿ ತಂಗಿದ್ದರು. ಮಹಾನ್ ಸ್ವಾಭಿಮಾನಿಯಾಗಿದ್ದ ರಾಮಾರಾವ್ ಬಸ್ ಗೆ ಹಣವಿಲ್ಲದಿದ್ದರೂ ಯಾರ ಬಳಿಯೂ ಕೈಚಾಚುತ್ತಿರಲಿಲ್ಲವಾಗಿತ್ತು. ನಡೆದುಕೊಂಡೇ ಹೋಗಿ ಹಿರಿಯ, ಖ್ಯಾತ ನಿರ್ದೇಶಕರನ್ನು ಭೇಟಿಯಾಗಿ ಬರುತ್ತಿದ್ದರಂತೆ. ಏತನ್ಮಧ್ಯೆ ಮನ ದೇಶಂ(1949) ಸಿನಿಮಾದಲ್ಲಿ ಎಲ್ ವಿ ಪ್ರಸಾದ್ ಚಿಕ್ಕ ಪಾತ್ರವನ್ನು ರಾಮಾರಾವ್ ಗೆ ನೀಡಿದರು. ಹೀಗಾಗಿ ಮನ ದೇಶಂ ಎನ್ ಟಿಆರ್ ಮೊದಲ ಸಿನಿಮಾವಾಯ್ತು. ಬಳಿಕ ಪಲ್ಲೆತೂರಿ ಪಿಲ್ಲಾ ಸಿನಿಮಾ ತೆರೆಕಂಡಿತ್ತು. 1957ರಲ್ಲಿ ಮಾಯಾ ಬಜಾರ್ ಸಿನಿಮಾದಲ್ಲಿ ಕೃಷ್ಣನ ಪಾತ್ರ ಮಾಡುವ ಮೂಲಕ ಎನ್ ಟಿಆರ್ ಅದೃಷ್ಟ ಖುಲಾಯಿಸಿ ಬಿಟ್ಟಿತ್ತು. ಶ್ರೀಕೃಷ್ಣಾರ್ಜುನ ಯುದ್ಧಂ. ಕರ್ಣ, ಸುಮಾರು 17 ಸಿನಿಮಾಗಳಲ್ಲಿ ಕೃಷ್ಣನ ಪಾತ್ರ ಮಾಡಿದ್ದರು. ಒಂದರ ಹಿಂದೆ ಒಂದರಂತೆ ತೆರೆಕಂಡ ಸಿನಿಮಾದಿಂದ ಎನ್ ಟಿಆರ್ ಆಂಧ್ರದಲ್ಲಿ ಮನೆಮಾತಾಗಿಬಿಟ್ಟಿದ್ದರು. ಆ ನಂತರ ನಡೆದಿದ್ದೆಲ್ಲಾ ಇತಿಹಾಸವೇ!

ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದು ಪಕ್ಷ ಕಟ್ಟಿದ ಎನ್ ಟಿಆರ್! ರಥಯಾತ್ರೆ ಆರಂಭಿಸಿದ್ದ ಮೊತ್ತ ಮೊದಲ ರಾಜಕಾರಣಿ:

ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರದ ಆಡಳಿತದಿಂದ ರೋಸಿ ಹೋದ ಎನ್ ಟಿಆರ್..ಆಂಧ್ರಪ್ರದೇಶದಲ್ಲಿ 1982ರಲ್ಲಿ ತೆಲುಗು ದೇಶಂ ಪಕ್ಷ(ಟಿಡಿಪಿ)ವನ್ನು ಹುಟ್ಟುಹಾಕಿದ್ದರು. 1983ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿ ಹಾಗೂ ಸಂಜಯ್ ವಿಚಾರ್ ಮಂಚ್ ಪಕ್ಷದ ಮೈತ್ರಿಯೊಂದಿಗೆ ಅಖಾಡಕ್ಕಿಳಿದಿತ್ತು. ಎನ್ ಟಿಆರ್ ಗುಡಿವಾಡಾ ಹಾಗೂ ತಿರುಪತಿ ಸೇರಿದಂತೆ ಎರಡು ಕಡೆ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಪ್ರಚಾರಕ್ಕಾಗಿ ಹೊಸ ವಿಧಾನ ಕಂಡುಕೊಂಡ ಎನ್ ಟಿಆರ್ ರಥಯಾತ್ರೆ ಆರಂಭಿಸಿದ್ದರು. ಪ್ರಚಾರಕ್ಕಾಗಿ ರಥಯಾತ್ರೆ ನಡೆಸಿದ ಭಾರತದ ಮೊತ್ತ ಮೊದಲ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು!

ನಿರೀಕ್ಷೆಗೂ ಮೀರಿ ಎನ್ ಟಿಆರ್ ತೆಲುಗು ದೇಶಂ ಪಕ್ಷ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಧೂಳೀಪಟ ಮಾಡಿ ಅಧಿಕಾರದ ಗದ್ದುಗೆ ಏರಿತ್ತು. ಎರಡೂ ಕ್ಷೇತ್ರಗಳಲ್ಲಿ ಎನ್ ಟಿಆರ್ ಕೂಡಾ ವಿಜಯಮಾಲೆ ಧರಿಸಿದ್ದರು. 294 ವಿಧಾನಸಭಾ ಸ್ಥಾನಗಳಲ್ಲಿ 199 ಕ್ಷೇತ್ರಗಳಲ್ಲಿ ಟಿಡಿಪಿ ಜಯಭೇರಿ ಬಾರಿಸಿತ್ತು. 1983ರ ಜನವರಿ 9ರಂದು ಆಂಧ್ರಪ್ರದೇಶದ 10ನೇ ಸಿಎಂ ಆಗಿ ಅಧಿಕಾರ ಸ್ವೀಕರಿಸಿದರು. ಈ ಮೂಲಕ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿ ಎಂಬ ಖ್ಯಾತಿ ಪಡೆದರು.

ನಾಟಕೀಯ ಬೆಳವಣಿಗೆ:

1984ರ ಆಗಸ್ಟ್ 15ರಂದು ತೆರೆದ ಹೃದಯ ಶಸ್ತ್ರಚಿಕಿತ್ಸೆಗಾಗಿ ಎನ್ ಟಿಆರ್ ಅಮೇರಿಕಾಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ನಾಯಕ ನಾಂದೇಡ್ಲಾ ಭಾಸ್ಕರ್ ರಾವ್ ಟಿಡಿಪಿ ಸೇರ್ಪಡೆಗೊಂಡಿದ್ದರು. ರಾಜ್ಯಪಾಲ ರಾಮ್ ಲಾಲ್ ದಿಢೀರನೆ ಎನ್ ಟಿಆರ್ ಅವರನ್ನು ಪದಚ್ಯುತಗೊಳಿಸಿ ಭಾಸ್ಕರ್ ರಾವ್ ಅವರನ್ನು ಸಿಎಂ ಎಂದು ಘೋಷಿಸಿಬಿಟ್ಟಿದ್ದರು. ಸರ್ಜರಿ ಮುಗಿದ ಕೂಡಲೇ ಎನ್ ಟಿಆರ್ ಆಂಧ್ರಪ್ರದೇಶಕ್ಕೆ ವಾಪಸ್ ಆಗಿದ್ದರು. ಶಾಸಕರ ಬೆಂಬಲ ಬಲಪ್ರದರ್ಶನ, ಎನ್ ಟಿಆರ್, ಭಾಸ್ಕರ್ ರಾವ್ ಜಟಾಪಟಿ ನಡೆದು ಹೋಯಿತು. ರಾಜಭವನದಲ್ಲಿ ಶಾಸಕರ ಪರೇಡ್ ಗೆ ಅವಕಾಶ ಕೊಡಬೇಕೆಂಬ ಎನ್ ಟಿಆರ್ ಮನವಿಯನ್ನೂ ರಾಜ್ಯಪಾಲ ರಾಮ್ ಲಾಲ್ ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಕೊನೆಗೆ ಎನ್ ಟಿಆರ್ ಮತ್ತೆ ರಾಜ್ಯದಲ್ಲಿ ಚೈತನ್ಯ ರಥಯಾತ್ರೆ ಮೂಲಕ ತನಗಾದ ಅನ್ಯಾಯವನ್ನು ಜಗಜ್ಜಾಹೀರುಗೊಳಿಸಿದರು.

ಈ ವೇಳೆ ದೇಶದಲ್ಲಿ ಜನತಾ ಪಕ್ಷ, ಬಿಜೆಪಿ, ಎಡಪಕ್ಷ,  ಡಿಎಂಕೆ ಸೇರಿದಂತೆ ಕಾಂಗ್ರೆಸ್ ವಿರೋಧಿ ಪಕ್ಷಗಳು, ಜನರು ಎನ್ ಟಿಆರ್ ಗೆ ಬೆಂಬಲ ನೀಡಿದರು. ಕುದುರೆ ವ್ಯಾಪಾರ ತಡೆಯಲು ಎನ್ ಟಿಆರ್ ಶಾಸಕರನ್ನು ರಹಸ್ಯ ಸ್ಥಳದಲ್ಲಿ ಇರಿಸಿಬಿಟ್ಟಿದ್ದರು. ಜನಾದೇಶಕ್ಕೆ ಬಗ್ಗಿದ ಅಂದಿನ ಪ್ರಧಾನಿ ಇಂದಿರಾಗಾಂಧಿ ಗರ್ವನರ್ ರಾಮ್ ಲಾಲ್ ಅವರನ್ನು ವಜಾಗೊಳಿಸಿ, ಕಾಂಗ್ರೆಸ್ ಹಿರಿಯ ಮುಖಂಡ ಶಂಕರ್ ದಯಾಳ್ ಶರ್ಮಾ ಅವರನ್ನು ನೂತನ ರಾಜ್ಯಪಾಲ ಎಂದು ಘೋಷಿಸಿ ಎನ್ ಟಿಆರ್ ಗೆ ಮತ್ತೆ 1984ರ ಸೆಪ್ಟೆಂಬರ್ ನಲ್ಲಿ ಅಧಿಕಾರದ ಪಟ್ಟಕ್ಕೆ ಏರುವ ಹಾದಿ ಸುಗಮ ಮಾಡಿಕೊಟ್ಟಿದ್ದರು!

ರಾಜಕೀಯ ತಿಕ್ಕಾಟ ನಡೆಯುತ್ತಿದ್ದ ವೇಳೆಯಲ್ಲಿಯೇ 1984ರ ಅಕ್ಟೋಬರ್ ತಿಂಗಳಲ್ಲಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ನಡೆದು ಹೋಗಿತ್ತು. ಆ ವರ್ಷ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿತ್ತು..ಪುತ್ರ ರಾಜೀವ್ ಗಾಂಧಿ ಪ್ರಧಾನಿ ಚುಕ್ಕಾಣಿ ಹಿಡಿದಿದ್ದರು. ಆದರೆ ಇಡೀ ದೇಶದಲ್ಲಿ ಕಾಂಗ್ರೆಸ್ ಅಲೆ ಎದ್ದಿತ್ತು..ಆಂಧ್ರಪ್ರದೇಶವೊಂದನ್ನು ಹೊರತುಪಡಿಸಿ. ಈ ಚುನಾವಣೆಯಲ್ಲಿ ಎನ್ ಟಿಆರ್ ಪಕ್ಷ ಬಹುಮತ ಪಡೆಯುವ ಮೂಲಕ ಮತ್ತೆ ಸಿಎಂ ಗದ್ದುಗೆ ಏರಿದ್ದರು.

2 ರೂಪಾಯಿಗೆ ಒಂದು ಕಿಲೋ ಅಕ್ಕಿ ಎನ್ ಟಿಆರ್ ಜನಪ್ರಿಯ ಸ್ಕೀಮ್ ಗಳಲ್ಲಿ ಒಂದಾಗಿತ್ತು. ಅದರ ಜೊತೆಗೆ ಬಡಮಕ್ಕಳಿಗಾಗಿ ಶಾಲೆಗಳಲ್ಲಿ ಮಧ್ಯಾಹ್ನದ ಊಟದ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಎನ್ ಟಿಆರ್ ಜನಾನುರಾಗಿಯಾಗಿದ್ದರು. ತಮ್ಮ ಅಧಿಕಾರಾವಧಿಯಲ್ಲಿ ಆಶ್ವಾನೆಗಳ ಜಾರಿಗಾಗಿ 30 ಬಾರಿ ಸುಗ್ರೀವಾಜ್ಞೆ ಹೊರಡಿಸಿದ್ದರು.

1985ರಲ್ಲಿ ಎನ್ ಟಿಆರ್ ವಿಧಾನಸಭೆಯನ್ನು ವಿಸರ್ಜಿಸಲು ಶಿಫಾರಸು ಮಾಡಿದ್ದರು. ಅದರಂತೆ ರಾಜ್ಯದಲ್ಲಿ ಹೊಸದಾಗಿ ನಡೆದ ಚುನಾವಣೆಯಲ್ಲಿ ಟಿಡಿಪಿ ಭರ್ಜರಿ ಬಹುಮತ ಪಡೆದಿತ್ತು. ಅಷ್ಟೇ ಅಲ್ಲ ಎನ್ ಟಿಆರ್ ಮೂರು ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದರು. ಹೀಗೆ 2ನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದರು. 1989ರಲ್ಲಿ ಚುನಾವಣೆ ನಡೆದಾಗ ಟಿಡಿಪಿ ವಿರೋಧಿ ಅಲೆ ಎದ್ದ ಪರಿಣಾಮ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಏರಿತ್ತು. ಎನ್ ಟಿಆರ್ ಕೂಡಾ ಕಾಲ್ವಾಕುರ್ಥೆ ಕ್ಷೇತ್ರದಲ್ಲಿ ಸೋಲಿನ ರುಚಿ ಕಂಡಿದ್ದು, ಹಿಂದುಪುರ್ ವಿಧಾನಸಭಾ ಕ್ಷೇತ್ರದಲ್ಲಿ ಜಯಸಾಧಿಸಿದ್ದರು. ಈ ಚುನಾವಣೆ ವೇಳೆ ಎನ್ ಟಿಆರ್ ಪಾರ್ಶ್ವವಾಯು ಹೊಡೆತಕ್ಕೆ ಒಳಗಾಗಿದ್ದ ಪರಿಣಾಮ ಪ್ರಚಾರದಿಂದ ದೂರ ಉಳಿದಿದ್ದರಂತೆ. ಇದು ಕೂಡಾ ಪಕ್ಷದ ಸೋಲಿಗೆ ಕಾರಣವಾಗಿತ್ತಂತೆ!

1994ರಲ್ಲಿ ಎನ್ ಟಿಆರ್ ನೇತೃತ್ವದ ಮೈತ್ರಿ(ಎಡಪಕ್ಷ) ಕೂಟ ಅಧಿಕಾರಕ್ಕೆ ಏರಿತ್ತು. 294 ಸ್ಥಾನಗಳಲ್ಲಿ ಎನ್ ಟಿಆರ್ ಮೈತ್ರಿಕೂಟ 269 ಸ್ಥಾನದಲ್ಲಿ ಗೆಲುವು ಸಾಧಿಸಿತ್ತು. ಹೀಗೆ 1994ರವರೆಗೆ ಅಧಿಕಾರ ನಡೆಸಿದ್ದರು. 1985ರಲ್ಲಿ ಪತ್ನಿ ಬಸವತಾರಕಮ್ ವಿಧಿವಶರಾಗಿದ್ದರು. 1993ರಲ್ಲಿ ಎನ್ ಟಿಆರ್ ತೆಲುಗು ಲೇಖಕಿ ಲಕ್ಷ್ಮಿ ಪಾರ್ವತಿಯನ್ನು ವಿವಾಹವಾಗಿದ್ದರು. 1996ರ ಜನವರಿಯಲ್ಲಿ ಎನ್ ಟಿಆರ್ ಇಹಲೋಕ ತ್ಯಜಿಸಿದ್ದರು.

*ನಾಗೇಂದ್ರ ತ್ರಾಸಿ

Advertisement

Udayavani is now on Telegram. Click here to join our channel and stay updated with the latest news.

Next