Advertisement

ತೇಜಸ್ವಿನಿಗೆ ನಂದಾ ಪಾಟೀಲ ವಚನ ಸಂಗೀತ ಪುರಸ್ಕಾರ: ನಾಳೆ ಪ್ರದಾನ

12:55 PM Aug 05, 2017 | Team Udayavani |

ಹುಬ್ಬಳ್ಳಿ: ಉದಯೋನ್ಮುಖ ಹಿಂದೂಸ್ತಾನಿ ಗಾಯಕಿ ತೇಜಸ್ವಿನಿ ಶ್ರೀಹರಿ (ಮಳಗಿ) ಅವರು ಡಾ| ನಂದಾ ಪಾಟೀಲ ವಚನ ಸಂಗೀತ ಪುರಸ್ಕಾರಕ್ಕೆ ಭಾಜನರಾಗಿದ್ದು, ಆ.6ರಂದು ಸಂಜೆ 6:00ಗಂಟೆಗೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. 

Advertisement

ಡಾ| ಮಲ್ಲಿಕಾರ್ಜುನ ಪಾಟೀಲ ಅವರ ದತ್ತಿ ದಾನದಿಂದ ಉದಯೋನ್ಮುಖ ಸಂಗೀತ ಕಲಾವಿದರಿಗೆ ಪುರಸ್ಕಾರ ನೀಡಲಾಗುತ್ತಿದೆ. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ವಹಿಸಲಿದ್ದಾರೆ. 

ಧಾರವಾಡ ಆಕಾಶವಾಣಿಯ ನಿವೃತ್ತ ಹಿರಿಯ ನಿಲಯ ನಿರ್ದೇಶಕ ಸಿ.ಯು. ಬೆಳ್ಳಕ್ಕಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಡಾ| ನಂದಾ ಪಾಟೀಲ, ಡಾ| ಮಲ್ಲಿಕಾರ್ಜುನ ಪಾಟೀಲ ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಶಿವಕುಮಾರ ಪಾಟೀಲ ಅವರ “ಜಗವೆಲ್ಲಾ ನಗುತಿರಲಿ’ ಧ್ವನಿಸುರಳಿ ಕೂಡ ಬಿಡುಗಡೆಯಾಗಲಿದೆ. ನಂತರ ಪ್ರಶಸ್ತಿ ಪುರಸ್ಕೃತೆ ತೇಜಸ್ವಿನಿ ಶ್ರೀಹರಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. 

ಕಲಾವಿದೆ ತೇಜಸ್ವಿನಿ ಪರಿಚಯ: ಡಾ| ನಂದಾ ಪಾಟೀಲ “ವಚನ ಸಂಗೀತ’ ಪುರಸ್ಕಾರಕ್ಕೆ ಭಾಜನರಾದ ತೇಜಸ್ವಿನಿ ಶ್ರೀಹರಿ (ಮಳಗಿ) ಅವರು ಹುಬ್ಬಳ್ಳಿಯ ಶೋಭಾ ಹಾಗೂ ಮುರಲೀಧರ ಮಳಗಿ ಅವರ ಪುತ್ರಿಯಾಗಿದ್ದು, ಬಾಲ್ಯದಿಂದಲೇ ಸಂಗೀತದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು.

ನಾಡಿನ ಹೆಸರಾಂತ ಹಿಂದೂಸ್ತಾನಿ ಗಾಯಕ ಪಂ| ಬಾಲಚಂದ್ರ ನಾಕೋಡ ಅವರಿಂದ ಸಂಗೀತಾಭ್ಯಾಸ ಆರಂಭಿಸಿದ ತೇಜಸ್ವಿನಿ ಅವರು ನಂತರ ಪಂ| ಕೃಷ್ಣರಾವ್‌ ಇನಾಮದಾರ ಹಾಗೂ ಡಾ| ಗಂಗೂಬಾಯಿ ಹಾನಗಲ್ಲ ಗುರುಕುಲದ ವಿದುಷಿ ವಿಜಯಾ ಜಾಧವ ಅವರಿಂದಲೂ ಸಂಗೀತ ತರಬೇತಿ ಪಡೆದಿದ್ದಾರೆ.

Advertisement

ಅಲ್ಲದೇ ಪದ್ಮಶ್ರೀ ಡಾ| ವೆಂಕಟೇಶ ಕುಮಾರ ಅವರ ಮಾರ್ಗದರ್ಶನ ಪಡೆದಿದ್ದಾರೆ. ತೇಜಸ್ವಿನಿ ತಮ್ಮ 16ನೇ ವಯಸ್ಸಿನಲ್ಲಿ ಈ-ಟಿವಿ ಆಯೋಜಿಸಿದ್ದ “ವಾಯ್ಸ ಆಫ್‌ ಕರ್ನಾಟಕ’ ರಿಯಾಲಿಟಿ ಶೋದಲ್ಲಿ ಉತ್ತರ ಕರ್ನಾಟಕದಿಂದ ಪ್ರತಿನಿಧಿಸಿದ್ದರು. ಮೈಸೂರು ದಸರಾ ಹಾಗೂ ಹಂಪಿ ಉತ್ಸವಗಳಲ್ಲದೇ ಅನೇಕ ಜಿಲ್ಲಾ ಉತ್ಸವಗಳಲ್ಲಿ ಸೇರಿದಂತೆ ರಾಜ್ಯ-ಹೊರ ರಾಜ್ಯದ ಇನ್ನಿತರೆಡೆ ಸಂಗೀತ ಕಾರ್ಯಕ್ರಮ ನೀಡಿ ಜನಮನ ಸೂರೆಗೊಂಡಿದ್ದಾರೆ. 

ಕಳೆದ ವರ್ಷ “ನಿನ್ನ ಅಂಗಳದೊಳಗೆ’ ಎಂಬ ದಾಸವಾಣಿ ಸಿಡಿ ಕೂಡ ಬಿಡುಗಡೆಗೊಂಡಿದೆ. ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಇಂಜಿನಿಯರಿಂಗ್‌ ಪದವಿ ಪಡೆದಿರುವ ತೇಜಸ್ವಿನಿ ಸದ್ಯ ಬೆಂಗಳೂರಿನ ಅಂತಾರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿದುಷಿ ಪೂರ್ಣಿಮಾ ಭಟ್‌ ಅವರಲ್ಲಿ ಸಂಗೀತಾಭ್ಯಾಸ ಮುಂದುವರೆಸಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next