Advertisement

ಬದಲಾಗಿಲ್ಲ ನಾಮಫಲಕ

04:54 PM Mar 17, 2018 | Team Udayavani |

ವಡಗೇರಾ: ವಡಗೇರಾ ತಾಲೂಕು ಕೇಂದ್ರ ಉದ್ಘಾಟನೆಯಾಗಿ ತಿಂಗಳು ಕಳೆದರೂ ಇನ್ನೂವರೆಗೂ ಸಹ ವಡಗೇರಾ ತಾಲೂಕು ಸರಕಾರಿ ಕಚೇರಿಗಳ ಕಟ್ಟದ ನಾಮ ಫಲಕದಲ್ಲಿ ಬದಲಾವಣೆ ಮಾತ್ರ ಕಂಡಿಲ್ಲ. ಪಟ್ಟಣದಲ್ಲಿರುವ ಗ್ರಾಪಂ, ಸರಕಾರಿ ಉನ್ನತ ಪ್ರಾಥಮಿಕ ಶಾಲೆ, ಸರಕಾರಿ ಉರ್ದು ಶಾಲೆ, ಅಂಬೇಡ್ಕರ್‌ ನಗರದ ಸರಕಾರಿ ಶಾಲೆ, ರೈತ ಸಂಪರ್ಕ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಪಶು ಆಸ್ಪತ್ರೆ, ಪ್ರೌಢಶಾಲೆ, ನಾಡಕಚೇರಿ, ಅಂಚೆ  ಕಚೇರಿ, ಅಂಗನವಾಡಿ ಕೇಂದ್ರಗಳ ಜೊತೆಗೆ ಇನ್ನೂ ಅನೇಕ ಸರಕಾರಿ ಕಚೆರಿಗಳ ಕಟ್ಟದ ನಾಮ ಫಲಕದಲ್ಲಿ ಇಂದಿಗೂ ಶಹಾಪುರ ತಾಲೂಕಾ ಎಂದು ಇದೆ. 

Advertisement

ನೂತನ ತಾಲೂಕಿನ ಅನೇಕ ಹಳ್ಳಿಗಳಲ್ಲಿರುವ ಸರಕಾರಿ ಶಾಲೆಗಳ ಕಟ್ಟಡದ ನಾಮ ಫಲಕಗಳು ಇನ್ನೂವರೆಗೂ ಬದಲಾವಣೆ ಆಗಿಲ್ಲ, ಹಾಗೂ ಕೆಲವೊಂದು ಸರಕಾರಿ ವಸತಿ ನಿಲಯಗಳ ಜೊತೆಗೆ ಅನೇಕ ಗ್ರಾಪಂ ಕಟ್ಟದಲ್ಲಿ ಸಹ ಹಳೆ ನಾಮಫಲಕಗಳಿವೆ. 

ಅಧಿಕಾರಿಗಳ ನಿರ್ಲಕ್ಷ: ಬಹುತೇಕ ಸರಕಾರಿ ಶಾಲಾ ಮುಖ್ಯ ಗುರುಗಳು, ಪಿಡಿಒಗಳು, ಇನ್ನಿತರ ಇಲಾಖೆ ಅಧಿಕಾರಿಗಳು ನಾಮ ಫಲಕದಲ್ಲಿ ತಾಲೂಕು ಬದಲಾವಣೆ ಮಾಡುವ ಗೋಜಿಗೆ ಹೋಗಿಲ್ಲ. ಇದರಿಂದ ಸಾರ್ವಜನಿಕರಲ್ಲಿ, ಮಕ್ಕಳಲ್ಲಿ, ವಿದಾರ್ಥಿಗಳಲ್ಲಿ ಗೊಂದಲ ಉಂಟಾಗಿದೆ.
 
ಕೇವಲ 3 ಕಚೇರಿ ಕಟ್ಟಡ ನಾಮ ಫಲಕದಲ್ಲಿ ಬದಲಾವಣೆ: ತಾಲೂಕು ತಹಶೀಲ್ದಾರ್‌, ತಾಲೂಕು ಶಾಖಾ ಗ್ರಂಥಾಲಯ ಹಾಗೂ ಸಮಾಜ ಕಲ್ಯಾಣ ಇಲಾಖೆ ಕಚೇರಿಗಳ ಕಟ್ಟದಲ್ಲಿ ಮಾತ್ರ ವಡಗೇರಾ ತಾಲೂಕು ಎಂದು ನಮೂದಿಸಲಾಗಿದೆ. ನೂತನ ತಾಲೂಕು ವಡಗೇರಾದ 33 ಹಳ್ಳಿಗಳ, ಹಯ್ನಾಳ (ಬಿ) ಹೋಬಳಿಯ 32 ಹಳ್ಳಿಗಳ, ದೊರನಹಳ್ಳಿ ವಲಯದ 13 ಹಾಗೂ 17 ಗ್ರಾಪಂ ಬಹುತೇಕ ಕಚೇರಿಗಳ ಕಟ್ಟಡದಲ್ಲಿ ಇಂದಿಗೂ ಸಹ ಶಹಾಪುರ ತಾಲೂಕು ಎಂದು ಇದೆ.  ನೂತನ ತಾಲೂಕು ವಡಗೇರಾ ಅಭಿವೃದ್ಧಿ ಆಗಬೇಕಾದರೆ, ಅಧಿಕಾರಿಗಳು ಹಾಗೂ ಇಲಾಖೆ ಮುಖ್ಯಸ್ಥರು ಸಮರ್ಪಣಾ ಭಾವನೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆದಕಾರಣ ಜಿಲ್ಲಾಧಿಕಾರಿಗಳು ಇತ್ತ ಕಡೆ ಗಮನಹರಿಸಿ ನಾಮ ಫಲಕದಲ್ಲಿ ವಡಗೇರಾ ಎಂದು ನಮೂದಿಸಲು ವಿಫಲರಾದ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಹಾಗೆ ಸರಕಾರಿ ಕಚೇರಿಗಳ ನಾಮ ಫಲಕದಲ್ಲಿ ವಡಗೇರಾ ತಾಲೂಕು ಎಂದು ನಮೂದಿಸಲು ಅಧಿಕಾರಿಗಳಿಗೆ ಆದೇಶ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಅಧಿಕೃತ ಆದೇಶ ಬಂದಿಲ್ಲ ಅಧಿಕೃತವಾಗಿ ವಡಗೇರಾ ತಾಲೂಕು ಆಗಿಲ್ಲ, ನಮಗೆ ಯಾವ ಆದೇಶ ಬಂದಿಲ್ಲ. ಅದಕ್ಕಾಗಿ ನಾಮ ಫಲಕದಲ್ಲಿ ಬದಲಾವಣೆ ಮಾಡಿಲ್ಲ.
  ಶಿವಪುತ್ರಪ್ಪಗೌಡ, ಪಿಡಿಒ ವಡಗೇರಾ

Advertisement

ಅಧಿಕಾರಿಗಳ ನಿರ್ಲಕ್ಷ್ಯ 
ಈಗಾಗಲೇ ವಡಗೇರಾ ತಾಲೂಕು ಎಂದು ಉದ್ಘಾಟನೆಯಾಗಿ ಒಂದು ತಿಂಗಳು ಕಳೆದರು ಸಹ ಸರಕಾರಿ ಕಚೇರಿಗಳ ನಾಮ ಫಲಕದಲ್ಲಿ ಬದಲಾವಣೆ ಆಗದಿರುವುದನ್ನು ನೋಡಿದರೆ, ಅಧಿಕಾರಿಗಳ ನಿರ್ಲಕ್ಷ ಎದ್ದು ಕಾಣುತ್ತಿದೆ. ಆದಷ್ಟು ಬೇಗ ನಾಮಫಲಕದಲ್ಲಿ ವಡಗೇರಾ ತಾಲೂಕು ಎಂದು ನಮೂದಿಸಬೇಕು.  
ಸಿದ್ದಣ್ಣಗೌಡ ಕಾಡಂನೋರ, ಹಾಲೂಒಕ್ಕೂಟದ ಮಾಜಿ ಅಧ್ಯಕ್ಷ

ನಾಮದೇವ ವಾಟ್ಕರ

Advertisement

Udayavani is now on Telegram. Click here to join our channel and stay updated with the latest news.

Next