Advertisement

ಕೊರೊನಾ 3ನೇ ಅಲೆ ಎದುರಿಸಲು ಸರ್ವ ಸನ್ನದ್ಧ: ನಳಿನ್‌

01:04 AM Oct 08, 2021 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ 3ನೇ ಅಲೆ ಅಥವಾ ಇನ್ಯಾವುದೇ ರೀತಿಯ ಮಾರಕ ಕೊರೊನಾ ಬಂದರೂ ಅದನ್ನು ಸಮರ್ಥವಾಗಿ ಎದುರಿಸಲು ಬೇಕಾದ ಎಲ್ಲ ರೀತಿಯ ವೈದ್ಯಕೀಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪ್ರಸ್ತುತ 16 ಆಕ್ಸಿಜನ್‌ ಘಟಕಗಳಿದ್ದು 12 ಕಾರ್ಯಾಚರಿಸುತ್ತಿವೆ. ಉಳಿದವು ಶೀಘ್ರವೇ ಕಾರ್ಯಾರಂಭಿಸಲಿವೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ಮಂಗಳೂರಿನ ವೆನ್ಲಾಕ್‌ ಸರಕಾರಿ  ಆಸ್ಪತ್ರೆ ಆವರಣದಲ್ಲಿ ಸ್ಥಾಪಿಸಲಾಗಿರುವ 2 ಆಕ್ಸಿಜನ್‌ ಘಟಕಗಳಿಗೆ ಅವರು ಗುರುವಾರ ಚಾಲನೆ ನೀಡಿ ಸುದ್ದಿಗಾರರ ಜತೆ ಮಾತನಾಡಿದರು.

ಕೊರೊನಾ 1ನೇ ಅಲೆಯ ಸಂದರ್ಭ  ಕೆಲವೊಂದು ವೈದ್ಯಕೀಯ ಆವಶ್ಯಕತೆಗ ಳನ್ನು ಕಂಡುಕೊಳ್ಳಲಾಯಿತು. 2ನೇ  ಅಲೆ ಸಂದರ್ಭ ಆಕ್ಸಿಜನ್‌ ಕೊರತೆ ಅನು ಭವಕ್ಕೆ ಬಂದಾಗ ಜಿಲ್ಲೆಯ ವೆನ್ಲಾಕ್‌, ಲೇಡಿಗೋಷನ್‌ ಸೇರಿದಂತೆ ಎಲ್ಲ ತಾಲೂಕುಗಳ ಆಸ್ಪತ್ರೆ, ಸಮುದಾಯ ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಘಟಕ ಸ್ಥಾಪಿಸಲು ಕ್ರಮ ಕೈಗೊಳ್ಳಲಾಯಿತು. ಇದರಿಂದಾಗಿ ದೂರದ ಕೊಚ್ಚಿ ಮತ್ತು ಬಳ್ಳಾರಿಯ ಅವಲಂಬನೆ ಇಲ್ಲವಾಯಿತು ಎಂದರು.

ಡಯಾಲಿಸಿಸ್‌ ಘಟಕ:

ತನ್ನ ಸಂಸತ್‌ ನಿಧಿಯಿಂದ 1 ಕೋಟಿ ರೂ.ಗಳನ್ನು ವೆನ್ಲಾಕ್‌ಗೆ ವೆಂಟಿಲೇಟರ್‌ ಖರೀದಿಗೆ ನೀಡಲಾಗಿತ್ತು. ಕಳೆದ ವರ್ಷ 2.50 ಕೋಟಿ ರೂ. ನೀಡಿದ್ದು, ಆ ಮೊತ್ತದಲ್ಲಿ ವೆನ್ಲಾಕ್‌ ಹೊಸ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಘಟಕ ಸ್ಥಾಪನೆ ಮಾಡಲಾಗುತ್ತಿದೆ ಎಂದು ನಳಿನ್‌ ತಿಳಿಸಿದರು.

Advertisement

ಶಾಸಕ ಡಿ. ವೇದವ್ಯಾಸ ಕಾಮತ್‌, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಕಿಶೋರ್‌ ಕುಮಾರ್‌, ವೆನ್ಲಾಕ್‌ನ ವೈದ್ಯಕೀಯ ಅಧೀಕ್ಷಕ ಡಾ| ಸದಾಶಿವ ಶಾನುಭೋಗ್‌, ಎಂಆರ್‌ಪಿಎಲ್‌ ಕಂಪೆನಿಯ ಕಾರ್ಯ ನಿರ್ವಾಹಕ ನಿರ್ದೇಶಕ ಬಿ.ಎಚ್‌.ವಿ. ಪ್ರಸಾದ್‌, ಜಿಜಿಎಂ. ಕೃಷ್ಣ ಹೆಗ್ಡೆ, ಒಎಂಪಿಎಲ್‌ ಸಿಇಒ ಪಿ.ಪಿ. ಚೈನುಲು, ಸಿಜಿಎಂ ಸುಬ್ರಾಯ ಭಟ್‌, ಡಿಜಿಎಂಗಳಾದ ಮಾಲತೇಶ್‌ ಎಂ.ಎಚ್‌. ಮತ್ತು ರಮೇಶ್‌ ಉಪಸ್ಥಿತರಿದ್ದರು.

ದ.ಕ. ಆಮ್ಲಜನಕ ಸ್ವಾವಲಂಬಿ ಜಿಲ್ಲೆ :

ಆಸ್ಪತ್ರೆಗಳಿಗೆ ತುರ್ತಾಗಿ ಬೇಕಿರುವ ಆಕ್ಸಿಜನ್‌ ಉತ್ಪಾದನೆಯಲ್ಲಿ ದ.ಕ. ಜಿಲ್ಲೆ  ಈಗ ಸ್ವಾವಲಂಬಿಯಾಗಿದೆ. ಇನ್ನು ಕೊರೊನಾ 3ನೇ ಅಲೆ ಬಂದರೂ ಯಾರೂ ಭಯ ಪಡಬೇಕಿಲ್ಲ. ಅಷ್ಟರ ಮಟ್ಟಿಗೆ ಜಿಲ್ಲೆಯ ವೈದ್ಯಕೀಯ ವ್ಯವಸ್ಥೆ ಸರ್ವ ಸನ್ನದ್ಧಗೊಂಡಿದೆ ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ತಿಳಿಸಿದರು.

ಇಲ್ಲಿ ಉತ್ಪಾದನೆಯಾಗುವ ಆಕ್ಸಿಜನ್‌ ಶೇ. 95ರ ವರೆಗೆ ಪ್ಯೂರಿಟಿ ಹೊಂದಿದ್ದು, ವಾರ್ಡ್‌ಗಳಿಗೆ ಬೇಕಾದಷ್ಟು ಇಲ್ಲಿಂದ ಪೂರೈಕೆ ಆಗಲಿದೆ. ಐಸಿಯು ಘಟಕಗಳಿಗೆ ಬೇಕಾಗಿರುವ ಲಿಕ್ವಿಡ್‌ ಆಕ್ಸಿಜನನ್ನು ಮಾತ್ರ ಹೊರಗಿನಿಂದ (ಬಳ್ಳಾರಿ) ತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಲಿಕ್ವಿಡ್‌ ಆಕ್ಸಿಜನ್‌ ಕೂಡ ಇಲ್ಲೇ (ಬೈಕಂಪಾಡಿಯಲ್ಲಿ) ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next