Advertisement

ಗೂಂಡಾಗಿರಿ ಎಚ್ಡಿಕೆ, ಪಕ್ಷಾಂತರಿ ಸಿದ್ದರಾಮಯ್ಯ

06:58 PM Feb 19, 2021 | Team Udayavani |

ಹಾಸನ: ಅಧಿಕಾರಕ್ಕಾಗಿ ಪಕ್ಷಾಂತರ ಮಾಡಿದ ಸಿದ್ದರಾಮಯ್ಯ ಮತ್ತು ಗೂಂಡಾಗಿರಿ ಪ್ರವೃತ್ತಿಯ ಎಚ್‌.ಡಿ.ಕುಮಾರಸ್ವಾಮಿ ಅಯೋಧ್ಯೆ ರಾಮ ಮಂದಿರ ನಿರ್ಮಾಣ ವಿರೋಧಿಸುವ ಮೂಲಕ ಸುಪ್ರೀಂ ಕೋರ್ಟ್‌, ಸಂವಿಧಾನಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ವಾಗ್ಧಾಳಿ ನಡೆಸಿದರು.

Advertisement

ರಾಜ್ಯ ಬಿಜೆಪಿ ಪ್ರಕೋಷ್ಠಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀ ರಾಮ ಆದರ್ಶ ಪುರುಷ. ಅಂತಹ ಮಹಾಪುರುಷನ ಮಂದಿರ ನಿರ್ಮಾಣ ದೇಶದ ಹೆಮ್ಮೆ. ಆದರೆ, ಅಧಿಕಾರಕ್ಕಾಗಿ ಪಕ್ಷಾಂತರ ಮಾಡಿದವರು, ಈಶ್ವರನ ಆರಾಧಕರು, ಜ್ಯೋತಿಷಿಗಳ ಸೂಚನೆ ಇಲ್ಲದೆ ವಿಧಾನಸೌಧದತ್ತ ಹೋಗದವರು ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹಿಸಿದ ಸ್ವಯಂ ಸೇವಕರ ಮೇಲೆ ಆರೋಪ ಹೊರಿಸುತ್ತಿದ್ದಾರೆಎಂದು ಸಿದ್ದರಾಮಯ್ಯ ಮತ್ತು  ಎಚ್‌.ಡಿ.ಕುಮಾರಸ್ವಾಮಿ ಅವರ ಹೆಸರೇಳದೆ ಟೀಕಿಸಿದರು.

ಬಡತನ ನಿರ್ಮೂಲನೆ ಆಗಲಿಲ್ಲ: ಗರೀಬಿ ಹಟಾವೋ ಎಂದು ಹೇಳಿಕೊಂಡು ಆಡಳಿತ ನಡೆಸಿ ಕಾಂಗ್ರೆಸ್‌ ಮುಖಂಡರ ಗರೀಬಿ ಹಟಾವೋ ಆಯಿತೇ ವಿನಃ ದೇಶದ ಜನರ ಬಡತನ ನಿರ್ಮೂಲನೆಯಾಗಲಿಲ್ಲ ಎಂದು ಕಾಂಗ್ರೆಸ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ವಾತಂತ್ರಾ ನಂತರ 7 ದಶಕಗಳಲ್ಲಿ ಸರ್ದಾರ್‌ ವಲ್ಲಭಬಾಯ್‌ ಪಟೇಲ್‌ ಅವರು ಸೋಮನಾಥ ದೇವಾಲಯ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದ್ದು ಬಿಟ್ಟರೆ ಪ್ರಧಾನಿ ಮೋದಿ ಅ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದವರು ಎಂದರು.

ಸಿದ್ದರಾಮಯ್ಯ ಅವರು ಡ್ರಗ್ಸ್‌ ಯುಕ್ತ ರಾಜ್ಯ ನಿರ್ಮಿಸಿದ್ದರೆ, ಯಡಿಯೂರಪ್ಪ ಅವರು ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣ ಮಾಡಿದ್ದಾರೆ. ಹತ್ತಾರು ವರ್ಷಗಳಿಂದ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗಾಗಿ ಹೋರಾಟ ಮಾಡಿದ್ದ ಕಾರ್ಯಕರ್ತರ ಒತ್ತಾಸೆ ಈಡೇರಿಸಿದ್ದಾರೆ. ಇಂತಹ ಮಹತ್ವದ ಜನಪರ ಕಾಯ್ದೆಗಳನ್ನು ತಂದಿರುವ ಬಗ್ಗೆ ಮತ್ತು ಸರ್ಕಾರದ ಸಾಧನೆಯ ಬಗ್ಗೆ ಬಿಜೆಪಿ ಪ್ರಕೋಷ್ಠಗಳ ಪದಾಧಿಕಾರಿಗಳು ಮನೆ, ಮನೆಗೆ ತಿಳಿಸಬೇಕು. ಬದಲಾವಣೆಯ ಗಾಳಿ ಬೀಸುತ್ತಿರುವ ಇಂದಿನ ಸಂದರ್ಭದಲ್ಲಿ ರಾಷ್ಟ್ರ ನಿರ್ಮಾಣದ ನಾಯಕರನ್ನು ರೂಪಿಸುವುದೇ ಪ್ರಕೋಷ್ಠಗಳ ಗುರಿ ಹೊರತು ಮಠಗಳ ನಿರ್ಮಾಣವಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next