ನಾಲತವಾಡ: ಭೂರಹಿತ ಕಾರ್ಮಿಕರಿಗೆ ಗ್ರಾಪಂ ಮಟ್ಟದಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನೂರಕ್ಕೆ ನೂರು ಕೆಲಸ ನೀಡಲಾಗುವುದು ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಸಮೀಪದ ಬಿಜ್ಜೂರ ಗ್ರಾಮ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭೂರಹಿತ ಕಾರ್ಮಿಕರಿಗೆ ಜಾಬ್‌ಕಾರ್ಡ್ ವಿತರಣೆ ಸಭೆಯಲ್ಲಿ ಮಾತನಾಡಿದ ಅವರು, ಭೂರಹಿತ ಕಾರ್ಮಿಕರು ಲಾಕ್‌ಡೌನ್ ಸಮಯದಲ್ಲಿ ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ. ಭೂಮಿ ಇಲ್ಲದ ಕಾರಣ ಅವರು ಅನ್ಯ ರಾಜ್ಯಕ್ಕೆ ವಲಸೆ ಹೋಗಿ ಕೋವಿಡ್ ಮಾಹಾಮಾರಿ ಅಟ್ಟಹಾಸದಿಂದ ತುತ್ತು ಅನ್ನಕ್ಕಾಗಿ ಪರದಾಡಿದ ಘಟನೆ ಕೂಡ ನಡೆದಿದೆ. ಹೀಗಾಗಿ ಭೂರಹಿತ ಕಾರ್ಮಿಕರಿಗೆ ಗ್ರಾಪಂ ಮಟ್ಟದಲ್ಲಿ ನೂರಕ್ಕೆ ನೂರರಷ್ಟು ಉದ್ಯೋಗ ನೀಡಬೇಕು. ತಾಲೂಕಿನ ಎಲ್ಲ ಭೂರಹಿತ ಕಾರ್ಮಿಕರ ಪಟ್ಟಿ ತಯಾರು ಮಾಡಿ ಅವರಿಗೆ ಉದ್ಯೋಗ ಕಾರ್ಡ್ ನೀಡುವ ಮೂಲಕ ಗ್ರಾಪಂ ಮಟ್ಟದಲ್ಲಿ ಅವರಿಗೆಲ್ಲ ಉದ್ಯೋಗ ನೀಡಲಾಗುವುದು ಎಂದರು.
ಹಿಂದೆ ಉದ್ಯೋಗ ಖಾತ್ರಿ ಕಾಮಗಾರಿಯನ್ನು ಯಂತ್ರಗಳ ಮುಖಾಂತರ ಕೆಲಸ ಮಾಡಿಸುತ್ತಿದ್ದರು. ಆದರೆ, ಈಗ ಆ ರೀತಿ ಮಾಡುವಂತಿಲ್ಲ. ಕಾರ್ಮಿಕರಿಗೆ ಕಡ್ಡಾಯವಾಗಿ ಕೆಲಸ ನೀಡಬೇಕು. ಭೂ ರಹಿತ ಕಾರ್ಮಿಕರಿಗೆ ಮೊದಲ ಆದ್ಯತೆ ನೀಡಬೇಕು. ಗ್ರಾಪಂ ವ್ಯಾಪ್ತಿಯಲ್ಲಿ ಎಲ್ಲ ಕಾರ್ಮಿಕರಿಗೆ ಜಾಬ್‌ಕಾರ್ಡ್ ವಿತರಣೆ ಮಾಡಲಾಗುವುದು ಮತ್ತು ನಿಮಗೆ ಉದ್ಯೋಗ ನೀಡಿದ್ದಾರೋ ಇಲ್ಲವೋ ಎಂದು ನಾವು ಖುದ್ದು ಮನೆಗೆ ಬಂದು ವಿಚಾರಣೆ ಮಾಡುತ್ತೇವೆ ಎಂದು ಹೇಳಿದರು.
ವಿಧವಾ ವೇತನ, ವೃದ್ಧಾಪ್ಯ ವೇತನ, ಮನಸ್ವಿನಿ ಯೋಜನೆಯನ್ನು ಅರ್ಹ ಫಲಾನುಭವಿಗಳಿಗೆ ಒಂದು ವಾರದಲ್ಲಿ ನೀಡುವ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಇದಕ್ಕೆ ಯಾರೂ ನಯಾ ಪೈಸೆ ನೀಡುವಂತಿಲ್ಲ. ಯಾರಾದರೂ ಹಣ ಕೇಳಿದರೆ ಕೂಡಲೇ ನನ್ನ ಗಮನಕ್ಕೆ ತನ್ನಿ. ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ನಿಮ್ಮೆಲ್ಲರಿಗೂ ಉದ್ಯೋಗ ಕೊಡುವ ವರೆಗೆ ನಾನು ನಿಮ್ಮ ಬೆನ್ನು ಬಿಡುವುದಿಲ್ಲ ಎಂದರು.
ರೈತರಿಗೆ ಸರಕಾರ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ 10ಸಾವಿರ ರೂಪಾಯಿ ನೀಡುತ್ತಿದೆ. ಶೂನ್ಯ ಅಕೌಂಟಗೆ 500 ರೂಪಾಯಿ ನೇರವಾಗಿ ಜಮೆ ಮಾಡುತ್ತಿದೆ. ಅದೇ ರೀತಿ ಬಡವರಿಗೆ ಎಲ್ಲ ಸೌಲತ್ತು ಮುಟ್ಟಿಸುವ ಕೆಲಸ ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ ಎಂದರು.
ತಹಶೀಲ್ದಾರ ಜಿ.ಎಸ್.ಮಳಗಿ, ಇಒ ಶಶಿಕಾಂತ ಶಿವಪುರೆ, ಪಿ.ಕೆ.ದೇಸಾಯಿ, ಎನ್‌ಆರ್‌ಜಿ ಸಹಾಯಕ ನಿರ್ದೇಶಕರು ಮಾತನಾಡಿದರು. ಸಿಪಿಐ ಆನಂದ ವಾಗ್ಮೋರೆ, ಬಿಜೆಪಿ ಮುಖಂಡರಾದ ಮಲಕೇಂದ್ರಗೌಡ ಪಾಟೀಲ, ಶಿವಶಂಕರಗೌಡ ಹಿರೇಗೌಡರ, ಎಂ.ಎಸ್.ಪಾಟೀಲ, ಕಾಶಿಬಾಯಿ ರಾಂಪೂರ, ಸೋಮನಗೌಡ ಬಿರಾದಾರ, ಗ್ರಾಪಂ ಅಧ್ಯಕ್ಷೆ ರುಕ್ಮವ್ವ ಮಂಕಣಿ ಇದ್ದರು.