Advertisement
ಇದರ ಕಾಮಗಾರಿ ಆರಂಭ ವಾದುದು 1906ರಲ್ಲಾದರೂ ಕುಂಟುತ್ತಾ ಸಾಗಿದಾಗ ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಮುಂಬಯಿ ಯಲ್ಲಿ ಎಂಜಿನಿಯರ್ ಆಗಿದ್ದ ಎಂ. ವಿಶ್ವೇಶ್ವರಯ್ಯನವರನ್ನು ಮೈಸೂರು ಪ್ರಾಂತಕ್ಕೆ 1909ರಲ್ಲಿ ಕರೆಸಿಕೊಂಡರು.
Related Articles
Advertisement
ಇಷ್ಟೆಲ್ಲ ಆಲೋಚನಾಪರವಾದ ವಿಶ್ವೇಶ್ವರಯ್ಯನವರಿಗೆ ಕನ್ನಂಬಾಡಿ ಅಣೆಕಟ್ಟು ನಿರ್ಮಿಸುವಾಗ ಹಣದ ಅಭಾವ ಉಂಟಾಯಿತು. ಮಳೆಯಾಗದೆ ಕ್ಷಾಮ ತಲೆ ಎತ್ತಿದಾಗ ಕೃಷ್ಣರಾಜ ಒಡೆಯರು ರಾಜ್ಯದಲ್ಲಿ ಸುತ್ತಾಡಿ ಪ್ರಜೆಗಳು ಕೊಡಬೇಕಾದ ಕಂದಾಯ ರದ್ದು ಮಾಡಿದರು. ಇದರಿಂದ ಆದಾಯ ನಿಂತು ಹೋಗಿ ಕನ್ನಂಬಾಡಿ ಕಾಮಗಾರಿಗೆ ಹಣ ಬರಲಿಲ್ಲ.
ದಿವಾನ್ ವಿಶ್ವೇಶ್ವರಯ್ಯನವರು ಮಹಾರಾಜರನ್ನು ಭೇಟಿ ಮಾಡಿ ಸರಕಾರದಲ್ಲಿ ಕೂಡಿಟ್ಟ ನಿಧಿ (ರಿಸರ್ವ್ ಫಂಡ್)ಯಿಂದ ಅಗತ್ಯದಷ್ಟು ಹಣ ಉಪಯೋಗಿಸೋಣ. ಮುಂದಿನ ದಿನಗಳಲ್ಲಿ ಕಂದಾಯ ವಸೂಲಿಯಾದಾಗ ವರ್ಗಾಯಿಸೋಣ ಎಂದು ಸಲಹೆ ನೀಡಿದರು. ರಾಜರು ಇದನ್ನು ಒಪ್ಪಲಿಲ್ಲ. “ನಿಧಿ ಅಂದರೆ ಆಪದ್ಧನ. ಮುಂದೆ ಎಂತೆಂಥ ಕಾಲ ಬರುತ್ತದೋ ಗೊತ್ತಿಲ್ಲ. ಆಗ ಆ ನಿಧಿಯನ್ನು ಪ್ರಜೆಗಳಿಗಾಗಿಯೇ ಖರ್ಚು ಮಾಡಬೇಕಾದ ಕಾಲ ಬಂದರೂ ಬಂದೀತು. ಅದನ್ನು ಮುಟ್ಟಲೇ ಬಾರದು’ ಎಂದು ಹೇಳಿದರು.
ವಿಶ್ವೇಶ್ವರಯ್ಯನವರು ಇನ್ನೊಂದು ಮಾರ್ಗ ಹುಡುಕಿ “ರಾಜ್ಯದಲ್ಲಿ ಕ್ಷಾಮ ತಲೆದೋರಿದೆ. ಪರಿಸ್ಥಿತಿ ಯನ್ನು ಎದುರಿಸಲು ಎಲ್ಲರೂ ತಮ್ಮ ಕೈಲಾದ ಮಟ್ಟಿಗೆ ಸಹಕರಿಸಬೇಕು. ಸರಕಾರಿ ನೌಕರರು ಮಿತವ್ಯಯ ಸಾಧಿಸಬೇಕು. ಅಂದರೆ ಅಧಿಕಾರಿ ಗಳು ತಮ್ಮ ಸಂಚಾರದ ವೆಚ್ಚವನ್ನು ಈಗ ಕಾನೂನಿನಲ್ಲಿ ಅವಕಾಶ ವಿರುವಂತೆ ಬಳಸಿಕೊಳ್ಳದೆ ನಿಜವಾಗಿ ಎಷ್ಟು ಖರ್ಚಾಗುತ್ತದೋ ಅಷ್ಟು ಮಾತ್ರ ಸ್ವೀಕರಿಸಬೇಕು. ಹೀಗೆ ಉಳಿತಾಯ ಮಾಡಿದ ಹಣವನ್ನು ಕನ್ನಂಬಾಡಿ ಕೆಲಸಕ್ಕೆ ವಿನಿಯೋಗಿಸಬೇಕು’ ಎಂದು ಸಲಹೆ ಕೊಟ್ಟಾಗ ಮಹಾರಾಜರು ಒಪ್ಪಿದರು. ಈ ಸೂಚನೆಯನ್ನು ಸುತ್ತೋಲೆ ಮೂಲಕ ಎಲ್ಲ ಇಲಾಖೆಗಳಿಗೂ ಕಳುಹಿಸಿದರು.
“ಅದು ಒಳ್ಳೆಯ ಕಾಲ. ರಾಜ್ಯಕ್ಕೆ ಬಂದ ಕಷ್ಟವನ್ನು ಎಲ್ಲ ಅಧಿಕಾರಿಗಳೂ ಗಂಭೀರವಾಗಿ ತೆಗೆದುಕೊಂಡು ಸುತ್ತೋಲೆಗೆ ಪುರಸ್ಕಾರ ನೀಡಿದರು. ಖೋತಾ ಹಣವನ್ನು ಹೀಗೆ ಪೂರೈಸಲಾಯಿತು’ ಎಂದು ಆಗ ಸಹಾಯಕ ಕಮಿಷನರ್ ಆಗಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ನೆನಪಿಸಿಕೊಳ್ಳುತ್ತಿದ್ದರು. ಆಗ ಮಾಸ್ತಿಯಂತಹ ನೌಕರರು ಸರಕಾರಿ ಕೆಲಸಕ್ಕೆ ಪ್ರವಾಸ ಹೋಗುವಾಗ ಅವಲಕ್ಕಿಯನ್ನು ಕೊಂಡೊಯ್ದು ತಿಂದದ್ದುಂಟು.
ಅದು ಸ್ವಾತಂತ್ರ್ಯಪೂರ್ವ ಕಾಲ. ರಾಜರ ಆಡಳಿತ ಕಾಲ. ಈಗ ಸ್ವಾತಂತ್ರೊéàತ್ತರ ಕಾಲ. ಪ್ರಜಾಪ್ರಭುತ್ವದ ಆಡಳಿತ.“ರಿಸರ್ವ್ ಫಂಡ್ ಪ್ರಜೆಗಳಿಗೆ ಖರ್ಚು ಮಾಡಬೇಕಾದ ಕಾಲ ಬರಬಹುದು. ಇದನ್ನು ಮುಟ್ಟ ಕೂಡದು’ ಎಂದು ಹೇಳಿದ ರಾಜರು, “ಎಲ್ಲ ಅಧಿಕಾರಿಗಳೂ ಮಿತವ್ಯಯ ಸಾಧಿಸಿ ಸಹಕರಿಸಬೇಕು’ ಎಂಬ ವಿಶ್ವೇಶ್ವರಯ್ಯನವರ ಕರೆಗೆ ಓಗೊಟ್ಟ ಅಧಿಕಾರಿ ವರ್ಗವನ್ನು ಏನೆಂದು ಬಣ್ಣಿಸಬಹುದು? ಜನರ ತ್ಯಾಗ, ಪರಿಶ್ರಮವಿರುವಲ್ಲಿ ಮಾತ್ರ ಸತ್ಕಾರ್ಯ ನಡೆದೇ ನಡೆಯುತ್ತದೆ. ಎರಡು ವರ್ಷಗಳಿಂದ ಇಡೀ ಪ್ರಪಂಚದಲ್ಲಿ ಕೊರೊನಾ ಸೋಂಕು ಹರಡಿಕೊಂಡಿದೆ. ಆಗಾಗ್ಗೆ ಸರಕಾರದ ಬಾಯಿಂದ “ಮಿತವ್ಯಯ’ದ ಮಾತನ್ನು ಕೇಳುತ್ತೇವೆ. ಆದರೆ ಜನಪ್ರತಿನಿಧಿಗಳು, ಅಧಿಕಾರಿಗಳೂ ಸಂಕಷ್ಟದ ಕಾಲದಲ್ಲಿ ಏನು ತ್ಯಾಗ ಮಾಡಿದ್ದಾರೆ? ಕೊರೊನಾದ ಹೆಸರಿನಲ್ಲಿ ಯಾರ್ಯಾರು ಹೇಗೆ ಹೇಗೆ ವರ್ತಿಸಿದರು ಎಂಬುದನ್ನು ಎರಡು ವರ್ಷಗಳಿಂದ ಕಂಡಿದ್ದೇವೆ. ಅಣೆಕಟ್ಟುಗಳು ಜನರಿಗೆ ಉಪಯೋಗವೋ? ಹಣ ಮಾಡುವ ದಂಧೆಯೋ? ಎನ್ನುವುದು ರಾಜಕೀಯ ಪಕ್ಷಗಳ ಗುದ್ದಾಟದಲ್ಲಿ ತೋರುತ್ತದೆ. ಕೊರೊನಾದ ಸಂಕಷ್ಟದ ಕಾಲದಲ್ಲಿಯೂ ಜನರಿಗೆ ಅತೀ ಅಗತ್ಯವಲ್ಲದ ಭಾರೀ ಗಾತ್ರದ ಸರಕಾರಿ ಕಚೇರಿ ಕಟ್ಟಡಗಳು ನಿರ್ಮಾಣಗೊಳ್ಳುತ್ತಿವೆ. ಲಾಕ್‌ಡೌನ್ ಸಮಯದಲ್ಲಿ ಘೋಷಿಸಿದ ಪರಿಹಾರ ಮೊತ್ತಕ್ಕಿಂತ ಹೆಚ್ಚು ಹಣವನ್ನು ಆ ಫಲಾನುಭವಿಯೇ ತೆರಿಗೆ ರೂಪದಲ್ಲಿ ನೀಡಿರುವುದು ಫಲಾನುಭವಿಗೂ ಗೊತ್ತಿಲ್ಲದ ವಿಷಯ. ಕೊಡುವವರ ದರ್ಪದ ನಡುವೆಯೂ ಫಲಾನುಭವಿ ಅದನ್ನು ಅಲೆದಾಡಿ ಪಡೆದು ಕೊಂಡಿದ್ದಾನೆ. ಇವೆಲ್ಲ ಜನರ ತೆರಿಗೆ ಹಣದಿಂದಲೇ ನಡೆಯುತ್ತಿದೆ. ಈಗ ಕೊರೊನಾ ಮೂರನೆಯ ಅಲೆಯ “ಗುಮ್ಮ’ ಬಂದಿದೆ. ಪ್ರಜಾಪ್ರಭುತ್ವ ಕಾಲದಲ್ಲಿ ಸಾಮಾನ್ಯ ಜನರ ಬವಣೆ ನೀಗಿಸಲು ಕೃಷ್ಣರಾಜ ಒಡೆಯರಂತಹ ಜನನಾಯಕರು, ವಿಶ್ವೇಶ್ವರಯ್ಯನಂತಹ ಅಧಿಕಾರಿಗಳು ಬೇಕಾಗಿದ್ದಾರೆ. -ಮಟಪಾಡಿ ಕುಮಾರಸ್ವಾಮಿ