Advertisement

ದ.ಕ. ಜಿಲ್ಲೆಗೆ ಹೆಚ್ಚುವರಿ 5 “ನಮ್ಮ ಕ್ಲಿನಿಕ್‌’: ಪಟ್ಟಣ ಪಂಚಾಯತ್‌ ವ್ಯಾಪ್ತಿಯಲ್ಲೂ ಆರಂಭ

11:40 PM Mar 28, 2023 | Team Udayavani |

ಮಂಗಳೂರು: ರಾಜ್ಯ ಆರೋಗ್ಯ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಾಗಿರುವ “ನಮ್ಮ ಕ್ಲಿನಿಕ್‌’ ಯಶಸ್ವಿಯಾಗಿ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಮತ್ತೆ ಐದು ಕ್ಲಿನಿಕ್‌ ಆರಂಭಿಸಲು ಇಲಾಖೆಯಿಂದ ಅನುಮತಿ ಲಭಿಸಿದೆ.

Advertisement

ಅವಿಭಜಿತ ಜಿಲ್ಲೆಯಲ್ಲಿ ಸದ್ಯ 18 ನಮ್ಮ ಕ್ಲಿನಿಕ್‌ಗಳು ಕಾರ್ಯಾಚರಿಸುತ್ತಿದ್ದು, ಈ ಪೈಕಿ 12 ದ.ಕ. ಜಿಲ್ಲೆಯಲ್ಲಿ ಮತ್ತು 6 ಉಡುಪಿ ಜಿಲ್ಲೆಯಲ್ಲಿವೆ. ಈಗ ಎರಡನೇ ಹಂತದಲ್ಲಿ ದ.ಕ. ಜಿಲ್ಲೆಯಲ್ಲಿ 5 ಕ್ಲಿನಿಕ್‌ಗಳು ಸದ್ಯದಲ್ಲೇ ಆರಂಭವಾಗಲಿದ್ದು, ಈ ಬಾರಿ ಪಟ್ಟಣ ಪಂಚಾಯತ್‌ ವ್ಯಾಪ್ತಿಯಲ್ಲಿ ಆರಂಭಿಸಲು ಉದ್ದೇಶಿಸಲಾಗಿದೆ.

ಎರಡನೇ ಹಂತದಲ್ಲಿ ರಾಜ್ಯದ ಕೆಲವು ಜಿಲ್ಲೆಗಳಿಗೆ ಮಾತ್ರ “ನಮ್ಮ ಕ್ಲಿನಿಕ್‌’ ಆರಂಭಿಸಲು ಸಿದ್ಧತೆ ಆರಂಭಿಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ. ಈ ಮೊದಲು ಉಡುಪಿ ಜಿಲ್ಲೆ ಯಿಂದಲೂ ಇಲಾಖೆಗೆ ಪ್ರಸ್ತಾವನೆ ಕಳುಹಿಸ ಲಾಗಿತ್ತು. ಆದರೆ ಅನುಮತಿ ಲಭಿಸಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಗಭೂಷಣ ಉಡುಪ “ಉದಯವಾಣಿ’ಗೆ ತಿಳಿಸಿದ್ದಾರೆ.

ಪ್ರಸ್ತುತ ದ.ಕ. ಜಿಲ್ಲೆಯಲ್ಲಿ ಮಂಗಳೂರು ಪಾಲಿಕೆ ವ್ಯಾಪ್ತಿಯ ಸೂಟರ್‌ಪೇಟೆ, ಬೋಳಾರ, ಬಂದರು, ಪಚ್ಚನಾಡಿ, ಕೋಡಿಕಲ್‌, ಮೀನಕಳಿಯ, ಕುಂಜತ್ತಬೈಲ್‌, ಸುಳ್ಯದ ದುಗ್ಗಲಡ್ಕ, ಮೂಡುಬಿದಿರೆಯ ಗಂಟಾಲ್‌ಕಟ್ಟೆ, ಉಳ್ಳಾಲದ ಕೆರೆಬೈಲು, ಕಡಬದ ಕೋಡಿಂಬಾಳ, ಪುತ್ತೂರಿನ ಬನ್ನೂರಿನಲ್ಲಿ ಕ್ಲಿನಿಕ್‌ಗಳಿವೆ. ಉಡುಪಿ ಜಿಲ್ಲೆಯ ಉಡುಪಿಯಲ್ಲಿ ಮೂರು, ಕುಂದಾಪುರದಲ್ಲಿ ಎರಡು ಮತ್ತು ಕಾರ್ಕಳದಲ್ಲಿ ಒಂದು ಕ್ಲಿನಿಕ್‌ ಇದೆ.

ಜಿಲ್ಲೆಯಲ್ಲಿ ಪ್ರಸ್ತುತ ಕಾರ್ಯಾಚರಿಸುತ್ತಿರುವ ಕ್ಲಿನಿಕ್‌ನ ಸೌಲಭ್ಯವನ್ನು ರೋಗಿಗಳು ಪಡೆಯುತ್ತಿದ್ದಾರೆ. ಈಗ ಮತ್ತೆ ಐದು ಕ್ಲಿನಿಕ್‌ ಆರಂಭಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದ್ದು, ಪ.ಪಂ.ಗಳಲ್ಲಿ ಅವುಗಳನ್ನು ಆರಂಭಿಸಲು ಸಿದ್ಧತೆ ನಡೆಸಲಾಗಿದೆ.
– ಡಾ| ರಾಜೇಶ್‌, ದ.ಕ. ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ

Advertisement

ಯಾವೆಲ್ಲಾ ಪಟ್ಟಣ ಪಂಚಾಯತ್‌?
ದ.ಕ. ಜಿಲ್ಲೆಯ ಕೋಟೆಕಾರು, ಬಜಪೆ, ಮೂಲ್ಕಿ, ಕಿನ್ನಿಗೋಳಿ ಮತ್ತು ವಿಟ್ಲದಲ್ಲಿ ಕ್ಲಿನಿಕ್‌ ಆರಂಭವಾಗಲಿದೆ. ಇತ್ತೀಚೆಗಷ್ಟೇ ಸರಕಾರದಿಂದ ಆದೇಶ ಬಂದಿದ್ದು, ಚುನಾವಣೆ ಸಮೀಪಿಸುತ್ತಿರುವುದರಿಂದ ಶೀಘ್ರ ಆರಂಭಿಕ ಹಂತದ ಕೆಲಸಗಳನ್ನು ಮಾಡಿ ಮುಗಿಸಲು ಉದ್ದೇಶಿಸಲಾಗಿದೆ. ಕ್ಲಿನಿಕ್‌ ನಿರ್ಮಾಣಕ್ಕೆ ಜಾಗ ಅಂತಿಮ, ಕಟ್ಟಡ ಅಂತಿಮ ಪಡಿಸುವ ಕೆಲಸಗಳು ಮೊದಲಿಗೆ ನಡೆಯಲಿವೆ. ಉಳಿದಂತೆ ವೈದ್ಯಕೀಯ ಸಲಕರಣೆಗಳು, ಪೀಠೊಪಕರಣ, ಒಬ್ಬ ವೈದ್ಯರು, ಸ್ಟಾಫ್‌ ನರ್ಸ್‌, ಲ್ಯಾಬ್‌ ಟೆಕ್ನೀಶಿಯನ್‌ ಮತ್ತು ಒಬ್ಬರು ಗ್ರೂಪ್‌ “ಡಿ’ ಸಿಬಂದಿ ಹೀಗೆ ನಾಲ್ಕು ಮಂದಿ ನೇಮಕವಾಗಬೇಕು. ಬಹುತೇಕ ಈ ಕೆಲಸಗಳು ಚುನಾವಣೆ ಬಳಿಕ ನಡೆಯುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next