“ಪ್ಲಸ್’ ಚಿತ್ರದ ನಂತರ “ವಾಜಿ’ ಎಂಬ ಚಿತ್ರ ಮಾಡುವುದಾಗಿ ಹೇಳಿದ್ದರು ಗಡ್ಡ ವಿಜಿ. ಆ ಚಿತ್ರ ಮುಂದಕ್ಕೆ ಹೋಗಿದೆ. ಅದರ ಬದಲು ಈಗ ಅವರು ಇನ್ನೊಂದು ಹೊಸ ಚಿತ್ರ ಶುರು ಮಾಡಿದ್ದಾರೆ. ಇಂದಿನಿಂದ ಅವರ ನಿರ್ದೇಶನದ “ಶಿರಾಡಿ ಘಾಟ್’ ಎಂಬ ಹೊಸ ಚಿತ್ರ ಶುರುವಾಗಿದೆ. “ಶಿರಾಡಿ ಘಾಟ್’ ಎಂಬ ಹೆಸರಿನ ಚಿತ್ರವೊಂದು ಎರಡ್ಮೂರು ವರ್ಷಗಳ ಹಿಂದೆ ಶುರುವಾಗಿತ್ತು. ಶಿರಾಡಿ ಘಾಟ್‌ನಲ್ಲಿ ಒಂದು ಹಂತದ ಚಿತ್ರೀಕರಣ ಮುಗಿದಿತ್ತು.
ಆದರೆ, ಹಲವು ಕಾರಣಗಳಿಂದಾಗಿ ಆ ಚಿತ್ರ ನಿಂತೇ ಹೋಯ್ತು. ಈಗ ಅದೇ ಹೆಸರನ್ನಿಟ್ಟುಕೊಂಡು ಹೊಸ ಚಿತ್ರ ನಿರ್ಮಿಸುತ್ತಿದ್ದಾರೆ ಉಮೇಶ್ ಸಕ್ಕರೆನಾಡು. ಈ ಚಿತ್ರಕ್ಕೆ ಅವರೇ ನಾಯಕ ಕೂಡಾ. ಸೂರ್ಯ ಎಂಬ ಹೆಸರಿನಲ್ಲಿ ಅವರು ನಟನೆ ಮಾಡಿದರೆ, ಉಮೇಶ್ ಹೆಸರಲ್ಲಿ ಚಿತ್ರ ನಿರ್ಮಿಸುತ್ತಿದ್ದಾರೆ. ಇಲ್ಲಿ ಹೆಸರು ಮತ್ತು ನಿರ್ಮಾಪಕರು ಮಾತ್ರ ಸೇಮ್. ಇನ್ನೆಲ್ಲವೂ ಬದಲಾಗಿದೆ. ಇಷ್ಟಕ್ಕೂ ಚಿತ್ರ ಯಾಕೆ ನಿಂತಿತು ಎಂದರೆ ಅದಕ್ಕೆ ಕಾರಣವೂ ಇದೆ.
ಚಿತ್ರತಂಡದವರು ಶಿರಾಡಿ ಘಾಟ್‌ನಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿಸಿ ಬರುವಾಗ, ಹಾಸನದ ಶಾಂತಿಗ್ರಾಮದ ಬಳಿ ಟಿಪ್ಪರ್‌ವೊಂದಕ್ಕೆ ಡಿಕ್ಕಿ ಹೊಡೆದು ಚಿರಂಜೀವಿ ಮತ್ತು ಮಾಲತೇಶ್ ಎನ್ನುವವರು ಸ್ಥಳದಲ್ಲೇ ಮೃತಪಟ್ಟರೆ, ರಾಜೇಶ್ ಎನ್ನುವವರು ಇನ್ನೂ ಕೋಮಾದಲ್ಲಿದ್ದಾರಂತೆ. ಇನ್ನಿಬ್ಬರು ಮಾತ್ರ ಇದೀಗ ಆರೋಗ್ಯವಾಗಿದ್ದಾರೆ. ಈ ಘಟನೆಯ ನಂತರ ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಕುಗ್ಗಿ ಹೋಗಿದ್ದ ಉಮೇಶ್, ಒಂದಿಷ್ಟು ತಿಂಗಳುಗಳ ಕಾಲ ಚಿತ್ರರಂಗದಿಂದ ದೂರ ಇದ್ದಾರೆ.
ಇದೀಗ ಅವರು ಮತ್ತೆ “ಶಿರಾಡಿ ಘಾಟ್’ ಎಂಬ ಹೆಸರಲ್ಲಿ ಇನ್ನೊಂದು ಹೊಸ ಚಿತ್ರ ಮಾಡುವುದಕ್ಕೆ ಹೊರಟಿದ್ದಾರೆ. “ನಾನು ವಕೀಲಿಕೆ ಬಿಟ್ಟು ಚಿತ್ರರಂಗದ ಕಡೆ ಬಂದಿದ್ದೆ. ಚಿತ್ರ ನಿಂತಾಗ, ಎಲ್ಲರೂ ಚಿತ್ರ ಏನಾಯಿತು ಅಂತ ಕೇಳುತ್ತಲೇ ಇದ್ದರು. ಅವರು ಕೇಳುತ್ತಾರೆ ಅಂತ ಪುನಃ ಚಿತ್ರ ಶುರು ಮಾಡುತ್ತಿಲ್ಲ. ಆದರೆ, ಚಿತ್ರ ಮುಗಿಸುವವರೆಗೂ ವಕೀಲಿಕೆಗೆ ವಾಪಸ್ ಬರುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದೆ.
“ಶಿರಾಡಿ ಘಾಟ್’ ನನ್ನ ಬ್ಯಾನರ್‌ನ ಮೊದಲ ಸಿನಿಮಾ. ಚಿತ್ರ ಗೆಲ್ಲುತ್ತೋ, ಬಿಡುತ್ತೋ ಎನ್ನುವುದು ಬೇರೆ ಮಾತು. ಆದರೆ, ಇದೊಂದು ಚಿತ್ರ ಮುಗಿಸಬೇಕು ಅಂತ ಆಸೆ ಇತ್ತು. ಹಾಗಾಗಿ ಈ ಚಿತ್ರ ಮಾಡಬೇಕು ಎಂದು ಮುಂದಾದೆ. ಈ ಮಧ್ಯೆ, ವಾಪಸ್ಸು ಕೋರ್ಟ್‌ಗೆ ಹೋಗಿರಲಿಲ್ಲ. ಈ ತರಹ ಗಡ್ಡ ಬಿಟ್ಟು ಹೋದರೆ ಏನಂತಾರೆ ಹೇಳಿ? ಹಾಗಾಗಿ ಇದನ್ನು ಮುಗಿಸಿ ಹೋಗುತ್ತೇನೆ’ ಎನ್ನುತ್ತಾರೆ ಉಮೇಶ್ ಅಲಿಯಾಸ್ ಸೂರ್ಯ.
“ಶಿರಾಡಿ ಘಾಟ್’ ಚಿತ್ರಕ್ಕೆ ಗಂಗಾಧರ್ ಎನ್ನುವವರು ಕಥೆ ಮತ್ತು ಸಂಭಾಷಣೆಗಳನ್ನು ಬರೆದಿದ್ದಾರೆ. ವೀರ್ ಸಮರ್ಥ್ ಸಂಗೀತ ಸಂಯೋಜಿಸಿದರೆ, ರೇಣು ಕುಮಾರ್ ಛಾಯಾಗ್ರಹಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ಸೂರ್ಯಗೆ ನಾಯಕಿಯಾಗಿ “ಬಿಗ್ ಬಾಸ್’ನ ಜಯಶ್ರೀ ಇದ್ದಾರೆ. ಜೊತೆಗೆ ಕರಿಸುಬ್ಬು, “ಕುರಿ’ ರಂಗ, ಬಚ್ಚನ್, ಅರಸು ಮುಂತಾದವರು ನಟಿಸುತ್ತಿದ್ದಾರೆ.