Advertisement

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕೆಳದಿ ರಾಣಿ ಚೆನ್ನಮ್ಮ ಹೆಸರಿಡಿ: ವಚನಾನಂದ ಶ್ರೀ

05:28 PM Apr 25, 2022 | Team Udayavani |

ದಾವಣಗೆರೆ: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕೆಳದಿ ರಾಣಿ ಚೆನ್ನಮ್ಮ ಹೆಸರಿಡಬೇಕು ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ವಚನಾನಂದ ಸ್ವಾಮೀಜಿ ರಾಜ್ಯ, ಕೇಂದ್ರ ಸರ್ಕಾರವನ್ನ ಆಗ್ರಹಿಸಿದ್ದಾರೆ.

Advertisement

ಸೋಮವಾರ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ನಡೆದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ೪೦೦ ವರ್ಷಗಳ ಹಿಂದೆಯೇ ಸ್ತ್ರೀಸಶಕ್ತಿಕರಣ, ಸಮಾನತೆಯ ಪ್ರತೀಕವಾದ ಕೆಳದಿ ರಾಣಿ ಚೆನ್ನಮ್ಮ ಅವರ ಹೆಸರನ್ನು ಶಿವಮೊಗ್ಗ ವಿಮಾನ ನಿಲ್ದಾಣಕ್ಕಿಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರಿಗೆ ಒತ್ತಾಯಿಸಿದರು.

ಕೆಳದಿ ರಾಣಿ ಚೆನ್ನಮ್ಮ ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ರಾಜಾರಾಮ್‌ಗೆ ಆಶ್ರಯ ನೀಡಿದ್ದಲ್ಲದೆ ಲಕ್ಷ ಸೈನಿಕರ ಹೊಂದಿದ್ದ ಔರಂಗಜೇಬ್‌ನನ್ನೇ ಸೋಲಿಸಿ, ಅವನ ಮಗನನ್ನ ಸೆರೆಯಾಗಿಟ್ಟುಕೊಂಡವರು. ರಾಜಾರಾಮ್‌ನ ಪಟ್ಟಾಭಿಷೇಕ ಸಹ ನೆರವೇರಿಸಿದಂತಹ ಮಹಾನ್ ನಾಯಕಿ. ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಅವರ ಹೆಸರಿಟ್ಟಲ್ಲಿ ಸಾರ್ಥಕ ಆಗುತ್ತದೆ ಎಂದು ತಿಳಿಸಿದರು.

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೆಸರಿಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ರಾಜ್ಯದಲ್ಲಿ ತಳಮಟ್ಟದಿಂದ ಕಟ್ಟಿದ, ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರ ಹೆಸರನ್ನು ಶಿವಮೊಗ್ಗ ವಿಮಾನ ನಿಲ್ದಾಣಕ್ಕಿಟ್ಟಲ್ಲಿ ನಮಗಿಂತಲೂ ಹೆಚ್ಚು ಸಂತೋಷ ಪಡುವಂತಹವರು ಯಾರೂ ಇರುವುದೇ ಇಲ್ಲ.ನಮಗೆ ಹಂಡೆ ಹಾಲು ಕುಡಿದಷ್ಟು ಸಂತೋಷವಾಗುತ್ತದೆ ಎಂದರು.

ಸ್ವತಃ ಯಡಿಯೂರಪ್ಪ ಅವರೇ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನನ್ನ ಹೆಸರಿಡುವುದು ಬೇಡ. ಅನೇಕ ಮಹಾನ್ ನಾಯಕರು, ಹಿರಿಯರಿದ್ದಾರೆ. ಅವರ ಹೆಸರಿಡಿ ಎಂದು ಸರ್ಕಾರಕ್ಕೆ ಪತ್ರ ಬರೆದಿರುವುದು ಅವರ ದೊಡ್ಡ ಗುಣ. ಯಡಿಯೂರಪ್ಪ ಅವರ ಹೆಸರಿಡುವುದು ಆಗದೇ ಇದ್ದಾಗ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕೆಳದಿ ರಾಣಿ ಚೆನ್ನಮ್ಮ ಹೆಸರಿಡಬೇಕು ಎಂದು ನಮ್ಮ ಅಭಿಲಾಷೆ ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next