Advertisement

ಗಾಂಧಿ ಹೆಸರಲ್ಲಿ ಟೋಪಿ ಹಾಕಿದ ಕಾಂಗ್ರೆಸ್ : ಬಿಜೆಪಿ ಅಧ್ಯಕ್ಷ ಕಟೀಲ್ ಆರೋಪ

08:19 PM Nov 20, 2021 | Team Udayavani |

ಬೀದರ್ : ದೇಶದಲ್ಲಿ ಗಾಂಧೀಜಿಯವರ ಹೆಸರಿನಲ್ಲಿ ಸುಧೀರ್ಘ ಆಡಳಿತ ನಡೆಸಿದ ಕಾಂಗ್ರೆಸ್ ಅವರ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯನ್ನು ಮರೆತು, ಮೋಸ ಮತ್ತು ವಂಚನೆ ಮೂಲಕ ಗಾಂಧೀ ಹೆಸರಿನಲ್ಲಿ ರಾಷ್ಟ್ರದ ಜನರಿಗೆ ಟೋಪಿ ಹಾಕಿದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್ ಆರೋಪಿಸಿದರು.

Advertisement

ನಗರದ ಗಣೇಶ ಮೈದಾನದಲ್ಲಿ ಶನಿವಾರ ನಡೆದ ಬಿಜೆಪಿ ಜನ ಸ್ವರಾಜ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸುದೀರ್ಘವಾಗಿ ಆಡಳಿತ ನಡೆಸಿದರೆ ತಮ್ಮ ಕನಸನ್ನು ನಾಶ ಮಾಡುತ್ತದೆ ಎಂಬುದು ಗಾಂಧೀಜಿ ಅವರಿಗೆ ಅರಿವಿತ್ತು. ಹಾಗಾಗಿಯೇ ಸ್ವಾತಂತ್ರ್ಯ ನಂತರ ಪಕ್ಷವನ್ನು ವಿಸರ್ಜಿಸಬೇಕೆಂದು ಹೇಳಿದ್ದರು. ಆದರೆ, ಅಧಿಕಾರಕ್ಕಾಗಿ ಉಳಿದ ಕಾಂಗ್ರೆಸ್ ಗಾಂಧೀಜಿ ಹೆಸರಿನಲ್ಲಿ ಅಂಗಡಿ ತೆರದು ವ್ಯಾಪಾರ ಮಾಡುತ್ತ ಬಂದಿತು, ಜನರನ್ನು ಬಡವರನ್ನಾಗಿ ಮಾಡಿತು ಎಂದು ಕಿಡಿಕಾರಿದರು.

ಗಾಂಧಿ ಕನಸಿನ ಭಾರತ ನಿರ್ಮಾಣ:
ಆದರೆ, ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗಾಂಧಿ ಕನಸಿನ ಭಾರತ ನಿರ್ಮಾಣದ ಚಿಂತನೆಯನ್ನು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ. ಅಧಿಕಾರ ವಿಕೇಂದ್ರೀಕರಣಕ್ಕಾಗಿ ಒಬ್ಬ ಪ್ರಧಾನಿಯಂತೆ ಗ್ರಾ.ಪಂ ಅಧ್ಯಕ್ಷರು ಸಹ ‘ಪವರ್ ಫುಲ್’ ಆಗಬೇಕು ಎಂಬುದು ಮೋದಿ ಆಶಯ. ಯುಪಿಎ ಸರ್ಕಾರ ಜಾರಿಗೆ ತಂದಿರುವ ನರೇಗಾ ಯೋಜನೆಯಡಿ ಅನುದಾನವನ್ನು ನೇರವಾಗಿ ಗ್ರಾ.ಪಂ ಅಧ್ಯಕ್ಷರ ಖಾತೆಗೆ ಜಮೆ ಮಾಡುವುದು, ಹಳ್ಳಿಗಳಲ್ಲಿ ಮನೆ ಮನೆಗೆ ಗಂಗಾ ಯೋಜನೆಯಡಿ ಕುಡಿಯುವ ನೀರಿನ ಸೌಲಭ್ಯ, ವಿದ್ಯುತ್, ರಸ್ತೆ ಮತ್ತು ಚರಂಡಿ ಸೇರಿ ಮೂಲ ಸೌಕರ್ಯಗಳನ್ನು ಕಲ್ಪಿಸಲು ಒತ್ತು ನೀಡುತ್ತಿದ್ದಾರೆ ಎಂದು ಹೇಳಿದರು.

ದೇಶದಲ್ಲಿ ಭ್ರಷ್ಟಾಚಾರ, ಭಯೋತ್ಪಾದನೆ, ಬಡತನ ಮತ್ತು ನಿರುದ್ಯೋಗ ಸಮಸ್ಯೆಗಳ ಸೃಷ್ಟಿಗೆ ಕಾರಣವಾದ ಕಾಂಗ್ರೆಸ್ ಭಾರತವನ್ನು ಭೀಕ್ಷುಕರ ರಾಷ್ಟ್ರ ಎಂದು ಕರೆಯುವಂತ ಆಡಳಿತವನ್ನು ಕಾಂಗ್ರೆಸ್ ನೀಡಿತು. ಆದರೆ, ಮೋದಿ ಸರ್ಕಾರ ಈ ಎಲ್ಲ ಜ್ವಲಂತ ಸಮಸ್ಯೆಗಳಿಗೆ ಮುಕ್ತಿ ನೀಡಿ, ಸುಭದ್ರ ಮತ್ತು ಕಳಂಕರಹಿತ ಆಡಳಿತವನ್ನು ನೀಡುತ್ತಿದೆ. ಬಡತನ ನಿರ್ಮೂಲನೆ ನಮ್ಮ ಸರ್ಕಾರದ ಮುಖ್ಯ ಸಂಕಲ್ಪವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ : ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ರಸ್ತೆಯ ಮೇಲೆ ಕ್ಯಾಮರಾಗಳನ್ನು ಇಟ್ಟು ಪ್ರತಿಭಟನೆ

Advertisement

ಕೇರಳ ಮಾದರಿ ಗ್ರಾ.ಪಂಗೆ ಕಾಯಕಲ್ಪ:
ಕೇರಳ ಮಾದರಿಯಲ್ಲಿ ರಾಜ್ಯದ ಗ್ರಾಮ ಪಂಚಾಯತಗಳಿಗೆ ಅನುದಾನ ಮತ್ತು ಸೌಲಭ್ಯ ಕಲ್ಪಿಸಿ ಹೊಸ ಕಾಯಕಲ್ಪ ನೀಡಿ, ಆ ಮೂಲಕ ಸಶಕ್ತಿಕರಣಕ್ಕೆ ಒತು ಕೊಡಲು ಬಿಜೆಪಿ ಸರ್ಕಾರ ಮುಂದಾಗಲಿದೆ. ಕೇರಳದಂತೆ ನಮ್ಮ ಗ್ರಾ.ಪಂಗಳಲ್ಲಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕು. ಪ್ರತಿ ಗ್ರಾ.ಪಂಗಳಿಗೆ 3 ಕೋಟಿ ರೂ. ಅನುದಾನ, ಸದಸ್ಯರಿಗೆ ಮಾಸಿಕ 10 ಸಾವಿರ ರೂ. ಗೌರವ ಧನ ಮತ್ತು ಅಧ್ಯಕ್ಷರುಗಳಿಗೆ ವಾಹನ ಸೇರಿ ಇತರ ಸೌಲತ್ತುಗಳನ್ನು ಕಲ್ಪಿಸುವುದು ಬಿಜೆಪಿ ಪಕ್ಷದ ಚಿಂತನೆ ಆಗಿದ್ದು, ಈ ಬಗ್ಗೆ ಸಿಎಂ ಗಮನ ಸೆಳೆದಿದ್ದೇನೆ ಎಂದರು.

ರಾಜ್ಯದಲ್ಲಿ ಹಿಂದಿನ ಸಿಎಂ ಯಡಿಯೂರಪ್ಪ ಕಂಡಿದ್ದ ಅಭಿವೃದ್ಧಿಪರ ಕನಸುಗಳನ್ನು ಸಿಎಂ ಬೊಮ್ಮಾಯಿ ನೇತೃತ್ವದ ಸರ್ಕಾರ ನನಸು ಮಾಡುತ್ತಿದೆ. ಪ್ರಸಕ್ತ ಬಜೆಟ್‌ನಲ್ಲಿ ಎಲ್ಲ 5500 ಪಂಚಾಯತಗಳಿಗೆ ವಾರ್ಷಿಕ 2 ಕೋಟಿ ರೂ. ಅನುದಾನ ಬಿಡುಗಡೆಗೆ ಸಿಎಂ ಒಪ್ಪಿಕೊಂಡಿದ್ದಾರಲ್ಲದೇ, ಬರುವ ಡಿಸೆಂಬರ್‌ನಲ್ಲಿ ವಸತಿ ಯೋಜನೆಯಡಿ ಒಟ್ಟು 5 ಲಕ್ಷ ಮನೆಗಳ ಮಂಜೂರಾತಿ ನೀಡಲಿದ್ದಾರೆ ಎಂದು ತಿಳಿಸಿದರು.

ಸಮಾವೇಶದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ, ಶಾಸಕ ಶರಣು ಸಲಗಾರ್, ಎಂಎಲ್‌ಸಿಗಳಾದ ಶಶೀಲ್ ನಮೋಶಿ, ರಘುನಾಥರಾವ್ ಮಲ್ಕಾಪುರೆ, ಮಾಜಿ ಶಾಸಕರಾದ ರಾಜೇಂದ್ರ ವರ್ಮಾ, ಸುಭಾಷ ಕಲ್ಲೂರ, ಪಕ್ಷದ ಜಿಲ್ಲಾ ಉಸ್ತುವಾರಿ ಮಾಲೀಕಯ್ಯ ಗುತ್ತೇದಾರ್, ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್, ಕೆಎಸ್‌ಐಐಡಿಬಿ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ, ಬುಡಾ ಅಧ್ಯಕ್ಷ ಬಾಬು ವಾಲಿ, ಪ್ರಮುಖರಾದ ಈಶ್ವರ ಸಿಂಗ್ ಠಾಕೂರ್, ಸೂರ್ಯಕಾಂತ ನಾಗಮಾರಪಳ್ಳಿ, ರೌಫೋದ್ದೀನ್ ಕಚೇರಿವಾಲೆ, ಗುರುನಾಥ ಕೊಳ್ಳುರ್, ಶಿವರಾಜ ಗಂದಗೆ, ಡಿ.ಕೆ ಸಿದ್ರಾಮ್, ಗುರುನಾಥ ಜ್ಯಾಂತಿಕರ್ ಇನ್ನಿತರರು ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next