Advertisement

ಚರಂಡಿಯೇ ಇಲ್ಲದ ನಂದಳಿಕೆ ಗೋಳಿಕಟ್ಟೆ ರಸ್ತೆ

03:48 PM Jun 17, 2023 | Team Udayavani |

ಬೆಳ್ಮಣ್‌: ನಂದಳಿಕೆ ಬೋರ್ಡ್‌ ಶಾಲೆಯಿಂದ ಕೊಪ್ಪಳ -ಪಡುಬೆಟ್ಟುವರೆಗಿನ ರಸ್ತೆ ಕಾಮಗಾರಿ ಪೂರ್ಣಗೊಳ್ಳುವ ಹಂತ ತಲುಪಿದ್ದು ರಸ್ತೆ ಬದಿಯಲ್ಲಿ ಸರಿಯಾಗಿ ಮಣ್ಣು ಹಾಕಿ ಸಮತಟ್ಟು ಮಾಡಿಲ್ಲ. ಸಮರ್ಪಕ ಚರಂಡಿ ವ್ಯವಸ್ಥೆಯಾಗಿಲ್ಲ ಎಂಬ ದೂರು ಗ್ರಾಮಸ್ಥರಿಂದ ಬಂದಿದೆ.

Advertisement

ಕಳೆದ ಹಲವು ತಿಂಗಳಿಂದ ನಡೆಯುತ್ತಿರುವ ಕಾಂಕ್ರೀಟ್‌ ರಸ್ತೆ ಕಾಮಗಾರಿ ಅವೈಜ್ಞಾನಿಕ ರೀತಿಯಲ್ಲಿದ್ದು ಗುತ್ತಿಗೆದಾರ ಕಾಮಗಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎನ್ನುವ ಆರೋಪ ನಂದಳಿಕೆ ಕೊಪ್ಪಳ ಭಾಗದ ಗ್ರಾಮಸ್ಥರದ್ದಾಗಿದೆ.

ನಂದಳಿಕೆ ಗೋಳಿಕಟ್ಟೆ ಪರಿಸರದಲ್ಲಿ ರಸ್ತೆಯ ಎರಡೂ ಬದಿಯಲ್ಲಿ ಮಣ್ಣು ಹಾಕಿ ಸಮತಟ್ಟು ಮಾಡದ ಹಿನ್ನೆಲೆಯಲ್ಲಿ ಎದುರು ಬದುರಾಗುವ ವಾಹನ ಚಾಲಕರು ಇಲ್ಲಿ ನಿತ್ಯ ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ. ಮಣ್ಣು ಹಾಕದ ಪರಿಣಾಮ ರಸ್ತೆಯಿಂದ ವಾಹನವನ್ನು ಕೆಳಗೆ ಇಳಿಸುವಂತಿಲ್ಲ, ಅಲ್ಲದೆ ಸ್ಪಲ್ಪ ಎಡವಿದರೂ ವಾಹನ ಪಲ್ಟಿಯಾಗುವ ಸಾಧ್ಯತೆ ದಟ್ಟವಾಗಿದೆ. ರಸ್ತೆಯ ಒಂದು ಬದಿಯಲ್ಲಿ ಆಳವಾದ ಗುಂಡಿಯಿದ್ದು ಇದೇ ಪರಿಸರದಲ್ಲಿ ಮಣ್ಣು ಹಾಕಿಲ್ಲ ಎನ್ನುವ ಆರೋಪ ಗ್ರಾಮಸ್ಥರದ್ದು. ಇನ್ನೂ ಹಲವು ಕಡೆಗಳಲ್ಲಿ ಬೇಕಾಬಿಟ್ಟಿ ಚರಂಡಿ ಮುಚ್ಚುವ ರೀತಿಯಲ್ಲಿ ಮಣ್ಣು ಹಾಕಿ ಸಮತಟ್ಟು ಮಾಡಿದ್ದಾರೆ, ಆದರೆ ಅಗತ್ಯವಿರುವಲ್ಲಿ ಮಣ್ಣು ಹಾಕಿಲ್ಲವಾದ್ದರಿಂದ ಪ್ರತೀ ನಿತ್ಯ ಈ ಭಾಗದ ವಾಹನ ಸವಾರರು ಸಮಸ್ಯೆ ಎದುರಿಸುವಂತಾಗಿದೆ.

ಕಾಂಕ್ರೀಟ್‌ ರಸ್ತೆಯ ಕಾಮಗಾರಿ ಮುಗಿದ ಬಳಿಕ ರಸ್ತೆಯ ಎರಡು ಇಕ್ಕೆಲಗಳಲ್ಲಿ ಮಣ್ಣು ಹಾಕಿ ಸಮತಟ್ಟು ಮಾಡುವುದು ಸಾಮಾನ್ಯ. ಆದರೆ ಇಲ್ಲಿನ ರಸ್ತೆಯಲ್ಲಿ ಮಣ್ಣು ಹಾಕಿದರೂ ಎಲ್ಲೂ ಕೂಡ ಸಮತಟ್ಟು ಮಾಡಿಲ್ಲ. ಅಗತ್ಯ, ಅಪಾಯಕಾರಿಯಾಗಿರುವ ಪ್ರದೇಶಕ್ಕೆ ಇನ್ನು ಕೂಡ ಮಣ್ಣು ಹಾಕಿ ಸಮತಟ್ಟು ಮಾಡುವಲ್ಲಿ ಗುತ್ತಿಗೆದಾರ ಮನಸ್ಸು ಮಾಡುತ್ತಿಲ್ಲ ಎಂಬ ದೂರು ಬಲವಾಗಿದೆ.

ಚರಂಡಿಯೇ ಇಲ್ಲ: ರಸ್ತೆಯ ಎರಡು ಬದಿಗೆ ಮಣ್ಣು ಹಾಕಿದ ಕೆಲವೊಂದು ಪ್ರದೇಶದಲ್ಲಿ ಚರಂಡಿಯೇ ಮಾಯವಾಗಿದೆ. ಮಳೆ ಸುರಿದರೆ ನೇರವಾಗಿ ಪಕ್ಕದ ಮನೆಯಂಗಳಕ್ಕೆ ಮಳೆ ನೀರು ಹರಿಯುವ ಎಲ್ಲ ಸಾಧ್ಯತೆಗಳಿವೆ. ಇದೀಗ ಕಳೆದೆರಡು ದಿನಗಳಿಂದ ಚರಂಡಿ ನಿರ್ಮಿಸುವ ಕಾರ್ಯ ಮಾಡಿದರೂ ಅದು ಅಸಮರ್ಪಕವಾಗಿದೆ. ಕಾಟಾಚಾರಕ್ಕೆ ಚರಂಡಿ ನಿರ್ಮಿಸಿದಂತಿದೆ. ಮಣ್ಣು ತೆಗೆದು ಚರಂಡಿ ಮಾಡಿದರೂ ಸರಿಯಾಗಿ ನೀರು ಹರಿದು ಹೋಗಲು ಸಾಧ್ಯವಿಲ್ಲ. ಅಲ್ಲಲ್ಲಿ ಚರಂಡಿಯಲ್ಲಿ ಇನ್ನೂ ಮಣ್ಣು ತುಂಬಿ ಹೋಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

Advertisement

ಪದೆ ಪದೇ ವಿನಾ ಅಗೆತ: ನಂದಳಿಕೆ ಗೋಳಿಕಟ್ಟೆ ರಸ್ತೆ ಬದಿ ಪದೇ ಪದೇ ಅಗೆಯುವುದರಿಂದ ಇಡೀ ಪರಿಸರ ಧೂಳಿನಿಂದ ಕೂಡಿದೆ. ಒಂದು ಬಾರಿ ರಸ್ತೆ ನಿರ್ಮಾಣಕ್ಕೆ ರಸ್ತೆಯ ಬದಿ ಅಗೆದು ಹಾಕಿದ್ದು ಮತ್ತೆ ಮಣ್ಣು ಹಾಕುವ ಸಂದರ್ಭ ಸಂಪೂರ್ಣ ಧೂಳು ತುಂಬಿತ್ತು. ಬಳಿಕ ಪೈಪ್‌ಲೈನ್‌ ಕಾಮಗಾರಿಗಾಗಿ ರಸ್ತೆ ಅಗೆದು ಹಾಕಿದ್ದು ಮತ್ತೆ ಚರಂಡಿಗಾಗಿ ಅಗೆದು ಇಡೀ ರಸ್ತೆಯುದ್ದಕೂ ಧೂಳಿನ ವಾತಾವರಣ ನಿರ್ಮಾಣವಾಗಿದೆ. ಧೂಳಿನಿಂದ ಪರಿಸರದ ಮನೆಗಳು ಸಂಪೂರ್ಣ ಧೂಳಿನಿಂದ ಆವೃತ್ತವಾಗಿವೆ. ದಿನಕ್ಕೆ ಒಂದು ಬಾರಿ ಬೆಳಗ್ಗೆ ನೀರು ಸಿಂಪಡಿಸುತ್ತಿದ್ದು ಬಳಿಕ ಸಂಜೆಯವರೆಗೂ ಧೂಳಿನಲ್ಲೇ ಜನಜೀವನ ಕಳೆಯಬೇಕಾಗಿದೆ.

ರಸ್ತೆ ಬುಡಕ್ಕೆ ಮಣ್ಣು ಹಾಕಲು ಮನವಿ: ಗೋಳಿಕಟ್ಟೆಯಿಂದ ಕೊಪ್ಪಳ ಸಾಗುವ ರಸ್ತೆಯ ಇಳಿಜಾರು ರಸ್ತೆಯಲ್ಲಿ ಆಳವಾದ ಗುಂಡಿಯಿದ್ದರೂ ರಸ್ತೆಯ ಬುಡಕ್ಕೆ ಮಣ್ಣು ತುಂಬದಿರುವುದು ಗುತ್ತಿಗೆದಾರರ ಬೇಜವಾಬ್ದಾರಿಯಾಗಿದೆ. ನಿತ್ಯ ಇಲ್ಲಿ ನೂರಾರು ಘನ ವಾಹನಗಳು ಓಡಾಡುವ ಸಂದರ್ಭ ಸಣ್ಣ ಪುಟ್ಟ ವಾಹನ ಸವಾರರು ಎಡವಟ್ಟು ಮಾಡಿಕೊಳ್ಳು ವಂತಾಗಿದೆ. ಹೀಗಾಗಿ ಕೂಡಲೇ ರಸ್ತೆ ಆಳಕ್ಕೆ ಮಣ್ಣು ತುಂಬಿಸಿ ಸಮತಟ್ಟು ಮಾಡುವ ಅಗತ್ಯವಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸವಾರರಿಗೆ ಸಮಸ್ಯೆ
ರಸ್ತೆ ಕಾಮಗಾರಿ ಆರಂಭಗೊಂಡು ಹಲವು ತಿಂಗಳು ಕಳೆದರೂ ಇನ್ನೂ ವಿಳಂಬವಾಗುತ್ತಿದೆ. ಕಾಮಗಾರಿ ನಡೆದಲ್ಲಿ ಇನ್ನೂ ಸರಿಯಾಗಿ ಮಣ್ಣು ತುಂಬಿಸಿಲ್ಲ. ಗೋಳಿಕಟ್ಟೆಯ ಇಳಿಜಾರು ರಸ್ತೆಯಲ್ಲೂ ಮಣ್ಣು ತುಂಬಿಸದ ಪರಿಣಾಮ ವಾಹನ ಸವಾರರು ಸಮಸ್ಯೆ ಎದುರಿಸುವಂತಾಗಿದೆ.
-ಸಂಪತ್‌, ಗ್ರಾಮಸ್ಥ

ಸವಾರರಿಗೆ ಸಮಸ್ಯೆ
ರಸ್ತೆಯ ಇಕ್ಕೆಲಗಳಿಗೆ ಸರಿಯಾಗಿ ಮಣ್ಣು ತುಂಬಿಸಿ ಸಮತಟ್ಟು ಮಾಡಿಲ್ಲ. ಹೀಗಾಗಿ ರಸ್ತೆಯಿಂದ ವಾಹನ ಕೆಳಗೆ ಇಳಿಸಲು ಭಯವಾಗುತ್ತದೆ. ಕಾಟಾಚಾರಕ್ಕೆ ರಸ್ತೆಯ ಬುಡಕ್ಕೆ ಮಣ್ಣು ಹಾಕಿದ್ದಾರೆ, ಇದು ಅವೈಜ್ಞಾನಿಕ ಕಾಮಗಾರಿಯಾಗಿದೆ.
-ಕೇಶವ, ವಾಹನ ಚಾಲಕ

ಮಣ್ಣು ತುಂಬಿಸುವ ಕಾರ್ಯ
ರಸ್ತೆ ಗುತ್ತಿಗೆದಾರರಲ್ಲಿ ಈ ಬಗ್ಗೆ ವಿನಂತಿಸಲಾಗಿದೆ. ಚರಂಡಿ ಸಹಿತ ರಸ್ತೆಯ ಇಕ್ಕೆಲಗಳಲ್ಲಿ ಮಣ್ಣು ತುಂಬಿಸುವ ಭರವಸೆ ನೀಡಿದ್ದಾರೆ.
-ನಿತ್ಯಾನಂದ, ನಂದಳಿಕೆ ಗ್ರಾ.ಪಂ. ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next