Advertisement

ಇಂದಿನಿಂದ ರಾಜ್ಯದಲ್ಲಿ ನಮೋ ಹವಾ

11:25 PM Apr 28, 2023 | Team Udayavani |

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾದ ಬಳಿಕ ಇದೇ ಮೊದಲ ಬಾರಿಗೆ ಕರ್ನಾಟಕಕ್ಕೆ ಭೇಟಿ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಎರಡು ದಿನ ರಾಜ್ಯದಲ್ಲಿ ವಾಸ್ತವ್ಯ ಹೂಡಲಿದ್ದು, ಒಟ್ಟು 8 ಜಿಲ್ಲೆಗಳಲ್ಲಿ ಪ್ರಚಾರ ನಡೆಸಲಿದ್ದಾರೆ.

Advertisement

ಎಪ್ರಿಲ್‌ 29 ಹಾಗೂ 30ರಂದು ಪ್ರಧಾನಿ ರಾಜ್ಯ ಪ್ರವಾಸ ನಡೆಸಲಿದ್ದು, ರಾಜಧಾನಿ ಬೆಂಗಳೂರು ಹಾಗೂ ಅರಮನೆ ನಗರಿ ಮೈಸೂರಿನಲ್ಲಿ ರೋಡ್‌ ಶೋ ನಡೆಸಲಿದ್ದಾರೆ. ಇದನ್ನು ಹೊರತುಪಡಿಸಿ ಹುಮ್ನಾಬಾದ್‌, ವಿಜಯಪುರ, ಕುಡಚಿ, ಕೋಲಾರ, ಚನ್ನಪಟ್ಟಣ ಹಾಗೂ ಬೇಲೂರಿನಲ್ಲಿ ಬಹಿರಂಗ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಈಗಾಗಲೇ ರಾಜ್ಯದಲ್ಲಿ ಸೋಮವಾರದಿಂದ ಪ್ರವಾಸ ನಡೆಸುತ್ತಿದ್ದಾರೆ.

29ರಂದು ಏನೇನು?
  ಬೆಳಗ್ಗೆ 8.20ಕ್ಕೆ ದಿಲ್ಲಿ ವಿಮಾನ ನಿಲ್ದಾಣದಿಂದ ಹೊರಟು, 10.20ಕ್ಕೆ ಬೀದರ್‌ಗೆ ಆಗಮನ. ಅಲ್ಲಿಂದ ಹೆಲಿಕಾಪ್ಟರ್‌ ಮೂಲಕ ಹುಮ್ನಾಬಾದ್‌ಗೆ ತೆರಳಿ 11.40ಕ್ಕೆ ಸಾರ್ವಜನಿಕ ಸಭೆಯಲ್ಲಿ ಭಾಗಿ.
  11.50ಕ್ಕೆ ಹುಮ್ನಾಬಾದ್‌ನಿಂದ ಹೊರಟು 12.55ಕ್ಕೆ ವಿಜಯಪುರಕ್ಕೆ ಆಗಮನ. ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಭಾಷಣ.
  2.35ಕ್ಕೆ ವಿಜಯಪುರದಿಂದ ಕುಡಚಿಗೆ ಆಗಮನ. 2.45ಕ್ಕೆ ಸಾರ್ವಜನಿಕ ಸಭೆಯಲ್ಲಿ ಭಾಗಿ.
  4.25ಕ್ಕೆ ಬೆಳಗಾವಿ ವಿಮಾನ ನಿಲ್ದಾಣದಿಂದ ಹೊರಟು 5.30ಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮನ. 7.15ಕ್ಕೆ ಹೆಲಿಕಾಪ್ಟರ್‌ ಮೂಲಕ ಮಾಗಡಿ ರಸ್ತೆ ನೈಸ್‌ ಜಂಕ್ಷನ್‌ಗೆ ಆಗಮನ. 7.15ರಿಂದ 8 ಗಂಟೆಯವರೆಗೆ ರೋಡ್‌ ಶೋ. ಬಳಿಕ ರಸ್ತೆ ಮಾರ್ಗವಾಗಿ ರಾಜಭವನಕ್ಕೆ ಬಂದು ವಾಸ್ತವ್ಯ.
ಎಪ್ರಿಲ್‌ 30
  ಬೆಳಗ್ಗೆ 10.35ಕ್ಕೆ ರಾಜಭವನದಿಂದ ಹೊರಟು 11.20ಕ್ಕೆ ಕೋಲಾರಕ್ಕೆ ಆಗಮನ. 11.30ಕ್ಕೆ ಸಾರ್ವಜನಿಕ ಸಭೆ.
  12.35ಕ್ಕೆ ಚನ್ನಪಟ್ಟಣಕ್ಕೆ ಆಗಮನ. 1.25ಕ್ಕೆ ಸಾರ್ವಜನಿಕ ಸಭೆಯಲ್ಲಿ ಭಾಷಣ.
  3.40ಕ್ಕೆ ಬೇಲೂರಿನಲ್ಲಿ ಸಾರ್ವಜನಿಕ ಸಭೆ.
  6.35ರಿಂದ 7.30 ಮೈಸೂರಿನಲ್ಲಿ ರೋಡ್‌ ಶೋ. (ಎಲ್‌ಐಸಿ ಸರ್ಕಲ್‌ನಿಂದ ಬನ್ನಿಮಂಟಪ ) 8 ಗಂಟೆಗೆ ಮೈಸೂರು ವಿಮಾನ ನಿಲ್ದಾಣದಿಂದ ದಿಲ್ಲಿಗೆ ಪ್ರಯಾಣ.

ಸಮಯ ಮೀಸಲು

ಬೆಂಗಳೂರಿನಲ್ಲಿ ರೋಡ್‌ ಶೋ ಮುಗಿದ ಬಳಿಕ ರಾಜಭವನಕ್ಕೆ ಆಗಮಿಸುವ ಪ್ರಧಾನಿ ಮೋದಿ 8.30ರ ಬಳಿಕದ ಸಮಯ ಕಾದಿರಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ರಾಜ್ಯದ ಪ್ರಮುಖ ನಾಯಕರು ಹಾಗೂ ಗಣ್ಯರ ಜತೆಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಕಳೆದ ಬಾರಿ ರಾಜ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ ಕ್ರೀಡಾ ಪಟುಗಳು, ಸೋಷಿಯಲ್‌ ಮೀಡಿಯಾ ಇನ್‌ಫ್ಲುಯನ್ಸರ್‌ಗಳ ಜತೆಗೆ ಭೋಜನ ಸವಿದಿದ್ದರು. ಆದರೆ ವಿರಾಮದ ವೇಳೆಯಲ್ಲಿ ಪ್ರಧಾನಿ ಕಾರ್ಯಕ್ರಮಗಳೇನೆಂಬ ಬಗ್ಗೆ ಬಿಜೆಪಿ ನಾಯಕರು ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ.

Advertisement

ಚನ್ನಪಟ್ಟಣದ ಮೇಲೆ ಎಲ್ಲರ ದೃಷ್ಟಿ

ಮೋದಿ ಚನ್ನಪಟ್ಟಣದಲ್ಲಿ ಆಯೋಜಿಸಿರುವ ಬಹಿರಂಗ ಸಭೆಯಲ್ಲಿ ಏನು ಹೇಳಲಿದ್ದಾರೆ ಎಂಬ ಕುತೂಹಲ ಈಗ ಸೃಷ್ಟಿಯಾಗಿದೆ. ಹಳೆ ಮೈಸೂರು ಭಾಗದಲ್ಲಿ ಇದುವರೆಗೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರೂ ಪ್ರಧಾನಿ ಮೋದಿ ಎಚ್‌.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿಯವರ ವಿರುದ್ಧ ಇದುವರೆಗೆ ಮಾತನಾಡಿಲ್ಲ. ಸಮಯ ಸಿಕ್ಕಾಗಲೆಲ್ಲ ಅವರು ದೇವೇಗೌಡರನ್ನು ಶ್ಲಾಘಿಸಿದ್ದಾರೆ. ಆದರೆ ಕುಮಾರಸ್ವಾಮಿಯ ರಾಜಕೀಯ ಕರ್ಮಭೂಮಿ ರಾಮನಗರಕ್ಕೆ ಭೇಟಿ ಕೊಟ್ಟಾಗ ಮೋದಿ ರಾಜಕೀಯ ಅಸ್ತ್ರ ಪ್ರಯೋಗಿಸದೇ ಸುಮ್ಮನೇ ಇರುವುದಿಲ್ಲ ಎಂಬುದು ಬಿಜೆಪಿ ವಲಯದ ಮಾತು. ಹೀಗಾಗಿ ಚನ್ನಪಟ್ಟಣದಲ್ಲಿ ನಡೆಯುವ ಬಹಿರಂಗ ಸಭೆ ಈಗ ಎಲ್ಲರ ಗಮನ ಸೆಳೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next