Advertisement

ನೈನಾ ಜೈಸ್ವಾಲ್‌ ಎಂಬ ಅದ್ಭುತ ಯುವ ಪ್ರತಿಭೆ

03:25 PM Aug 17, 2020 | Karthik A |

ಪತ್ರಿಕೋದ್ಯಮದಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಅಂದರೆ ತನ್ನ 16ನೇ ವಯಸ್ಸಿನಲ್ಲಿ ಪಡೆದ ದೇಶದ ಮೊದಲ ಹುಡುಗಿ ನೈನಾ ಜೈಸ್ವಾಲ್‌.

Advertisement

ತನ್ನ ಆಲೋಚನಾ ಶಕ್ತಿಯ ತೀವ್ರತೆಯಿಂದ ನೈನಾ ಪಠ್ಯಗಳನ್ನು ಶೀಘ್ರ ಅಭ್ಯಾಸ ಮಾಡಿ ಎಲ್ಲರೂ ಅಚ್ಚರಿಯಿಂದ ನೋಡುವಂತೆ ಮಾಡಿದ್ದಾರೆ.

ಅಚ್ಚರಿ ಕೇವಲ ಪದವಿ ಸಣ್ಣ ವಯಸ್ಸಿಗೆ ಪಡೆದುದಕ್ಕೆ ಮಾತ್ರವಲ್ಲ.

ಬದಲಾಗಿ ಆಕೆ ತನ್ನ ಎಸೆಸೆಲ್ಸಿ ವಿದ್ಯಾಭ್ಯಾಸವನ್ನು 8ನೇ ವಯಸ್ಸಿನಲ್ಲಿ ಮುಗಿಸಿದ್ದಾಳೆ.

ಅತಿಕಿರಿ ವಯಸ್ಸಿನಲ್ಲಿ ಹತ್ತನೇ ತರಗತಿ ಮುಗಿಸಿದ ದಾಖಲೆಯೂ ನೈನಾಳ ಹೆಸರಿನಲ್ಲಿಯೇ ಇದೆ.

Advertisement

ಇಷ್ಟಪಟ್ಟು ಕಲಿತರೆ ಯಾವುದೂ ಕಷ್ಟವಲ್ಲ ಎಂಬುದುಕ್ಕೆ ನೈನಾ ಒಂದು ಉದಾ‌ಹರಣೆ. 2008ರಲ್ಲಿ ಹತ್ತನೇ ತರಗತಿ, 2010ರಲ್ಲಿ 12 ನೇ ತರಗತಿ, 2013ರಲ್ಲಿ ಒಸ್ಮಾನಿಯ ವಿಶ್ವವಿದ್ಯಾನಿಲಯದಿಂದ ಪತ್ರಿಕೋದ್ಯಮದಲ್ಲಿ ಪದವಿಯನ್ನು ಪಡೆದಳು. ದಾಖಲೆಗಳ ಪಟ್ಟಿ ಅಲ್ಲಿಗೇ ಮುಗಿಯುವುದಿಲ್ಲ. ಸಾಧನೆಯ ಶಿಖರ ತಲುಪುವ ಛಲವುಳ್ಳವರು ಒಂದೇ ಸಾಧನೆಗೆ ಖುಷಿ ಪಡುವುದಿಲ್ಲ. ಅವರದ್ದು ನಿರಂತರ ಶ್ರಮ. 2016ರಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿದಳು. ಅಲ್ಲಿಗೆ ಏಷ್ಯಾ ದೇಶಗಳಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಿರುದು ಕೂಡ ಲಭಿಸುತ್ತದೆ. 17ನೇ ವಯಸ್ಸಿನಲ್ಲಿ ಪಿಎಚ್‌. ಡಿ. ಆರಂಭಿಸಿದ ಕೀರ್ತಿಯೂ ನೈನಾಳದ್ದೇ.

ರಾಷ್ಟ್ರ ಮಟ್ಟದ ಅಂಡರ್‌ 15 ಟೇಬಲ್‌ ಟೆನ್ನಿಸ್‌ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನವನ್ನು ಕೂಡ ನೈನಾ ಅಲಂಕರಿಸಿದ್ದರು. ಟೇಬಲ್‌ಟೆನ್ನಿಸ್‌ನಲ್ಲಿ ರಾಷ್ಟ್ರ ಹಾಗೂ ಅಂತಾರಾಷ್ಟ್ರಮಟ್ಟದ ಸಾಧನೆಯೂ ಇವಳ ಹೆಸರಿನಲ್ಲಿದೆ.

2000 ಇಸವಿಯಲ್ಲಿ ಆಂಧ್ರಪ್ರದೇಶದಲ್ಲಿ ಜನಿಸಿದ ನೈನಾ ತನ್ನ ವಯಸ್ಸಿಗಿಂತಲೂ ಹೆಚ್ಚಿನ ಪ್ರೌಢಿಮೆಯನ್ನು ಹೊಂದಿದ್ದಳು. ಬುದ್ಧಿ ಸಾಮರ್ಥ್ಯದ ಮಟ್ಟವೂ ಅಧಿಕವಾಗಿತ್ತು. 5ನೇ ವಯಸ್ಸಿಗೆ ತೆಲುಗು, ಹಿಂದಿ, ಇಂಗ್ಲೀಷ್‌ ಭಾಷೆಗಳಲ್ಲಿ ಉತ್ತಮ ಹಿಡಿತ ಹೊಂದಿದ್ದ ನೈನಾಳಿಗೆ ಕಲಿಕೆಯ ಜತೆ ಸಂಗೀತ ಹಾಗೂ ಟೇಬಲ್‌ಟೆನ್ನಿಸ್‌ ಇಷ್ಟವಾಗಿದ್ದವು.

ನೆನಪಿನ ಸಾಮಥ್ಯವನ್ನು ಹೆಚ್ಚಿಸುವಲ್ಲಿ ಹೆತ್ತವರ ಪಾತ್ರ ಅಧಿಕವಾಗಿತ್ತು ಎಂಬುದನ್ನು ನೈನಾ ಹೇಳುತ್ತಾರೆ. ವಿದ್ಯಾಭ್ಯಾಸ ನನಗೆ ಒತ್ತಡವಾಗಿರಲಿಲ್ಲ, ಬದಲಾಗಿ ನನ್ನ ಆಸಕ್ತಿಯ ವಿಷಯವಾಗಿತ್ತು ಎಂದು ಹೇಳುವ ನೈನಾ ಇಂದಿನ ಯುವ ಜನತೆಗೆ ಮಾದರಿಯಾಗುತ್ತಾರೆ. ಮುಂದೆ ಸಿವಿಲ್‌ ಸರ್ವಿಸ್‌ ಪರೀಕ್ಷೆ ಎದುರಿಸಬೇಕೆಂದು ಸಿದ್ಧತೆ ನಡೆಸುತ್ತಿರುವ ನೈನಾ ಆಕಾರಣಕ್ಕಾಗಿಯೇ ಪತ್ರಿಕೋದ್ಯಮದಲ್ಲಿ ಸ್ನಾತಕ್ಕೋತ್ತರ ಪದವಿಯನ್ನು ಪಡೆದಿದ್ದಾರೆ.

ಸಾಮಾನ್ಯ ಜ್ಞಾನ ಹೆಚ್ಚಾಗುತ್ತದೆ ಎಂಬುದು ಇದರ ಮೂಲೋದ್ದೇಶ. ಕಲಿಕೆ ನಿರಂತರ ಜತೆಗೆ ಸಾಧನೆ ಕೂಡ. ವರ್ಷಗಳು ಕಳೆದಂತೆ ಹೊಸತುಗಳನ್ನು ಸಾಧಿಸುವ ನೈನಾ ಎಲ್ಲರಿಗೂ ಪ್ರೇರಣೆಯಾಗಲಿ.

ಸುಶ್ಮಿತಾ ಶೆಟ್ಟಿ

 

 

Advertisement

Udayavani is now on Telegram. Click here to join our channel and stay updated with the latest news.

Next