ಬೀದರ್ : ಬೀದರ್ ಸೇರಿ ರಾಜ್ಯದ ವಿವಿಧೆಡೆ ಭಾರಿ ಮಳೆಯಿಂದ ನೆರೆ ಹಾನಿ ಎದುರಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಪಕ್ಷಗಳು ಈ ವಿಷಯದಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು ಸಂತ್ರಸ್ತರ ಕಣ್ಣೀರು ಒರೆಸುವ ಕಾರ್ಯಕ್ಕೆ ಸಹಕಾರ ನೀಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.
ತಾಲೂಕಿನ ಬಗದಲ್ ಗ್ರಾಮದ ರೈತರ ಜಮೀನಿನಲ್ಲಿ ಮಳೆಯಿಂದಾದ ಹಾನಿಯಾದ ಬೆಳೆಯನ್ನು ವೀಕ್ಷಿಸಿ ಮಾಧ್ಯಮದವರ ಜತೆಗೆ ಮಾತನಾಡಿದ ಅವರು, ಸಂತ್ರಸ್ತರ ನೋವನ್ನು ಆಲಿಸಿ ಅವರಿಗೆ ಪರಿಹಾರ ಕಲ್ಪಿಸಲು ಸರ್ಕಾರ ಸಿದ್ಧವಿದೆ. ಸಚಿವರು ಮತ್ತು ಶಾಸಕರು ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ವಸ್ತು ಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ರಾಜಕೀಯ ಪಕ್ಷಗಳು ಬೊಬ್ಬೆ ಹೊಡೆಯುವುದನ್ನು ಬಿಟ್ಟು ಮುಖ್ಯಮಂತ್ರಿಗಳ ಜತೆ ಮಾತನಾಡಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಕ್ಕೆ ಕಿಡಿಕಾರಿದರು.
ಶಾಸಕ ಖಂಡ್ರೆ ಅವರಿಗೆ ಸರ್ಕಾರದ ಜವಾಬ್ದಾರಿ ಬಗ್ಗೆ ಮಾತನಾಡಲು ಯಾವುದೇ ಯೋಗ್ಯತೆ ಇಲ್ಲ. ಅವರೊಬ್ಬರು ಪಕ್ಷದ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಯೋಚನೆ ಮಾಡಿ ಮಾತನಾಡಬೇಕು. ಹಿಂದೆ ಸಿಎಂ ಆಗಿದ್ದ ಸಿದ್ಧರಾಮಯ್ಯ ಅವರು ನೆರೆಯಿಂದ ತತ್ತರಿಸಿದ್ದ ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದರಾ? ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 3 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಂಕಷ್ಟದಲ್ಲಿದ್ದ ಅನ್ನದಾತರ ಕಣ್ಣೀರು ಒರೆಸುವ ಕೆಲಸ ಮಾಡದ ಅಂದಿನ ಸರ್ಕಾರ, ಬಡವರ ಹೆಸರಿನಲ್ಲಿದ್ದ ಮನೆಗಳನ್ನು ಗುಳುಂ ಮಾಡಿತ್ತು ಎಂದು ಆರೋಪಿಸಿದರು.
ಇದನ್ನೂ ಓದಿ: ಬಿಹಾರ ಚುನಾವಣೆ 2020: ಚಿರಾಗ್ ಪಾಸ್ವಾನ್ ಗೆ ತೇಜಸ್ವಿ ಬೆಂಬಲ, ನಿತೀಶ್ ಗೆಲುವಿಗೆ ಅಡ್ಡಗಾಲು?
ಎಲ್ಲ ಸಚಿವರು ಮತ್ತು ಶಾಸಕರು ಕ್ಷೇತ್ರದಲ್ಲಿದ್ದು ನೆರೆ ಪರಿಸ್ಥಿತಿಯನ್ನು ನಿಭಾಯಿಸಬೇಕು ಮತ್ತು ಬಿಜೆಪಿಯ ಪದಾಧಿಕಾರಿಗಳು, ಕಾರ್ಯಕರ್ತರು ಇದಕ್ಕೆ ಸಹಕಾರ ನೀಡಬೇಕು ಎಂದು ಈಗಾಗಲೇ ಸೂಚನೆ ನೀಡಿದ್ದು, ಇದರಲ್ಲಿ ನಿರ್ಲಕ್ಷ ತೋರುವುದನ್ನು ಪಕ್ಷ ಸಹಿಸುವುದಿಲ್ಲ ಎಂದ ಅವರು, ಈಗಾಗಲೇ ಸರ್ಕಾರ ಜನರಿಗೆ ರಕ್ಷಣೆ ಮತ್ತು ಪುನರ್ ನಿರ್ಮಾಣ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೊಳ್ಳುತ್ತಿದೆ. ಬೆಳೆ ಹಾನಿಗೆ ಸರ್ಕಾರದ ಎನ್‌ಡಿಆರ್‌ಎಫ್ ಮಾನದಂಡದ ಪ್ರಕಾರ ಪರಿಹಾರ ಸಿಗಲಿದೆ ಮತ್ತು ಅಗತ್ಯ ಪ್ಯಾಕೇಜ್‌ನ್ನು ನೀಡಲಿದೆ ಎಂದು ಹೇಳಿದರು.
ಬೀದರ್ ಜಿಲ್ಲೆಯಲ್ಲಿ 3.70 ಲಕ್ಷ ಹೇಕ್ಟರ್ ಪೈಕಿ 2.45 ಲಕ್ಷ ಹೇ. ಪ್ರದೇಶದ ಬೆಳೆ ನೆರೆಯಿಂದ ಹಾನಿಯಾಗಿದ್ದು, ಈ ಬಗ್ಗೆ ಪಕ್ಷದಿಂದ ಸಿಎಂಗೆ ವರದಿ ಸಲ್ಲಿಸುತ್ತೇನೆ. ಬೀದರ್ ಜಿಲ್ಲೆಯಲ್ಲೂ ಸಹ ವೈಮಾನಿಕ ಸಮೀಕ್ಷೆ ನಡೆಸಿ ಹಾನಿ ಪರಿಶೀಲಿಸಬೇಕೆಂದು ಎಂದು ಸಿಎಂಗೆ ಮನವಿ ಮಾಡುತ್ತೇನೆ ಎಂದು ಕಟೀಲ್ ಭರವಸೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ, ಸಂಸದ ಭಗವಂತ ಖೂಬಾ ಇದ್ದರು.