Advertisement

ಗ್ರಾಮ ವಾಸ್ತವ್ಯದ ಪರಿಕಲ್ಪನೆ ಕೊಟ್ಟವರು ನಾಲ್ವಡಿ ಕೃಷ್ಣರಾಜ ಒಡೆಯರ್‌

09:26 PM Jun 22, 2019 | Lakshmi GovindaRaj |

ಮೈಸೂರು: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಗ್ರಾಮ ವಾಸ್ತವ್ಯಕ್ಕೆ ಹೇಳಿ ಹೋಗುತ್ತಾರೆ. ಆದರೆ, ಯಾರಿಗೂ ಹೇಳದೆ ಮಾರುವೇಷದಲ್ಲಿ ಗ್ರಾಮಗಳಿಗೆ ಹೋಗುತ್ತಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಅಂದೇ ಗ್ರಾಮ ವಾಸ್ತವ್ಯದ ಪರಿಕಲ್ಪನೆ ನೀಡಿದ್ದರು ಎಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.

Advertisement

ಮೈಸೂರು ಕನ್ನಡ ವೇದಿಕೆ ಮತ್ತು ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಜಯಂತಿ ಹಾಗೂ ಸಾಧಕರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಭಿವೃದ್ಧಿ ಕ್ರಾಂತಿ: ನಾಲ್ವಡಿ ಕೃಷ್ಣರಾಜ ಒಡೆಯರ್‌ ಅಭಿವೃದ್ಧಿಯ ಕ್ರಾಂತಿಯನ್ನೇ ಮಾಡಿದವರು. ಅನೇಕ ಪ್ರಥಮಗಳಿಗೆ ಅಡಿಗಲ್ಲಿಟ್ಟವರು. ದೇಶದಲ್ಲಿ ಅನೇಕ ಸಂಸ್ಥಾನಗಳು ಆಳ್ವಿಕೆ ನಡೆಸಿವೆ. ಮೈಸೂರು ಸಂಸ್ಥಾನವನ್ನು 25 ಅರಸರು ಆಳಿದ್ದಾರೆ. ಆದರೆ, ಅಭಿವೃದ್ಧಿಯಲ್ಲಿ ಸಿಂಹಪಾಲು ನಾಲ್ವಡಿಯವರಿಗೆ ಸಲ್ಲುತ್ತದೆ.

ಸಂಸ್ಥಾನದ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ ಕೀರ್ತಿ ಅವರಿಗೆ ಸಲ್ಲಬೇಕು. ಅಲ್ಲದೇ, ಅಂದಿನ ಕಾಲದಲ್ಲೇ ಮಾರುವೇಷದಲ್ಲಿ ತೆರಳಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸುತ್ತಿದ್ದರು. ಅವರ ಗ್ರಾಮ ವಾಸ್ತವ್ಯದ ಫ‌ಲವೇ ಕನ್ನಂಬಾಡಿ ಅಣೆಕಟ್ಟೆ ಎಂದರು.

ಗೋಡೆ ಗಡಿಯಾರ ಸರಿಪಡಿಸಿ: ನಾಲ್ವಡಿ ಅವರು ಸುದೀರ್ಘ‌ವಾಗಿ ಮೈಸೂರು ಸಂಸ್ಥಾನ ಆಳಿದರು. ಅವರ ಕಾಲದಲ್ಲಿ ಅಭಿವೃದ್ಧಿಯ ರಥ ಎಲ್ಲೆಡೆ ಚಲಿಸಿತ್ತು. ಅವರ ದೂರದರ್ಶಿತ್ವದ ಪ್ರತೀಕವಾಗಿ ವಿಶ್ವವಿದ್ಯಾನಿಲಯ, ದೇವರಾಜ ಮಾರುಕಟ್ಟೆ, ಒಳ ಚರಂಡಿ ವ್ಯವಸ್ಥೆ, ರಸ್ತೆಗಳು ಸೇರಿದಂತೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ.

Advertisement

ಅಲ್ಲದೆ ಮಾಲ್‌ಗ‌ಳ ಪರಿಕಲ್ಪನೆಯನ್ನು ನೀಡಿದವರೇ ನಾಲ್ವಡಿಯವರು. ಅವರ ಕೊಡುಗೆಗಳಲ್ಲಿ ಒಂದಾದ ದೊಡ್ಡ ಗಡಿಯಾರ ಬಿರುಕು ಬಿಟ್ಟಿದೆ. ಅದನ್ನು ಸರಿಪಡಿಸುವ ಗೋಜಿಗೆ ಯಾರೂ ಹೋಗಿಲ್ಲ. ರಾಜಕಾರಣಿಗಳು ಹೆಚ್ಚಿನದೇನನ್ನೂ ಮಾಡಬೇಕಿಲ್ಲ. ನಾಲ್ವಡಿಯವರ ಕೊಡುಗೆಗಳನ್ನು ಉಳಿಸಿ, ಸಂರಕ್ಷಣೆ ಮಾಡಿದರೆ ಸಾಕು ಎಂದು ತಿಳಿಸಿದರು.

ವಿವೇಕವಿಲ್ಲ: ಸರ್ಕಾರಗಳು, ಸಂಘಸಂಸ್ಥೆಗಳು, ಜನಪ್ರತಿನಿಧಿಗಳು ವಿವೇಕಯುತವಾಗಿ ವರ್ತಿಸಿದ್ದರೆ ಮೈಸೂರನ್ನು ಇನ್ನೂ ಸುಂದರವಾಗಿ ಇಟ್ಟುಕೊಳ್ಳಬಹುದಿತ್ತು. ಆದರೆ, ಆ ಕಾರ್ಯವನ್ನು ಯಾರೂ ಮಾಡಲಿಲ್ಲ. ನಾಲ್ವಡಿಯವರ ಕೊಡುಗೆಗಳನ್ನು ಎಲ್ಲರೂ ಮರೆಯುತ್ತಿದ್ದಾರೆ.

ಕೆ.ಆರ್‌.ನಗರ ಅಂದೇ ಯೋಜನಾ ಬದ್ಧ ನಗರವಾದರೂ ಅದನ್ನು ಉಳಿಸಿಕೊಳ್ಳುವಲ್ಲಿ ವಿಫ‌ಲರಾಗಿದ್ದೇವೆ. ಸಾಹಿತ್ಯ ಪರಿಷತ್ತು ನಾಲ್ವಡಿಯವರನ್ನು ನೆನಪಿಸಿಕೊಳ್ಳದಿರುವುದು ದುರಂತವೇ ಸರಿ ಎಂದರು. ಎಂಆರ್‌ಸಿ ಕಾರ್ಯದರ್ಶಿ ಅನಂತರಾಜೇ ಅರಸ್‌ ಕಾರ್ಯಕ್ರಮ ಉದ್ಘಾಟಿಸಿದರು.

ನಟರಾಜ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಡಾ.ಶಾರದಾ, ಇತಿಹಾಸ ವಿಭಾಗದ ಮುಖ್ಯಸ್ಥೆ ತ್ರಿವೇಣಿ, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್‌.ಬಾಲಕೃಷ್ಣ, ನಾಲಾಬೀದಿ ರವಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ಆರ್ಯುವೇದ ವೈದ್ಯೆ ಆಶಾಮನು ಸೇರಿದಂತೆ ಹಲವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಒಡೆಯರ್‌, ಸರ್‌ ಎಂವಿ ನಿಜವಾದ ಜೋಡೆತ್ತು: ಇತ್ತೀಚೆಗೆ ಜೋಡೆತ್ತುಗಳ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಹಲವರು ನಾವು ಜೋಡೆತ್ತುಗಳು ಎಂದು ಹೇಳಿಕೊಳ್ಳುತ್ತಾರೆ. ಆದರೆ, ನಿಜವಾದ ಅಭಿವೃದ್ಧಿಯ ಜೋಡೆತ್ತುಗಳೆಂದರೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಹಾಗೂ ಸರ್‌ ಎಂ.ವಿಶ್ವೇಶ್ವರಯ್ಯ ಅವರು.

ಈ ಇಬ್ಬರು ಮೈಸೂರು ಸಂಸ್ಥಾನವನ್ನು ಅಭಿವೃದ್ಧಿಯ ಶಿಖರಕ್ಕೇರಿಸಿದರು. ಹಳೇ ಮೈಸೂರು ಭಾಗದಲ್ಲಿ ಇವರ ಕೊಡುಗೆಗಳ ಕುರುಹು ಎಲ್ಲೆಡೆ ಇವೆ. ಅಂತಹ ಮಹಾನ್‌ ಸಾಧಕರು ನಾಲ್ವಡಿ-ಸರ್‌ ಎಂ.ವಿ. ಒಂದು ವೇಳೆ ಮೈಸೂರು ನಾಲ್ವಡಿಯವರ ಆಳ್ವಿಕೆಗೆ ಒಳಪಡದಿದ್ದರೆ ನಾವೆಲ್ಲರೂ ಹೀನಾಯ ಸ್ಥಿತಿಯಲ್ಲಿರುತ್ತಿದ್ದೆವು ಎಂದು ಸಾಹಿತಿ ಬನ್ನೂರು ಕೆ.ರಾಜು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next