ಮಂಗಳೂರು: ಶ್ರೀ ಕ್ಷೇತ್ರ ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತು ಎದುರಾಗಿರುವ ಸನ್ನಿವೇಶ, ಯಾತ್ರಿಗಳಿಗೆ ಮಾಡಲಾಗಿರುವ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಲು ಸಂಸದ ಹಾಗೂ ಕೇರಳದ ಬಿಜೆಪಿ ಸಹ ಉಸ್ತುವಾರಿಯೂ ಆಗಿರುವ ನಳಿನ್ ಕುಮಾರ್ ಕಟೀಲು ಅವರು ನ. 20ರಂದು ಶಬರಿಮಲೆಗೆ ಅಧ್ಯಯನ ಪ್ರವಾಸ ಕೈಗೊಳ್ಳಲಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಸೂಚನೆಯ ಮೇರೆಗೆ ಶಬರಿಮಲೆಯ ಈಗಿನ ವಾಸ್ತವಾಂಶದ ಕುರಿತಂತೆ ನಳಿನ್ ನೇತೃತ್ವದ ತಂಡ ಅಧ್ಯಯನ ನಡೆಸಲಿದೆ. ನಳಿನ್ ಜತೆಗೆ ಬಿಜೆಪಿ ರಾಷ್ಟ್ರೀಯ ನಾಯಕ ಮುರಳೀಧರ್ ರಾವ್ ಹಾಗೂ ಇತರರು ಇದ್ದು, ಶಬರಿಮಲೆಗೆ ತೆರಳಲಿದ್ದಾರೆ. ಈ ಸಂಬಂಧ ಮಂಗಳವಾರ ಬೆಳಗ್ಗೆ 10 ಗಂಟೆಗೆ ಕೇರಳದ ಚೆಂಗನ್ನೂರಿನಲ್ಲಿ ನಳಿನ್ ಸಭೆ ನಡೆಸಲಿದ್ದಾರೆ. ಬಳಿಕ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಪಂಪಾಕ್ಕೆ ತೆರಳಿ ಅಲ್ಲಿಂದ ಶಬರಿಮಲೆ ತಲುಪಲಿದ್ದಾರೆ.
ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಆರ್‌ಎಸ್‌ಎಸ್ ಬೈಠಕ್‌ನಲ್ಲಿ ಭಾಗವಹಿಸಿದ್ದ ಶಾ ಅವರು ಬಿಜೆಪಿ ಪ್ರಮುಖರ ಜತೆಗೆ ಖಾಸಗಿ ಹೊಟೇಲ್‌ನಲ್ಲಿ ರಾಜಕೀಯದ ವಿವಿಧ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದರು. ಶ್ರೀ ಕ್ಷೇತ್ರ ಶಬರಿಮಲೆ ವಿಚಾರದಲ್ಲಿ ಬಿಜೆಪಿ ಹೋರಾಟವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸುವಂತೆ ಸಂಸದ ನಳಿನ್‌ಗೆ ಶಾ ಅವರು ಸಲಹೆ ನೀಡಿದ್ದರು.
ಇದಕ್ಕೆ ಮುನ್ನುಡಿಯಾಗಿ ಶಬರಿಮಲೆಯ ವಾಸ್ತವ ವಿಚಾರಗಳನ್ನು ತಿಳಿದುಕೊಳ್ಳಲು ಹಾಗೂ ಮುಂದಿನ ಹೋರಾಟದ ಬಗ್ಗೆ ಚರ್ಚಿಸಲು ಈ ರೀತಿಯ ಅಧ್ಯಯನ ಪ್ರವಾಸ ಕೈಗೊಂಡು ವರದಿ ಸಿದ್ಧಗೊಳಿಸುವಂತೆ ಶಾ ಅವರು ನಳಿನ್ ಕುಮಾರ್ ಅವರಿಗೆ ಸೂಚಿಸಿದ್ದರು. ಇದರಂತೆ ನಳಿನ್ ಅವರು ವರದಿ ಸಿದ್ಧಪಡಿಸಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶ್ರೀ ಕ್ಷೇತ್ರ ಶಬರಿಮಲೆಯಲ್ಲಿ ಎದುರಾಗಿರುವ ಪ್ರಸ್ತುತ ಸ್ಥಿತಿಗತಿ ಕುರಿತಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ವಿಸ್ತೃತ ವರದಿ ನೀಡುವುದಕ್ಕಾಗಿ ನ.20ರಂದು ಶಬರಿಮಲೆಗೆ ತೆರಳುತ್ತಿದ್ದೇನೆ. ಅಲ್ಲಿ ಯಾತ್ರಾರ್ಥಿಗಳಿಗೆ ನೀಡಲಾಗುತ್ತಿರುವ ವ್ಯವಸ್ಥೆ ಸೇರಿದಂತೆ ವಾಸ್ತವಾಂಶದ ಬಗ್ಗೆ ಪರಿಶೀಲಿಸಿ ವರಿಷ್ಠರಿಗೆ ವರದಿ ಸಲ್ಲಿಸಲಾಗುವುದು.
ನಳಿನ್ ಕುಮಾರ್ ಕಟೀಲು, ಸಂಸದ