ಕಲಬುರಗಿ: ಈಗಿನ ತಂತ್ರಜ್ಞಾನ ಯುಗದಲ್ಲಿ ಗುರು ಹಿರಿಯರು, ತಂದೆ- ತಾಯಿ ಮೇಲಿನ ಗೌರವ ಕ್ಷೀಣಿಸುತ್ತಿದ್ದು, ಇದಕ್ಕೆ ಸಂಸ್ಕಾರ ರಹಿತ ಜೀವನವೇ ಮುಖ್ಯ ಕಾರಣವಾಗುತ್ತಿದೆ ಎಂದು ಮಹಾಗಾಂವ ಕಳ್ಳಿಮಠದ ಶ್ರೀ ಗುರುಲಿಂಗ ಶಿವಾಚಾರ್ಯರು ನುಡಿದರು.
ತಾಲೂಕಿನ ಭೂಸುಣಗಿ ಗ್ರಾಮದ ಕಳ್ಳಿಮಠದಲ್ಲಿ ಲಿಂ| ಚನ್ನಬಸವ ಶಿವಾಚಾರ್ಯರ ಸ್ಮರಣಾರ್ಥ ಹಮ್ಮಿಕೊಂಡಿದ್ದ ಶ್ರಾವಣ ಮಾಸದ ಮುಕ್ತಾಯ, ಪ್ರಗತಿಪರ ರೈತರಿಗೆ ಸನ್ಮಾನ ಹಾಗೂ ಪತ್ರಕರ್ತರಿಗೆ ಸತ್ಕಾರ, ಖಾಂಡ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಧರ್ಮ ಸಮಾಜ ಜೋಡಿಸಿದರೇ, ಜಾತಿ ಸಮಾಜ ಒಡೆಯುತ್ತಿದೆ, ಆದ್ದರಿಂದ ಎಲ್ಲರೂ ಧರ್ಮದ ಮಾರ್ಗದಲ್ಲಿ ಸಾಗಬೇಕು. ಅಲ್ಲದೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಸಂಸ್ಕಾರ ಎರಡನ್ನೂ ನೀಡಬೇಕು. ಇವೆರಡು ಬಾಳಿನ ನಂದಾ ದೀಪ ಎಂದರು. ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ ಮಾತನಾಡಿ, ಮಾತು ಸಮಾಜದ ಸ್ವಾಮರಸ್ಯಕ್ಕಾಗಿ, ಐಕ್ಯತೆಗಾಗಿ, ಸ್ವಾಮರಸ್ಯ ಮತ್ತು ಸಹೋದರತ್ವ ಬೆಳೆಸಲು ಉಪಯೋಗವಾಗಬೇಕು. ಆಗ ಮಾತ್ರ ಮಾತೆಂಬುದು ಜ್ಯೋರ್ತಿಲಿಂಗ ಆಗುತ್ತದೆ ಎಂದು ಹೇಳಿದರು.
ಬಿಜೆಪಿ ಯುವ ಮುಖಂಡ ಯಶ್ವಂತರಾಯ ಅಷ್ಠಗಿ ಮಾತನಾಡಿ, ಮಹಾಗಾಂವ ಕಳ್ಳಿಮಠದ ಗುರುಲಿಂಗ ಶಿವಾಚಾರ್ಯರ ಸಾಮಾಜಿಕ ಕಳಕಳಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಸಂಸ್ಕಾರ ನೀಡುತ್ತಿರುವುದು ಮಾದರಿಯಾಗಿದೆ ಎಂದರು.
ವಕೀಲ ಎಂ.ಸಿ. ಕೋರಿಶೆಟ್ಟಿ, ಎಪಿಎಂಸಿ ಉಪಾಧ್ಯಕ್ಷ ರಾಜಕುಮಾರ ಕೋಟಿ, ಪ್ರೊ| ಯಶವಂತರಾಯ ಅಷ್ಠಗಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಎಸ್.ಪಾಟೀಲ, ನಿವೃತ್ತ ಪ್ರಾಧ್ಯಾಪಕ ಡಾ| ಕೆ.ಎಸ್.ಬಂಧು, ಪತ್ರಕರ್ತ ಸುರೇಶ ಲೇಂಗಟಿ, ಬಿಜೆಪಿ ಮುಖಂಡ ಜಗದೀಶ ಪಾಟೀಲ ಸಣ್ಣೂರ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವ ಅಷ್ಠಗಿ, ಶರಣು ಮಾಲಿ ಬಿರಾದಾರ, ಅರುಣಕುಮಾರ ಪಾಟೀಲ ಮುಂತಾದವರಿದ್ದರು. ಪ್ರಾಧ್ಯಾಪಕ ಶಿವಲಿಂಗಯ್ಯ ಕಳ್ಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನಿಲಕುಮಾರ ಕೋರೆ ಸ್ವಾಗತಿಸಿದರು, ಅಂಬಾರಾಯ ಮಡ್ಡೆ ನಿರೂಪಿಸಿದರು.