ಚಾಮರಾಜನಗರ: ಆಧುನಿಕ ಮೈಸೂರು ನಿರ್ಮಾತೃ, ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಹಿನ್ನೆಲೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅನುಯಾಯಿಗಳು ನಗರದ ಪ್ರವಾಸಿ ಮಂದಿರದ ಮುಂಭಾಗದಲ್ಲಿರುವ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ ಪ್ರತಿಮೆಗೆ ಮಾರ್ಲಾಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದರು.
ನಾಲ್ವಡಿ ಕೃಷ್ಣರಾಜ ಒಡೆಯರ ಪುತ್ಥಳಿಗೆ ಮಾರ್ಲಾಪಣೆ ಮಾಡಿದ ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹ.ರಾ. ಮಹೇಶ್ ಮಾತನಾಡಿ, ಮೈಸೂರು ಒಡೆಯರ ಆಡಳಿತದಲ್ಲಿ ಅಗ್ರಗಣ್ಯ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿಯೇ ಏಷ್ಯಾ ಖಂಡದಲ್ಲಿಯೇ ಮೊದಲ ಬಾರಿಗೆ ದಲಿತ ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸೌಲಭ್ಯವನ್ನು ಜಾರಿ ಮಾಡಿ, ಶಿಕ್ಷಣಕ್ಕೆ ಅವಕಾಶ ಮಾಡಿಕೊಟ್ಟಿದ್ದರು ಎಂದರು.
ಹೊಸ ಇತಿಹಾಸ ಸೃಷ್ಟಿ: ನಾಲ್ವಡಿ ಕೃಷ್ಣರಾಜ ಒಡೆಯರು ತಮ್ಮ ಆಡಳಿತದಲ್ಲಿ ಮೈಸೂರು ಸಂಸ್ಥಾನದ ಪ್ರಗತಿಗೆ ಹೊಸ ಇತಿಹಾಸವನ್ನು ಸೃಷ್ಟಿ ಮಾಡಿದರು. ಆ ಕಾಲದಲ್ಲಿ ಅವರು ತೆಗೆದುಕೊಂಡ ದಿಟ್ಟ ನಿರ್ಧಾರದಿಂದ ಶೂದ್ರರು ಸ್ವಾಭಿಮಾನಿಗಳಾಗಿ ಬದುಕು ರೂಪಿಸಿಕೊಳ್ಳಲು ಸಾಧ್ಯವಾಯಿತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 38 ವರ್ಷಗಳ ಕಾಲ ದಕ್ಷ ಆಡಳಿತ ನಡೆಸಿ, ರಾಜರ್ಷಿ ಬಿರುದು ಪಡೆದುಕೊಂಡರು. ತಮ್ಮ ಸಂಸ್ಥಾನದ ಏಳಿಗೆಗಾಗಿ, ತಮ್ಮ ಪ್ರಜೆಗಳ ಬದುಕಿಗಾಗಿ ತಮ್ಮ ಇಡೀ ಜೀವನವನ್ನು ಮುಡಾಗಿಟ್ಟಿದ್ದ ಏಕೈಕ ಮಹಾರಾಜರು ಎಂದು ಬಣ್ಣಿಸಿದರು.
ಕನ್ನಡನಾಡಿಗೆ ಅಪಾರ ಕೊಡುಗೆ: ಅವರ ಆಡಳಿತದಲ್ಲಿ ಕನ್ನಡನಾಡಿಗೆ ನೀಡಿದ ಕೊಡುಗೆಗಳು ಅಪಾರ. ಮೈಸೂರು ಮೆಡಿಕಲ್ ಕಾಲೇಜು ಸ್ಥಾಪನೆ, ಕೃಷ್ಣರಾಜ ಸಾಗರ ಆಣೆಕಟ್ಟು ನಿರ್ಮಾಣ ಮಾಡುವ ಮೂಲಕ ಮೈಸೂರು ಭಾಗದ ರೈತರಿಗೆ ನೀರಾವರಿ ಕಲ್ಪಿಸಿಕೊಟ್ಟರು. ಕಡ್ಡಾಯ ಶಿಕ್ಷಣಕ್ಕೆ ಆದ್ಯತೆ ನೀಡಿದರು. ಇಂಥ ಮಹಾನ್ ರಾಜರಾದ ನಾಲ್ವಡಿ ಮಹಾರಾಜರು ಜಯಂತಿಯನ್ನು ಆಚರಣೆ ಮಾಡುವ ಮೂಲಕ ಅವರ ಸೇವೆಯನ್ನು ಸ್ಮರಿಸಿಕೊಳ್ಳೋಣ ಎಂದರು.
ಹಲವಾರು ಯೋಜನೆ ರಾಜ್ಯ ನೀಡಿದ ನಾಲ್ವಡಿ: 1939ರಲ್ಲಿ ಹಿರೇ ಭಾಸ್ಕರ್ ಅಣೆಕಟ್ಟು ನಿರ್ಮಾಣ, ಮಹಾತ್ಮಾಗಾಂಧಿ ವಿದ್ಯುತ್ ಉತ್ಪಾದನಾ ಘಟಕ ಆರಂಭ. ಬಾಲ್ಯ ವಿವಾಹ ಪದ್ಧತಿ ರದ್ದು, ಮಹಿಳೆಯರ ಶಿಕ್ಷಣಕ್ಕೆ ಒತ್ತು, 1936ರಲ್ಲಿ ಮೈಸೂರು ಲ್ಯಾಂಪ್ಸ್ ನಿರ್ಮಾಣ, ಮೈಸೂರಿನಲ್ಲಿ ವಾಣಿ ವಿಲಾಸ ಮಕ್ಕಳ ಅಸ್ಪತ್ರೆ ನಿರ್ಮಾಣ, ಕೆ.ಆರ್. ಮಿಲ್ ಆರಂಭ, ಬೆಂಗಳೂರಿನಲ್ಲಿ ಟೌನ್ ಹಾಲ್ ನಿರ್ಮಾಣ, ಸಂತ ಫಿಲೋಮಿನಾ ಚರ್ಚ್ ಸ್ಥಾಪನೆ, ಬೆಂಗಳೂರಿನಲ್ಲಿ ಕೆ.ಆರ್. ಮಾರುಕಟ್ಟೆ ಸ್ಥಾಪನೆ, ಮಂಡ್ಯದಲ್ಲಿ ಮೈಸೂರು ಸಕ್ಕರೆ ಕಾರ್ಖಾನೆ ಸ್ಥಾಪನೆ, ಮೈಸೂರು ಸಾಬೂನು ಕಾರ್ಖಾನೆ, ಕೃಷ್ಣರಾಜನಗರ ಸ್ಥಾಪನೆ, ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಆರಂಭ, ಮೈಸೂರಿನಲ್ಲಿ ಲಲಿತ್ ಮಹಲ್ ಸ್ಥಾಪನೆ, ಮೈಸೂರಿನಲ್ಲಿ ಯುವರಾಜ ಕಾಲೇಜು ಸ್ಥಾಪನೆ, ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ, ಭಾರತ ಮೊದಲ ಬಾಯ್ಸ್ ಸ್ಕೌಟ್ಸ್, ಸ್ಥಾಪನೆ, ಭಾರತೀಯ ವಿಜ್ಞಾನ ಸಂಸ್ಥೆ ಸ್ಥಾಪನೆ, ಮೈಸೂರು ಬ್ಯಾಂಕ್ ಸ್ಥಾಪನೆ, ಏಷ್ಯಾದಲ್ಲಿಯೇ ಪ್ರಥಮ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆ ಸೇರಿದಂತೆ ಹಲವಾರು ಯೋಜನೆಗಳನ್ನು ನಾಲ್ವಡಿಯವರು ರಾಜ್ಯಕ್ಕೆ ನೀಡಿದ್ದಾರೆ ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ವಕೀಲರಾದ ಪ್ರಸನ್ನಕುಮಾರ್, ರಾಮಸಮುದ್ರ ಪುಟ್ಟಸ್ವಾಮಿ, ಅಂಬೇಡ್ಕರ್ ಅನುಯಾಯಿ ಮಹಾ ಒಕ್ಕೂಟದ ಸಿ.ಕೆ. ಮಂಜುನಾಥ್, ಸಿ.ಎಂ.ಕೃಷ್ಣಮೂರ್ತಿ, ಅಯ್ಯನಪುರ ಶಿವಕುಮಾರ್, ಎಸ್.ಪಿ. ಮಹೇಶ್, ಬೇಡಮೂಡ್ಲು ಬಸವಣ್ಣ, ವಾಸು, ಬಾಬು, ರಾಜೇಂದ್ರ, ಶೇಷಣ್ಣ, ಮಹದೇವಸ್ವಾಮಿ, ಗಣೇಶ್ ಪ್ರಸಾದ್, ದೊಡ್ಡರಾಯಪೇಟೆ ಸಿದ್ದರಾಜು, ಶಿವಣ್ಣ, ಇತರರು ಹಾಜರಿದ್ದರು.