Advertisement

ಪ್ರಧಾನಿಯವರ ಮನ್ ಕಿ ಬಾತ್ ನಲ್ಲಿ ಚಾ.ನಗರ ಜಿಲ್ಲೆಯ ಬಿ.ಎಂ. ಮಂಜುನಾಥ್ ಹೆಸರು ಪ್ರಸ್ತಾಪ

01:11 PM Feb 26, 2023 | Team Udayavani |

ಚಾಮರಾಜನಗರ: ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸಂಸ್ಕೃತಿ ಸಚಿವಾಲಯ ರಾಷ್ಟ್ರಮಟ್ಟದಲ್ಲಿ ನಡೆಸಿದ ಪೆನ್ ಎ ಲೋರಿ (ಜೋಗುಳ ಗೀತೆ ರಚನೆ) ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಜಿಲ್ಲೆಯ ಬಿ.ಎಂ. ಮಂಜುನಾಥ್ ಅವರನ್ನು ಪ್ರಧಾನಿ ನರೇಂದ್ರ ಮೋದಿಯವರು ಮನ್ ಕಿ ಬಾತ್ ನಲ್ಲಿ ಪ್ರಶಂಸಿದ್ದಾರೆ.

Advertisement

ಇಂದು ನಡೆದ ಮನ್ ಕಿ ಬಾತ್ ನಲ್ಲಿ, ಈ ವಿಷಯವನ್ನು ಪ್ರಸ್ತಾಪಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, “ಜೋಗುಳ ಗೀತೆ ಸ್ಪರ್ಧೆಯಲ್ಲಿ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಬಿ.ಎಂ. ಮಂಜುನಾಥ ಪ್ರಥಮ ಬಹುಮಾನ ಪಡೆದಿದ್ದಾರೆ. ಕನ್ನಡದಲ್ಲಿ ಅವರ ಬರೆದ ಮಲಗು ಕಂದ ಕವಿತೆಗೆ ದೊರಕಿದೆ. ಈ ಜೋಗುಳ ಗೀತೆಗೆ ಅವರ ತಾಯಿ, ಅಜ್ಜಿ ಹಾಡುತ್ತಿದ್ದ ಜೋಗುಳಗಳೇ ಸ್ಫೂರ್ತಿಯಾಗಿವೆ. ಇದನ್ನು ಕೇಳಿದರೆ ನಿಮಗೂ ಆನಂದವಾಗುತ್ತದೆ” ಎಂದು ಮೋದಿ ಹೇಳಿದ್ದಾರೆ. ಬಳಿಕ ಈ ಜೋಗುಳದ ನಾಲ್ಕು ಸಾಲುಗಳನ್ನು ಕೇಳಿಸಲಾಗುತ್ತದೆ.

2022ರ ಫೆಬ್ರವರಿಯಲ್ಲಿ ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ರಂಗೋಲಿ ಸ್ಪರ್ಧೆ, ದೇಶಭಕ್ತಿ ಗೀತೆ ಹಾಗೂ ಜೋಗುಳ ಗೀತ ರಚನೆ ಸ್ಪರ್ಧೆಗಳನ್ನು amritmahotsav.nic.in ಆನ್ ಲೈನ್ ಪೋರ್ಟಲ್ ಮೂಲಕ ಆಹ್ವಾನಿಸಲಾಗಿತ್ತು. ಮಂಜುನಾಥ್ ಅವರು ಮಲಗು ಕಂದ ಶೀರ್ಷಿಕೆಯ ಜೋಗುಳ ಗೀತೆಯನ್ನು ರಚಿಸಿ ಆನ್ ಲೈನ್ ಮೂಲಕ ಕಳುಹಿಸಿಕೊಟ್ಟಿದ್ದರು. ಸ್ಪರ್ಧೆ ಮೂರು ಹಂತದಲ್ಲಿ ನಡೆದಿತ್ತು. ಮೊದಲಿಗೆ ಜಿಲ್ಲಾ ಮಟ್ಟದಲ್ಲಿ ಆಯ್ಕೆ ಯಾದ ಮೂವರನ್ನು ರಾಜ್ಯಮಟ್ಟಕ್ಕೆ, ರಾಜ್ಯ ಮಟ್ಟದಲ್ಲಿ ಆಯ್ಕೆಯಾದ ಮೂವರನ್ನು ರಾಷ್ಟ್ರಮಟ್ಟಕ್ಕೆ ಆಯ್ಕೆ ಮಾಡಲಾಗಿತ್ತು.

ಜಿಲ್ಲಾ ಮಟ್ಟದಲ್ಲಿ ಎಸ್. ಚನ್ನಬಸಪ್ಪ ಎಂಬುವರು ಪ್ರಥಮ, ಬಿ.ಎಂ. ಮಂಜುನಾಥ್ ದ್ವಿತೀಯ ಹಾಗೂ ವಿ.ಎನ್. ಪುನೀತ್ ಕುಮಾರ್ ತೃತೀಯ ಸ್ಥಾನ ಪಡೆದಿದ್ದರು. ಕರ್ನಾಟಕ ರಾಜ್ಯ ಮಟ್ಟದಿಂದ ರಾಷ್ಟ್ರಮಟ್ಟಕ್ಕೆ ಬಿ.ಎಂ. ಮಂಜುನಾಥ್ ಪ್ರಥಮ, ದಿಶಾ ಎಸ್ ನಾಯರ್ ದ್ವಿತೀಯ ಹಾಗೂ ಎಸ್ ಸರಸ್ವತಿ ಸ್ಥಾನ ಪಡೆದು ಆಯ್ಕೆಯಾಗಿದ್ದರು.

ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಬಿ.ಎಂ. ಮಂಜುನಾಥ್ ಪ್ರಥಮ, ಅಸ್ಸಾಮ್ ನ ದಿನೇಶ್ ಗೋವಾಲ ದ್ವಿತೀಯ, ದಾದ್ರಾ ನಗರ ಹವೇಲಿಯ ಶೀತಲ್ ರಮೇಶ್ ತೃತೀಯ, ಒಡಿಸ್ಸಾದ ಶಿಶಿರಕುಮಾರ್ ನಾಲ್ಕನೇ ಹಾಗೂ ಮಣಿಪುರದ ತಿಂಗುಜಮ್ ಡಯಾನ ಐದನೇ ಸ್ಥಾನ ಪಡೆದಿದ್ದರು. ಇದರಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದವರಿಗೆ 6 ಲಕ್ಷ ರೂ., ನಂತರದ ವಿಜೇತರಿಗೆ 5, 4, 3, 2 ಲಕ್ಷ ರೂ. ನಗದು ಬಹುಮಾನ ಘೋಷಿಸಲಾಗಿದೆ.

Advertisement

ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಬಾಳಗುಣಸೆ ಗ್ರಾಮದ ಬಿ.ಎಂ.ಮಂಜುನಾಥ್ ಅವರು ಮನ್ ಕಿ ಬಾತ್ ನಲ್ಲಿ ಪ್ರಧಾನಿಯವರು ತಮ್ಮ ಹೆಸರು ಪ್ರಸ್ತಾಪಿಸಿದ ಬಗ್ಗೆ ಉದಯವಾಣಿಯೊಂದಿಗೆ ಮಾತನಾಡಿ, “ನನ್ನ ಜೀವನದ ಅವಿಸ್ಮರಣೀಯ ಕ್ಷಣ ಅದು. ಮಂಟೇಸ್ವಾಮಿ ನೆಲದಲ್ಲಿ ಹುಟ್ಟಿದ್ದಕ್ಕೆ ಸಾರ್ಥಕ” ಅನಿಸಿತು ಎಂದರು.

ಇಷ್ಟು ದೊಡ್ಡ ಮಟ್ಟದ ನಗದು ಬಹುಮಾನಕ್ಕೆ ಆಯ್ಕೆಯಾಗುತ್ತೇನೆ ಎಂದುಕೊಂಡಿರಲಿಲ್ಲ. ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಬಹುದು ಎಂದು ಕೊಂಡಿದ್ದೆ. ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ, ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆ ಎನಿಸಿದೆ ಎಂದರು. ಇನ್ನೂ ಬಹುಮಾನ ನೀಡುವ ಕಾರ್ಯಕ್ರಮ ನಿಗದಿಯಾಗಿಲ್ಲ. ಆ ಬಗ್ಗೆ ಇನ್ನೂ ಮಾಹಿತಿ ಬಂದಿಲ್ಲ ಎಂದು ತಿಳಿಸಿದರು.

ಬಾಳಗುಣಸೆ ಮಂಜುನಾಥ್ ಅವರು ಚಿತ್ತ ಚಿತ್ತಾರದ ಹೂವು ಎಂಬ ಕವನ ಸಂಕಲನ ಹಾಗೂ ಶಾಪ ಎಂಬ ನಾಟಕದ ಪುಸ್ತಕಗಳನ್ನು ಹೊರತಂದಿದ್ದಾರೆ. ಇನ್ನೆರಡು ಕೃತಿಗಳು ಅಚ್ಚಿನ ಹಂತದಲ್ಲಿವೆ.

 

-ಕೆ.ಎಸ್. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next