Advertisement

ಮೆಟ್ರೋ: ಪರೀಕ್ಷೆ ಮುಗೀತು..ಸವಾಲು ಬಂತು?

10:41 AM Nov 28, 2020 | Suhan S |

ಬೆಂಗಳೂರು: “ನಮ್ಮ ಮೆಟ್ರೋ’ ಎರಡನೇ ಹಂತದ ಕನಕಪುರ ರಸ್ತೆ ಮೆಟ್ರೋ ಮಾರ್ಗ ಸುರಕ್ಷತೆ ಪರೀಕ್ಷೆಯಂತೂ ಪಾಸಾಯಿತು. ಬೆನ್ನಲ್ಲೇ ಈಗ ಲಭ್ಯವಿರುವ ರೈಲುಗಳಲ್ಲಿ ಟ್ರಿಪ್‌ಗಳಿಗೆ ಕತ್ತರಿ ಬೀಳದಂತೆ ಕಾರ್ಯಾಚರಣೆ ಮಾಡುವ ಸವಾಲು ಇದೆ.

Advertisement

ಯಲಚೇನಹಳ್ಳಿ-ಅಂಜನಾಪುರ ಟೌನ್‌ಶಿಪ್‌ ಸುಮಾರು 6 ಕಿ.ಮೀ. ಇದ್ದು, 5 ನಿಲ್ದಾಣಸೇರ್ಪಡೆ ಆಗಿವೆ. ಪ್ರತಿ ನಿಲ್ದಾಣ ಕ್ರಮಿಸಲು ಕನಿಷ್ಠ 2 ನಿಮಿಷಬೇಕಾಗುತ್ತದೆ. ಜತೆಗೆ ನಿಲುಗಡೆ ಹಾಗೂ ಕೊನೆ ನಿಲ್ದಾಣ ದಾಟಿ ಮೆಟ್ರೋ ಮಾರ್ಗ ಬದಲಾವಣೆ ಆಗಬೇಕು. ಇದೆಲ್ಲದಕ್ಕೂ ಕನಿಷ್ಠ10-12 ನಿಮಿಷ ಬೇಕು. ಆಗ ಹೆಚ್ಚು ರೈಲುಗಳು ಬೇಕಾಗುತ್ತದೆ. ಇದಕ್ಕಾಗಿ”ಸ್ಟಾಂಡ್‌ಬೈ'(ಹೆಚ್ಚುವರಿಯಾಗಿ ಮೀಸಲಿಟ್ಟ) ರೈಲುಗಳನ್ನು ಕಾರ್ಯಾಚರಣೆಗೆ ಇಳಿಸುವ ಅನಿವಾರ್ಯತೆ ಎದುರಾಗಲಿದೆ.

ಸದ್ಯಕ್ಕಂತೂ ಕೋವಿಡ್ ಹಾವಳಿ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಸಾಕಷ್ಟು ಕಡಿಮೆ ಇದೆ. ಹೀಗಾಗಿ ಯಾವುದೇ ಸಮಸ್ಯೆ ಇಲ್ಲ. ಆದರೆ, ಸಹಜ ಸ್ಥಿತಿಗೆ ಮರಳಿದ ನಂತರ ಈ ವಿಸ್ತರಿಸಿದ ಮಾರ್ಗವನ್ನು ಲಭ್ಯವಿರುವ ರೈಲುಗಳಲ್ಲಿ ಇದೇ “ಫ್ರಿಕ್ವೆನ್ಸಿ’ಯಲ್ಲಿ ಸೇವೆ ನೀಡುವುದು ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ಸಿಎಲ್‌)ಕ್ಕೆ ಸವಾಲಾಗಿ ಪರಿಣಮಿಸಲಿದೆ.

ದಟ್ಟಣೆ ಸಮಯದಲ್ಲಿ ಈಗ4-5 ನಿಮಿಷಗಳ ಅಂತರದಲ್ಲಿ ರೈಲು ಸೇವೆ ನೀಡಲಾಗುತ್ತಿದೆ. ಇದಕ್ಕಾಗಿ ನೇರಳೆ 28 ಹಾಗೂ ಹಸಿರು ಮಾರ್ಗದಲ್ಲಿ 6 ಬೋಗಿಗಳ 22 ಮೆಟ್ರೋ ರೈಲುಗಳು ಇವೆ. ಇದರಲ್ಲಿ ತಲಾ 4 ರೈಲುಗಳನ್ನು ತುರ್ತು ಸಂದರ್ಭದಲ್ಲಿ ಅಂದರೆ ಕಾರ್ಯಾಚರಣೆ ಮಾಡುತ್ತಿರುವ ರೈಲುಗಳು ಮಾರ್ಗಮಧ್ಯೆ ಕೈಕೊಟ್ಟರೆ ಬಳಸಲಾಗುತ್ತದೆ. ಒಂದು ವೇಳೆ ರೈಲುಗಳ ನಡುವಿನ ಅಂತರ

ಕಡಿಮೆ ಮಾಡಿದರೆ, ಹೆಚ್ಚು ಟ್ರಿಪ್‌ ಪೂರೈಸಬಹುದು. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಪ್ರಯಾಣಿಕರು ಬರುತ್ತಿಲ್ಲ. ಈ ಮಧ್ಯೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿದೆ. ಹೀಗಿರುವಾಗ, ಟ್ರಿಪ್‌ ಹೆಚ್ಚಿಸುವ ಗೋಜಿಗೆ ಬಿಎಂಆರ್‌ಸಿಎಲ್‌ ಮುಂದಾಗುವ ಸಾಧ್ಯತೆ ತುಂಬಾಕಡಿಮೆ. ಸಹಜ ಸ್ಥಿತಿಗೆ ಮರಳಿದಾಗ ಹಾಗೂ ಐಟಿ-ಬಿಟಿ ಉದ್ಯಮಗಳು ಸಂಪೂರ್ಣ ಕಚೇರಿಯಿಂದಲೇ ಕೆಲಸ ಶುರುವಾದರೆ, ದಟ್ಟಣೆ ಹೆಚ್ಚಲಿದೆ. ಆಗ ರಾತ್ರಿ 12ರವರೆಗೆ ಸೇವೆ ಸವಾಲು ಆಗಲಿದೆ. ಅಷ್ಟೊತ್ತಿಗೆ ರೈಲುಗಳ ಪೂರೈಕೆಯಾದರೆ, ಸಮಸ್ಯೆ ಆಗದು ಎಂದು ತಜ್ಞರು ವಿಶ್ಲೇಷಿಸುತ್ತಾರೆ.

Advertisement

ಡಿ.3ನೇ ವಾರ ಮುಹೂರ್ತ ಸಾಧ್ಯತೆ : ರೈಲ್ವೆ ಸುರಕ್ಷತಾ ಆಯುಕ್ತರ ತಂಡ ಪರಿಶೀಲನೆ ವೇಳೆಕೆಲವು ತಾಂತ್ರಿಕ ಅಂಶ ಪತ್ತೆ ಮಾಡಿ, ಸರಿಪಡಿಸಲು ಸೂಚಿಸಿದೆ. ಅದಕ್ಕಾಗಿ ಒಂದೆರಡು ವಾರ ಸಮಯ ಹಿಡಿಯುತ್ತದೆ. ಡಿ.2,3ನೇ ವಾರದಲ್ಲಿ ಸೇವೆಗೆ ಮುಕ್ತಗೊಳಿಸುವ ಉದ್ದೇಶ ಇದೆ. ಈ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಇನ್ನು ಈಗಿರುವ ರೈಲುಗಳಲ್ಲೇ ವಿಸ್ತರಿಸಿದ ಮಾರ್ಗದಲ್ಲಿಯಾವುದೇ ವ್ಯತ್ಯಯ ಇಲ್ಲದೆ ಕಾರ್ಯಾಚರಣೆ ಮಾಡಬಹುದು ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್ ಸ್ಪಷ್ಟಪಡಿಸುತ್ತಾರೆ.

ಮಾರ್ಚ್‌ಗೆ 7 ರೈಲು ಸೇರ್ಪಡೆ? :  ಮುಂದಿನ ಮಾರ್ಚ್‌-ಏಪ್ರಿಲ್‌ಗೆಕೆಂಗೇರಿ ಮಾರ್ಗವನ್ನೂ ಪೂರ್ಣಗೊಳಿಸುವ ಗುರಿ ಇದೆ. ಈ ಮಧ್ಯೆ 2ನೇ ಹಂತದ ಯೋಜನೆಯಡಿ 6 ಬೋಗಿಗಳ ಒಟ್ಟಾರೆ 7 ಮೆಟ್ರೋ ರೈಲುಗಳಿಗೆ ಈ ಹಿಂದೆಯೇ ಭಾರತ್‌ ಅರ್ತ್‌ ಮೂವರ್ ಲಿ.,(ಬಿಇಎಂಎಲ್‌)ಗೆ ಬಿಎಂಆರ್‌ಸಿಎಲ್‌ ಬೇಡಿಕೆಯನ್ನೂ ಇಟ್ಟಿದೆ. ಅದು ಏಕಕಾಲದಲ್ಲಿ ಬರುವ ಮಾರ್ಚ್‌ನಲ್ಲಿ ಪೂರೈಕೆ ಆಗುವ ಸಾಧ್ಯತೆ ಇದೆ. ಇದರಲ್ಲಿ ಸ್ವಲ್ಪ ವಿಳಂಬವಾದರೂ ಸಮಸ್ಯೆ ಆಗಲಿದೆ. ಪ್ರಸ್ತುತ ವಿಸ್ತರಿಸಿದ ಮಾರ್ಗ ಕೇವಲ 6 ಕಿ.ಮೀ. ಇದೆ. ಈಗಿರುವ ರೈಲುಗಳಲ್ಲಿ ನಿಭಾಯಿಸಲು ಸಾಧ್ಯವಿದೆ. ಜತೆಗೆ ಎರಡೂ ಮಾರ್ಗಗಳಲ್ಲಿ(ನೇರಳೆ ಮತ್ತು ಹಸಿರು) ಸುಮಾರು 8 ರೈಲು “ಸ್ಟಾಂಡ್‌ ಬೈ’ ಇವೆ. ಒಂದು ನಿಲ್ದಾಣಕ್ಕೆ ಒಂದು ರೈಲು ಎಂದು ತೆಗೆದುಕೊಂಡರೂ ಸಾಕಾಗುತ್ತದೆ ಎಂದು ತಜ್ಞರುತಿಳಿಸುತ್ತಾರೆ. “ರೈಲ್ವೆ ಸುರಕ್ಷತಾ ಆಯುಕ್ತರುಕೆಲವು ಸಣ್ಣ-ಪುಟ್ಟ ಬದಲಾವಣೆಗಳೊಂದಿಗೆ ಸೇವೆ ಆರಂಭಿಸಲು ಅನುಮತಿ ನೀಡಿದ್ದಾರೆ. ತ್ವರಿತ ಗತಿಯಲ್ಲಿ ವಿಸ್ತರಿಸಿದ ಮಾರ್ಗ ಮುಕ್ತಗೊಳಿಸುವ ಗುರಿ ಇದೆ. ಇದಕ್ಕೂ ಮುನ್ನ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗುವುದು. ಟ್ರಿಪ್‌ಗಳಿಗೆ ಕತ್ತರಿಹಾಕುವ ಅಥವಾ’ಸ್ಟಾಂಡ್‌ ಬೈ’ ಬಳಸುವಯಾವುದೇ ಚಿಂತನೆ ಬಿಎಂಆರ್‌ಸಿಎಲ್‌ ಮುಂದಿಲ್ಲ’ ಎಂದು ನಿಗಮದಕಾರ್ಯಾಚರಣೆ ವಿಭಾಗದ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಸ್ಪಷ್ಟಪಡಿಸಿದರು.

 

-ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next