ಪಂಚರಾಜ್ಯ ಚುನಾವಣೆ ಕಾವೇರುತ್ತಿದ್ದಂತೆ ರಾಜಕೀಯ ನಾಯಕರ ವೈಯಕ್ತಿಕ ನಿಂದನೆಯ ಭರಾಟೆಯೂ ಜೋರಾಗಿದೆ. ಮೌಲ್ಯಾಧಾರಿತ ಸಂವಾದಕ್ಕೆ ಏನೂ ಸಿಗದೆ ಇಂಥ ದಾರಿ ಹಿಡಿಯುವುದು ನಮ್ಮ ರಾಜಕೀಯ ನಾಯಕರ ಇಂದಿನ ಮನಸ್ಥಿತಿಯ ಪ್ರತೀಕ.
ಪಂಚರಾಜ್ಯಗಳ ಚುನಾವಣಾ ಪ್ರಚಾರ ಕಾವೇರುತ್ತಿದ್ದಂತೆಯೇ ರಾಜಕೀಯ ಮುಖಂಡರ ಹೇಳಿಕೆಗಳ ಭರಾಟೆ ಶುರುವಾಗಿದೆ. ಆರೋಪ -ಪ್ರತ್ಯಾರೋಪ, ಟೀಕೆ, ವಿಡಂಬನೆ, ವಿಮರ್ಶೆ ಇವೆಲ್ಲ ಆರೋಗ್ಯಕರ ರಾಜಕಾರಣಕ್ಕೆ ಅಗತ್ಯ. ಆದರೆ ಎದುರಾಳಿಗಳನ್ನು ಟೀಕಿಸುವ ಭರದಲ್ಲಿ ರಾಜಕಾರಣಿಗಳು ಕೆಲವೊಮ್ಮೆ ನಾಲಗೆ ಮೇಲಿನ ಲಗಾಮು ಕಳೆದು ಕೊಳ್ಳುತ್ತಾರೆ. ಎದುರಾಳಿಗಳ ವೈಯಕ್ತಿಕ ವಿಚಾರಗಳನ್ನು ಉಲ್ಲೇಖೀಸಿ ಟೀಕಿಸುವುದು, ಲೇವಡಿ ಮಾಡುವುದು, ಹೆಂಡತಿ ಮಕ್ಕಳನ್ನು ರಾಜಕೀಯ ಕೆಸರೆರಚಾಟಕ್ಕೆ ಎಳೆದು ತರುವುದೆಲ್ಲ ಭಾರತದ ರಾಜಕಾರಣದ ಮಟ್ಟಿಗೆ ಹೊಸದಲ್ಲ. ಎದುರಾಳಿಗಳು ಮಹಿಳೆಯರಾಗಿದ್ದರಂತೂ ಟೀಕೆಗಳು ಸಭ್ಯತೆಯ ಎಲ್ಲೆ ಮೀರುತ್ತವೆ. ಇದೀಗ ಬಿಜೆಪಿ ನಾಯಕ ವಿನಯ್ ಕಟಿಯಾರ್ ಮತ್ತು ಜೆಡಿ (ಯು) ಮುಖಂಡ ಶರದ್ ಯಾದವ್ ಈ ರೀತಿಯ ಹೇಳಿಕೆಗಳನ್ನು ನೀಡಿ ವಿವಾದಕ್ಕೊಳಗಾಗಿದ್ದಾರೆ.
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕುರಿತು ಕಟಿಯಾರ್ ನೀಡಿರುವ ಹೇಳಿಕೆ ತೀರಾ ಕೀಳು ಅಭಿರುಚಿಯಿಂದ ಕೂಡಿತ್ತು. ಸುದ್ದಿ ವಾಹಿನಿಯೊಂದರ ಜತೆ ಮಾತನಾಡುವ ವೇಳೆ ಪ್ರಿಯಾಂಕ ಕಾಂಗ್ರೆಸ್‌ನ ಸ್ಟಾರ್ ಪ್ರಚಾರಕಿಯೇ ಎಂದು ಕೇಳಿದ ಪ್ರಶ್ನೆಗೆ ಕಟಿಯಾರ್ ಪ್ರಿಯಾಂಕ ಅಂತಹ ಸುಂದರಿಯೇನಲ್ಲ. ಅವರು ಉತ್ತರ ಪ್ರದೇಶದ ಚುನಾವಣೆಯಲ್ಲಿ ಸ್ಟಾರ್ ಪ್ರಚಾರ ಕರು ಎಂದು ಭಾವಿಸುವುದಿಲ್ಲ. ಅವರಿಗಿಂತ ಸುಂದರವಾಗಿರುವ ಅನೇಕ ಪ್ರಚಾರಕರು ನಮ್ಮಲ್ಲಿದ್ದಾರೆ. ಅವರೆಲ್ಲ ಹೀರೊಯಿನ್‌ಗಳು ಎಂದುತ್ತರಿಸಿದ್ದಾರೆ. ಬಹುಶಃ ಸ್ಟಾರ್ ಪ್ರಚಾರಕರೆಂದರೆ ಸಿನೆಮಾ ತಾರೆಯರಂತೆ ಸುಂದರವಾಗಿರುವವರು ಎಂದು ಕಟಿಯಾರ್ ಭಾವಿಸಿರಬಹುದು. ಕಟಿಯಾರ್ ಹೇಳಿಕೆ ಬಿಜೆಪಿಯ ಮನೋಧರ್ಮವನ್ನು ತೋರಿಸುತ್ತದೆ ಎಂದು ಪ್ರಿಯಾಂಕಾ ಇದಕ್ಕೆ ತಿರುಗೇಟು ನೀಡಿದ್ದಾರೆ.
ಶರದ್ ಯಾದವ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಗಳ ಮರ್ಯಾದೆಗಿಂತಲೂ ಮತದ ಮರ್ಯಾದೆ ದೊಡ್ಡದು ಎಂಬರ್ಥದಲ್ಲಿ ಮಾತನಾಡಿದ್ದಾರೆ. ಮಗಳು ಶೀಲಗೆಟ್ಟರೆ ಆಕೆಯ ಮನೆಯವರು ಮಾತ್ರವಲ್ಲದೆ ನೆರೆಹೊರೆಯವರು ಮತ್ತು ಇಡೀ ಊರೇ ಅವಮಾನದಿಂದ ತಲೆತಗ್ಗಿಸುತ್ತದೆ. ಇದೇ ರೀತಿ ಮತವನ್ನು ಮಾರಿಕೊಂಡರೆ ದೇಶ ತಲೆತಗ್ಗಿಸಬೇಕಾಗುತ್ತದೆ ಎಂದಿದ್ದಾರೆ ಯಾದವ್. ಮತವನ್ನು ಹಣಕ್ಕೆ ಮಾರಿಕೊಳ್ಳಬೇಡಿ ಎಂಬ ಒಳ್ಳೆಯ ಉದ್ದೇಶದಿಂದಲೇ ಅವರು ಈ ಹೇಳಿಕೆಯನ್ನು ನೀಡಿರಬಹುದು. ಆದರೆ ಅವರು ಬಳಸಿದ ಉಪಮೆ ಮಾತ್ರ ಕೀಳು ಅಭಿರುಚಿಯದ್ದಾಗಿತ್ತು. ಶರದ್ ಯಾದವ್ ಮಹಿಳೆಯರ ಕುರಿತು ತುತ್ಛವಾಗಿ ಮಾತನಾಡಿರುವುದು ಇದೇ ಮೊದಲಲ್ಲ. ಮಹಿಳೆಯರ ವಿಚಾರಕ್ಕೆ ಬಂದಾಗ ತಮ್ಮ ಚಿಂತನೆಯೂ ಪುಂಡುಪೋಕರಿ ಹುಡುಗರಂತೆಯೇ ಇರುತ್ತದೆ ಎನ್ನುವುದನ್ನು ರಾಜಕೀಯದಲ್ಲಿದ್ದವರು ಆಗಾಗ ಸಾಬೀತುಪಡಿಸುತ್ತಿರುತ್ತಾರೆ.
ಈ ರೀತಿ ಲಂಗುಲಗಾಮಿಲ್ಲದೆ ಮಾತನಾಡುವ ರಾಜಕಾರಣಿಗಳ ದೊಡ್ಡ ಪಟ್ಟಿಯೇ ಇದೆ. ಬಿಜೆಪಿ ನಾಯಕ ದಯಾಶಂಕರ್ ಸಿಂಗ್ ಕಳೆದ ವರ್ಷ ಮಾಯಾವತಿಯನ್ನು ವೇಶ್ಯೆ ಎಂದು ಕರೆದದ್ದು, ಇದಕ್ಕೆ ಉತ್ತರವಾಗಿ ದಯಾಶಂಕರ್ ಸಿಂಗ್ ಪತ್ನಿ ಮತ್ತು ಮಗಳನ್ನು ಮಾಯಾವತಿ ಸಾರ್ವಜನಿಕವಾಗಿ ನಿಂದಿಸಿದ ಪ್ರಕರಣ ದೇಶದ ರಾಜಕಾರಣ ಕಂಡ ನೈತಿಕ ಅಧಃಪತನದ ಪರಮಾವಧಿಯಾಗಿತ್ತು. ಅತ್ಯಾಚಾರ, ಲೈಂಗಿಕ ಕಿರುಕುಳ, ನೈತಿಕ ಪೊಲೀಸ್‌ಗಿರಿಯಂತಹ ಪ್ರಕರಣಗಳು ಸಂಭವಿಸಿದ ಸಂದರ್ಭದಲ್ಲಿ ನಮ್ಮ ರಾಜಕೀಯ ಮುಖಂಡರು ನೀಡುವ ಹೇಳಿಕೆ ಗಳನ್ನು ನೋಡುವಾಗ ಇವರು ಯಾವ ಅರ್ಹತೆಯಿಂದ ಸಾರ್ವಜನಿಕ ಜೀವನದಲ್ಲಿದ್ದಾರೆ ಎಂಬ ಅನುಮಾನ ಬರುತ್ತದೆ.
ಕೀಳು ಹೇಳಿಕೆಗಳನ್ನು ನೀಡಿದ ತಪ್ಪಿಗೆ ರಾಜಕಾರಣಿಗಳು ಶಿಕ್ಷೆ ಅನುಭವಿಸಿದ ನಿದರ್ಶನಗಳು ಇಲ್ಲವೇ ಇಲ್ಲ ಎನ್ನುವಷ್ಟು ಅಪರೂಪ. ಹೀಗಾಗಿಯೇ ಮುಖಂಡರು ಮಾತನಾಡುವಾಗ ಅದರ ಪರಿಣಾಮ ವನ್ನು ಚಿಂತಿಸುವ ಗೋಜಿಗೆ ಹೋಗುವುದಿಲ್ಲ. ಚುನಾವಣಾ ರಾಜಕೀಯ ಸ್ವತ್ಛವಾಗಬೇಕಿದ್ದರೆ ಮುಖಂಡರು ಮೊದಲು ತಮ್ಮ ನಾಲಗೆಯನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಅವರಿಂದ ಸ್ವ ನಿಯಂತ್ರಣ ಸಾಧ್ಯವಾಗ ದಿದ್ದರೆ ಇದಕ್ಕಾಗಿ ಕಠಿನ ನಿಯಮಾವಳಿಗಳನ್ನು ರಚಿಸುವುದು ಒಳಿತು. ವೈಯಕ್ತಿಕ ನಿಂದನೆ ಮಾಡುವವರನ್ನು, ಮಹಿಳೆಯರ ಕುರಿತು ಕೀಳಾಗಿ ಮಾತನಾಡುವವರನ್ನು ಪ್ರಚಾರದಿಂದ ಅನರ್ಹಗೊಳಿಸುವಂತಹ ನಿಯಮಗಳು ಬಂದರೆ ಈ ಚಾಳಿಯನ್ನು ತಡೆಗಟ್ಟಬಹುದು.