ಅದು ನಾಲ್ವರು ಸ್ನೇಹಿತರ ತಂಡ. ಕಷ್ಟ-ಸುಖ ಎರಡರಲ್ಲೂ ಜೊತೆಯಾಗಿರುವ ಇಂಥ ಪ್ರಾಣ ಸ್ನೇಹಿತರ ನಡುವೆ, ಸುಳಿಯುವ ಸಣ್ಣ ಸುಳ್ಳಿನ ವಿಷಯ ಸ್ನೇಹಿತರ ಬದುಕಿನ ದಿಕ್ಕನ್ನೇ ಬದಲಾಯಿಸಿ ಅವರನ್ನು ಪೇಚಿಗೆ ಸಿಲುಕಿಸುತ್ತದೆ. ಒಂದು ಸುಳ್ಳಿನಿಂದ ಪ್ರಾಣ ಸ್ನೇಹಿತರು ಹೇಗೆಲ್ಲ ಹೆಣಗಾಡುತ್ತಾರೆ. ಸ್ನೇಹ, ಪ್ರೀತಿ ಮತ್ತು ಬದುಕಿನ ಹೋರಾಟದಲ್ಲಿ ಯಾವುದು ಗೆಲ್ಲುತ್ತದೆ? ಅನ್ನೋದು ಈ ವಾರ ತೆರೆಗೆ ಬಂದಿರುವ “ನಮ್ಮ ಹುಡುಗರು’ ಸಿನಿಮಾದ ಕಥಾಹಂದರ. ತಾವೇ ಹೆಣೆದುಕೊಂಡ ಸುಳ್ಳಿನ ಸುಳಿಯಿಂದ ಈ ಹುಡುಗರು ಹೊರಗೆ ಬರುತ್ತಾರಾ? ಇಲ್ಲವಾ ಅನ್ನೋದು “ನಮ್ಮ ಹುಡುಗರು’ ಸಿನಿಮಾದ ಕ್ಲೈಮ್ಯಾಕ್ಸ್.
“ನಮ್ಮ ಹುಡುಗರು’ ಸಿನಿಮಾದ ಟೈಟಲ್ಲೇ ಹೇಳುವಂತೆ, ಇದೊಂದು ಹಳ್ಳಿಯ ನಾಲ್ವರು ಹುಡುಗರ ಸುತ್ತ ನಡೆಯುವ ಸಿನಿಮಾ. ಹುಡುಗರ ಕಥೆ ಎಂದಮೇಲೆ, ಅಲ್ಲಿ ಸ್ನೇಹ, ಪ್ರೀತಿ, ಹಾಸ್ಯ, ಕೋಪ-ತಾಪ ಎಲ್ಲವೂ ಇರಲೇಬೇಕು. ಅದೆಲ್ಲವನ್ನೂ ಸಮವಾಗಿ ಬೆರೆಸಿ “ನಮ್ಮ ಹುಡುಗರು’ ಸಿನಿಮಾವನ್ನು ತೆರೆಮೇಲೆ ತರಲಾಗಿದೆ.
“ನಮ್ಮ ಹುಡುಗರು’ ಸಿನಿಮಾದ ಮೊದಲರ್ಧ ಮಾಮೂಲಿ ಹುಡುಗರ ಸಿನಿಮಾದಂತೆ ಕಂಡರೂ, ಮಧ್ಯಂತರದ ನಂತರ ಸಿನಿಮಾ ಬೇರೆಯದ್ದೇ ತಿರುವು ಪಡೆದುಕೊಂಡು ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಲ್ಲುತ್ತದೆ.
“ನಮ್ಮ ಹುಡುಗರ’ ಕಥೆ ಗಮನ ಸೆಳೆಯುವಂತಿದ್ದರೂ, ಚಿತ್ರಕಥೆಗೆ ಇನ್ನಷ್ಟು ವೇಗ ಸಿಕ್ಕಿದ್ದರೆ, ಸಂಭಾಷಣೆ ಮತ್ತು ನಿರೂಪಣೆ ಕಡೆಗೆ ಇನ್ನಷ್ಟು ಗಮನ ವಹಿಸಿದ್ದರೆ, ಹುಡುಗರ ಕಥೆ ಇನ್ನಷ್ಟು ಪರಿಣಾಮ ಕಾರಿಯಾಗಿ ಮೂಡಿಬರುವ ಸಾಧ್ಯತೆಗಳಿದ್ದವು.
ಇನ್ನು “ನಮ್ಮ ಹುಡುಗರು’ ಸಿನಿಮಾದಲ್ಲಿ ನವ ನಾಯಕ ನಟ ನಿರಂಜನ್ ಸುಧೀಂದ್ರ ಮೊದಲ ಪ್ರಯತ್ನದಲ್ಲೇ ಲವರ್‌ಬಾಯ್ ಆಗಿ ತೆರೆಮೇಲೆ ಗಮನ ಸೆಳೆಯುತ್ತಾರೆ. ಡೈಲಾಗ್ ಡೆಲಿವರಿ, ಡ್ಯಾನ್ಸ್ ಮತ್ತು ಆ್ಯಕ್ಷನ್ ದೃಶ್ಯಗಳಲ್ಲಿ ಪಕ್ಕಾ ಮಂಡ್ಯದ ಹಳ್ಳಿ ಹೈದನಾಗಿ ನಿರಂಜನ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ನಾಯಕಿ ರಾಧ್ಯಾ ಕೂಡ ಅಂದಕ್ಕೆ ಒಪ್ಪುವಂತೆ ಸಹಜ ಅಭಿನಯ ನೀಡಿದ್ದಾರೆ. ಉಳಿದಂತೆ ಅಲೋಕ್, ಶರತ್ ಲೋಹಿತಾಶ್ವ, ಭವ್ಯಾ ಮೊದಲಾದ ಕಲಾವಿದರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇನ್ನುಳಿದ ಕಲಾವಿದರ ಅಭಿನಯದ ಬಗ್ಗೆ ಹೆಚ್ಚೇನೂ ಹೇಳುವಂತಿಲ್ಲ.
ತಾಂತ್ರಿಕವಾಗಿ ಚಿತ್ರದ ಚಿತ್ರದ ಛಾಯಾಗ್ರಹಣ, ಸಂಕಲನ ಕಾರ್ಯ ಉತ್ತಮವಾಗಿದೆ. ಒಂದೆರಡು ಹಾಡುಗಳು ಥಿಯೇಟರ್ ಹೊರಗೂ ಗುನುಗುವಂತಿದೆ. ಒಟ್ಟಾರೆ ಅತಿಯಾದ ನಿರೀಕ್ಷೆಗಳನ್ನು ಇಟ್ಟುಕೊಳ್ಳದೆ ಥಿಯೇಟರ್ ಗೆ ಹೋದವರಿಗೆ, “ನಮ್ಮ ಹುಡುಗರು’ ಒಂದಷ್ಟು ಮನರಂಜನೆ ನೀಡುತ್ತಾರೆ ಎನ್ನಲು ಅಡ್ಡಿಯಿಲ
ಜಿ.ಎಸ್.ಕಾರ್ತಿಕ ಸುಧನ್