ಕೋಮಲ್ ಈಸ್ ಬ್ಯಾಕ್ – “ನಮೋ ಭೂತಾತ್ಮ-2′ ಸಿನಿಮಾ ನೋಡಿದ ಹೊರಬಂದಾಗ ಹೀಗೆ ಅನಿಸದೇ ಇರದು. ಕೋಮಲ್ ಚಿತ್ರರಂಗದಲ್ಲಿ ಗಟ್ಟಿಸ್ಥಾನ ಪಡೆದುಕೊಂಡಿದ್ದು, ಅವರ ಕಾಮಿಡಿ ಟೈಮಿಂಗ್‌ನಿಂದ. ಅದೇ ಕಾರಣದಿಂದ ಸಿಕ್ಕಾಪಟ್ಟೆ ಬಿಝಿ ನಟರಾಗಿ ಬಹುತೇಕ ಎಲ್ಲಾ ಸ್ಟಾರ್‌ಗಳ ಚಿತ್ರಗಳಲ್ಲೂ ಮಿಂಚಿದ್ದರು. ಆದರೆ, ಗ್ಯಾಪ್‌ನಲ್ಲಿ ಹೀರೋ ಆಗಿ ಕಾಮಿಡಿಗಿಂತ ಆ್ಯಕ್ಷನ್, ಲವ್‌ಸ್ಟೋರಿ ಹಿಂದೆ ಬಿದ್ದು ಸ್ವಲ್ಪ ಮಂಕಾದಂತಿದ್ದರು. ಆದರೆ, “ನಮೋ ಭೂತಾತ್ಮ-2′ ಸಿನಿಮಾ ನೋಡಿದವರು ಮತ್ತೆ ಕೋಮಲ್ ಕಾಮಿಡಿಯನ್ನು ಮನಸಾರೆ ಎಂಜಾಯ್ ಮಾಡುವುದರಲ್ಲಿ ಎರಡು ಮಾತಿಲ್ಲ. ಈ ಮೂಲಕ ಕೋಮಲ್ ಕೂಡಾ ತಮ್ಮ “ಮೂಲಸ್ಥಾನ’ ಸೇರಿದಂತಿದೆ.
ಹೆಸರಿಗೆ ತಕ್ಕಂತೆ ಇದೊಂದು ಕಾಮಿಡಿ, ಹಾರರ್ ಚಿತ್ರ. ಒಂದು ರೆಗ್ಯುಲರ್ ಹಾರರ್ ಸಿನಿಮಾದಲ್ಲಿ ಭಯಬೀಳಿಸಲು ಏನೇನು ಮಾಡುತ್ತಾರೋ ಅದೇ ಇಲ್ಲೂ ಮುಂದುವರೆದಿದೆ. ಮನೆಯೊಂದರಲ್ಲಿ ವಿಚಿತ್ರವಾಗಿ ನಡೆಯುವ ಒಂದಷ್ಟು ಘಟನೆಗಳು, ಗೊಂಬೆಯ ಚಲನೆ, ತನ್ನಷ್ಟಕ್ಕೆ ಬೀಳುವ ಬಾಗಿಲು, ಯಾರೋ ಅತ್ತಿಂದಿತ್ತ ಚಲಿಸಿದಂತೆ ಭಾಸ, ಕಿಟರನೇ ಕಿರುಚಿಕೊಳ್ಳುವ ಪಾತ್ರಧಾರಿಗಳು… ಹೀಗೆ ಹಾರರ್ ಸಿನಿಮಾಗಳ ಸಿದ್ಧಸೂತ್ರಗಳನ್ನು ಚಾಚುತಪ್ಪದೇ ಮಾಡಿದ ಸಿನಿಮಾವಿದು. ಆದರೆ, ಈ ಸಿನಿಮಾ ಎಲ್ಲೂ ಬೋರ್ ಹೊಡೆಸದೇ ನೋಡಿಸಿಕೊಂಡು ಹೋಗುತ್ತದೆ ಎಂದರೆ ಅದಕ್ಕೆ ಕಾರಣ ಕೋಮಲ್ ಹಾಗೂ ಇತರ ಕಲಾವಿದರು. ಇಲ್ಲಿ ಭಯಕ್ಕಿಂತ ನಗುವಿನಲ್ಲೇ ಇಡೀ ಸಿನಿಮಾ ಸಾಗುತ್ತದೆ. ಆ ಮಟ್ಟಿಗೆ ಇದು ನಗಿಸುವ ಭೂತ.
ಕೋಮಲ್ ತಮ್ಮ ಕಾಮಿಡಿ ಟೈಮಿಂಗ್ ಅನ್ನು ಇಲ್ಲಿ ಚೆನ್ನಾಗಿ ಬಳಸಿಕೊಂಡಿದ್ದಾರೆ ಮತ್ತು ಅದು ಇಲ್ಲಿ ಸಿನಿಮಾಕ್ಕೆ ಪ್ಲಸ್ ಆಗಿದೆ ಕೂಡಾ. ಬಕ್ರಾ ಮಾಡುವ ಕಾಮಿಡಿ ಶೋವೊಂದರಿಂದ ತೆರೆದುಕೊಳ್ಳುವ ಸಿನಿಮಾ, ನೋಡ ನೋಡುತ್ತಲೇ ನಗೆಹಬ್ಬವಾಗಿ ಸಾಗುತ್ತದೆ. ಇಲ್ಲಿ ಬರುವ ಡೈಲಾಗ್ ಹಾಗೂ ಅದನ್ನು ಕೋಮಲ್ ತಮ್ಮ ವಿಭಿನ್ನ ಮ್ಯಾನರಿಸಂ ಮೂಲಕ ಪ್ರಸ್ತುತಪಡಿಸಿದ್ದು ಕೂಡಾ ಸಿನಿಮಾದ ಓಘಕ್ಕೆ ಸಾಥ್ ಕೊಟ್ಟಿದೆ.
ಇಡೀ ಸಿನಿಮಾದ ಮೂಲ ಉದ್ದೇಶ ಭಯ ಹಿನ್ನೆಲೆಯಲ್ಲಿ ಪ್ರೇಕ್ಷಕರನ್ನು ನಗಿಸುವುದು. ಹಾಗಾಗಿ, ಲಾಜಿಕ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ನಗೆಹಬ್ಬಕ್ಕೆ ಏನು ಬೇಕೋ ಅದನ್ನು ಮಾಡಿಕೊಂಡು ಹೋಗಿದ್ದಾರೆ ನಿರ್ದೇಶಕ ಮುರಳಿ. ಅವರ ಆ ಪ್ರಯತ್ನ ತೆರೆಮೇಲೆ ವರ್ಕ್ ಆಗಿದೆ ಕೂಡಾ. ಮೂಲತಃ ನೃತ್ಯ ನಿರ್ದೇಶಕರಾಗಿರುವ ಮುರಳಿ ಇಲ್ಲೂ ಒಂದೆರಡ ಚೆಂದದ ಹಾಡು ನೀಡಿದ್ದಾರೆ.
ಮೊದಲೇ ಹೇಳಿದಂತೆ ಕೋಮಲ್ ಅವರ ಔಟ್ ಅಂಡ್ ಔಟ್ ಕಾಮಿಡಿಯನ್ನು ಎಂಜಾಯ್ ಮಾಡುತ್ತಿದ್ದವರಿಗೆ “ನಮೋ ಭೂತಾತ್ಮ-2′ ಇಷ್ಟವಾಗುತ್ತದೆ. ಅವರ ಕಾಮಿಡಿ ಟೈಮಿಂಗ್, ಮ್ಯಾನರಿಸಂ ಎಲ್ಲವೂ ಸೂಪರ್. ಅವರ “ಕಾಮಿಡಿ ಕಂಬ್ಯಾಕ್’ಗೆ “ನಮೋ ಭೂತಾತ್ಮ-2′ ಒಂದು ವೇದಿಕೆಯಾಗಬಹುದು. ಉಳಿದಂತೆ ಗೋವಿಂದೇ ಗೌಡ, ವರುಣ್, ಲೇಖಾ ಚಂದ್ರ ಸೇರಿದಂತೆ ಇತರರು ಈ ಸಿನಿಮಾದಲ್ಲಿ ನಟಿಸಿದ್ದು, ಪಾತ್ರಕ್ಕೆ ಹೊಂದಿಕೊಂಡಿದ್ದಾರೆ.
ರವಿಪ್ರಕಾಶ್ ರೈ