Advertisement

ಜೆಡಿಎಸ್‌ ಸದಸ್ಯರ ಒತ್ತಡಕ್ಕೆ ಕಣ್ಣೀರಿಟ್ಟ ನಯಿಮಾಸುಲ್ತಾನ

12:42 PM Mar 08, 2018 | Team Udayavani |

ಮೈಸೂರು: ಪಕ್ಷದ ಆಂತರಿಕ ಒಪ್ಪಂದದಂತೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಜೆಡಿಎಸ್‌ ಸದಸ್ಯರು ಪಟ್ಟು ಹಿಡಿದಿದ್ದರಿಂದ ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ನಯಿಮಾ ಸುಲ್ತಾನ ಕಣ್ಣೀರಿಟ್ಟ ಪ್ರಸಂಗ ನಡೆಯಿತು.

Advertisement

ಬುಧವಾರ ಕರೆಯಲಾಗಿದ್ದ ಜಿಲ್ಲಾ ಪಂಚಾಯತ್‌ ಸಾಮಾನ್ಯ ಸಭೆಗೆ ಕೋರಂ ಅಭಾವದಿಂದ ಎರಡು ಬಾರಿ ಮುಂದೂಡಬೇಕಾಯಿತು. ಬೆಳಗ್ಗೆ 11 ಗಂಟೆಗೆ ಸಾಮಾನ್ಯ ಸಭೆ ನಿಗದಿಯಾಗಿತ್ತು. ಆದರೆ, ಅಧ್ಯಕ್ಷೆ ನಯಿಮಾ ಸುಲ್ತಾನ ಅವರ ಕೊಠಡಿಯಲ್ಲಿ ಸೇರಿದ ಜೆಡಿಎಸ್‌ ಸದಸ್ಯರು, ನೀವು ಸಭೆ ನಡೆಸುವ ಬದಲಿಗೆ ಪಕ್ಷದಲ್ಲಿ ಈ ಹಿಂದೆ ಆದ ಒಪ್ಪಂದದಂತೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಪಟ್ಟು ಹಿಡಿದರು.

ಇದರಿಂದಾಗಿ ಅಧ್ಯಕ್ಷೆ ನಯಿಮಾ ಸುಲ್ತಾನ, ಜಿಪಂ ಸಭಾಂಗಣಕ್ಕೆ ಬರಲಾಗಲಿಲ್ಲ. ಕಡೆಗೂ 11.45ಕ್ಕೆ ಬಂದರಾದರೂ ಜೆಡಿಎಸ್‌-ಬಿಜೆಪಿ ಸದಸ್ಯರು ಸಭಾಂಗಣಕ್ಕೆ ಬರದಿದ್ದರಿಂದ ಕೋರಂ ಅಭಾವದಿಂದ ಮತ್ತೆ ಅರ್ಧಗಂಟೆ ಕಾಲ ಸಭೆ ಮುಂದೂಡಲಾಯಿತು.

ಮತ್ತೆ ಅಧ್ಯಕ್ಷರ ಕೊಠಡಿಗೆ ತೆರಳಿದ ಜೆಡಿಎಸ್‌ ಸದಸ್ಯರು, ಜಿಪಂ ಅಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಮೊದಲ 20 ತಿಂಗಳು ನಿಮಗೆ, ನಂತರದ 40 ತಿಂಗಳು ಪರಿಮಳಾ ಶ್ಯಾಂ ಅವರಿಗೆ ಅಧ್ಯಕ್ಷ ಸ್ಥಾನ ನೀಡುವಂತೆ ಪಕ್ಷದ ವರಿಷ್ಠರು ತಿಳಿಸಿದ್ದರು. ಅದರಂತೆ ನೀವು ಅಧ್ಯಕ್ಷರಾಗಿ 22 ತಿಂಗಳಾಗಿದೆ. ಹೀಗಾಗಿ ಪಕ್ಷದ ವರಿಷ್ಠರ ಸೂಚನೆಯಂತೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಪಟ್ಟು ಹಿಡಿದರು.

ಈ ಸಂಬಂಧ ಜೆಡಿಎಸ್‌ ಸದಸ್ಯರು ಸುಮಾರು 45 ನಿಮಿಷಗಳ ಕಾಲ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಕೆಲ ಮಹಿಳಾ ಸದಸ್ಯರು ವೈಯಕ್ತಿಕವಾಗಿ ನಿಂದನೆ ಮಾಡಿದರು ಎಂದು ಕಡೆಗೆ ಅಧ್ಯಕ್ಷೆ ನಯಿಮಾ ಸುಲ್ತಾನ ಕಣ್ಣೀರಿಟ್ಟರಲ್ಲದೆ, ನಮ್ಮ ಯಜಮಾನರನ್ನು ಕೇಳಿ ನಿರ್ಧಾರ ತಿಳಿಸುವುದಾಗಿ ಹೇಳಿ ಎದ್ದು ಹೊರಬಂದರು.

Advertisement

ಇತ್ತೀಚೆಗೆ ಮೈಸೂರಿಗೆ ಬಂದಿದ್ದ ಜೆಡಿಎಸ್‌ ರಾಜಾÂಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರೂ ಕೂಡ ಒಪ್ಪಂದಂತೆ ರಾಜೀನಾಮೆ ಕೊಟ್ಟು ಪರಿಮಳ ಶ್ಯಾಂ ಅವರಿಗೆ ಅವಕಾಶ ಮಾಡಿಕೊಡುವಂತೆ ಸೂಚಿಸಿದ್ದರು ಎಂದು ಜೆಡಿಎಸ್‌ ಸದಸ್ಯರು ತಿಳಿಸಿದರು.

49 ಸದಸ್ಯ ಬಲದ ಮೈಸೂರು ಜಿಪಂನಲ್ಲಿ ಕಾಂಗ್ರೆಸ್‌ 22, ಜೆಡಿಎಸ್‌ 18, ಬಿಜೆಪಿ 8 ಸ್ಥಾನ ಹಾಗೂ ಓರ್ವ ಪಕ್ಷೇತರ ಸದಸ್ಯರಿದ್ದು, 22 ಸದಸ್ಯ ಸ್ಥಾನದೊಂದಿಗೆ ಕಾಂಗ್ರೆಸ್‌ ಅತಿದೊಡ್ಡ ಪಕ್ಷವಾಗಿದ್ದರೂ ಜೆಡಿಎಸ್‌-ಬಿಜೆಪಿ ಮೈತ್ರಿಯಿಂದ ಅಧಿಕಾರ ಹಿಡಿದಿದ್ದು, ಮೀಸಲಾತಿ ಪ್ರಕಾರ ಎಚ್‌.ಡಿ.ಕೋಟೆ ತಾಲೂಕಿನವರೇ ಆದ ನಯಿಮಾಸುಲ್ತಾನ ಹಾಗೂ ಪರಿಮಳಾ ಶ್ಯಾಂ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಗಳಾಗಿದ್ದರು.

ಹೀಗಾಗಿ ಮೊದಲ 20 ತಿಂಗಳು ನಯಿಮಾ ಸುಲ್ತಾನ, ನಂತರದ 40 ತಿಂಗಳು ಪರಿಮಳಾ ಶ್ಯಾಂ ಅಧ್ಯಕ್ಷರಾಗಲಿ ಎಂದು ಪಕ್ಷದ ವರಿಷ್ಠರು ಸೂಚಿಸಿದ್ದರು. ಅದರಂತೆ ನಯಿಮಾ ಸುಲ್ತಾನ ಅಧ್ಯಕ್ಷರಾಗಿ 22 ತಿಂಗಳು ಕಳೆದಿರುವುದರಿಂದ ಜೆಡಿಎಸ್‌ ಸದಸ್ಯರು ರಾಜೀನಾಮೆಗೆ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next