Advertisement

Nail Polish: ಉಗುರುಗಳ ಅಂದ ಹೆಚ್ಚಿಸುವ ನೈಲ್ ಪಾಲಿಶ್ ನಲ್ಲಿದೆ ಕ್ಯಾನ್ಸರ್ ನ ರಾಸಾಯನಿಕ ಅಂಶ

06:16 PM Sep 24, 2024 | ಕಾವ್ಯಶ್ರೀ |

ಸುಂದರವಾಗಿ ಕಾಣಬೇಕೆಂದು ಪ್ರತಿ ಮಹಿಳೆಯರೂ ಬಯಸುತ್ತಾರೆ. ಅದಕ್ಕಾಗಿ ಸೌಂದರ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಕೈಗಳು ಸುಂದರವಾಗಿ ಕಾಣಬೇಕೆಂದು ವ್ಯಾಕ್ಸಿಂಗ್, ಮ್ಯಾನಿಕ್ಯೂರ್‌ ಗಳ ಮೊರೆ ಹೋಗುವವರ ಸಂಖ್ಯೆ ಹೆಚ್ಚಿದೆ.

Advertisement

ನೈಲ್ ಪಾಲಿಶ್ ಕೈಗಳು ಮತ್ತು ಕಾಲುಗಳ ಸೌಂದರ್ಯ ವೃದ್ಧಿಸಲು ಉಪಯೋಗವಾಗುವ ಒಂದು ವಸ್ತು. ಪ್ರತಿಯೊಂದು ಸಂದರ್ಭದಲ್ಲಿಯೂ ಬಟ್ಟೆಗೆ ಹೊಂದಾಣಿಕೆ ಆಗುವಂತಹ ನೈಲ್ ಪಾಲಿಶ್ ಹಾಕಿಕೊಳ್ಳುವುದು ಇಂದಿನ ದಿನಗಳಲ್ಲಿನ ಟ್ರೆಂಡ್.

ಉಗುರುಗಳಿಗೆ ವಿವಿಧ ಬಣ್ಣಗಳ ನೈಲ್ ಪಾಲಿಶ್ ಹಚ್ಚಿ, ತಮ್ಮ ಕೈಗಳನ್ನು ಇನ್ನಷ್ಟು ಚೆನ್ನಾಗಿ ಕಾಣುವಂತೆ ಮಾಡುತ್ತಾರೆ. ಉಗುರುಗಳು ಸುಂದರವಾಗಿ ಕಾಣುವಲ್ಲಿ ನೈಲ್​ ಪಾಲಿಶ್ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಉಗುರುಗಳ ಅಂದ ಹೆಚ್ಚಿಸುವ ನೈಲ್​ ಪಾಲಿಶ್ ನಿಂದ ಆರೋಗ್ಯ ಕೆಡಬಹುದು ಎಂಬುದು ಹಲವರಿಗೆ ತಿಳಿದಿರುವುದಿಲ್ಲ.

ಹಲವು ಬಗೆಯ ನೈಲ್ ಪಾಲಿಶ್ ಗಳು ಮಾರುಕಟ್ಟೆಗಳಲ್ಲಿ ಸಿಗುತ್ತವೆ. ಆದರೆ, ಅತಿಯಾಗಿ ನೈಲ್ ಪಾಲಿಶ್ ಬಳಸುವುದರಿಂದ ಕ್ಯಾನ್ಸರ್ ಬರಬಹುದು. ನೈಲ್ ಪಾಲಿಶ್ ನಲ್ಲಿರುವ ರಾಸಾಯನಿಕ ಅಂಶ ದೇಹಕ್ಕೆ ಸೇರಿ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

Advertisement

ನೈಲ್ ಪಾಲಿಶ್ ಗಳಲ್ಲಿ  ಸ್ಪಿರಿಟ್ ಬಳಸಲಾಗುತ್ತದೆ. ಇದು ಶ್ವಾಸಕೋಶದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅದಕ್ಕಾಗಿ ನೈಲ್ ಪಾಲಿಶ್  ಹಚ್ಚದಿರಲು ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು. ಹಾಗಿದ್ದರೂ ನೈಲ್ ಪಾಲಿಶ್ ಹಚ್ಚಲೇಬೇಕೆಂದಿದ್ದರೆ ವಿಶೇಷ ಸಂದರ್ಭಗಳಲ್ಲಿ ಮಾತ್ರ ನೈಲ್ ಪಾಲಿಶ್ ಬಳಸಿ ಅಥವಾ ಕಡಿಮೆ ರಾಸಾಯನಿಕಗಳನ್ನು ಹೊಂದಿರುವ ಉತ್ತಮ ಗುಣಮಟ್ಟದ ನೈಲ್ ಪಾಲಿಶ್ ಹಚ್ಚಿಕೊಳ್ಳಿ.

ಹೆಚ್ಚಿನ ಉಗುರು ಆರೈಕೆ ಉತ್ಪನ್ನಗಳು ವಿಷಕಾರಿ ಮತ್ತು ಅಪಾಯಕಾರಿ ಅಂಶ ಒಳಗೊಂಡಿರುತ್ತವೆ. ಅವುಗಳ ಬಳಕೆ ಆರೋಗ್ಯವನ್ನು ಹಾನಿಗೊಳಿಸುತ್ತದೆ. ಆದ್ದರಿಂದ ನೈಲ್ ಪಾಲಿಶ್ ಹಚ್ಚುವ ಮೊದಲು ಬೆರಳುಗಳ ಮೇಲೆ ಸನ್ ಸ್ಕ್ರೀನ್ ಹಚ್ಚಿಕೊಳ್ಳುವುದು ಉತ್ತಮ.

ರಾಸಾಯನಿಕಗಳೊಂದಿಗೆ ನೈಲ್ ಪಾಲಿಶ್ ತೆಗೆದು ಹಾಕುವುದರಿಂದ ಉಗುರುಗಳು ಒರಟಾಗಬಹುದು. ನೈಲ್ ಪಾಲಿಶ್ ನಲ್ಲಿರುವ ರಾಸಾಯನಿಕಗಳು ಬಾಯಿಯ ಮೂಲಕ ಪ್ರವೇಶಿಸಿ ಆರೋಗ್ಯಕ್ಕೆ ತೊಂದರೆ ಉಂಟು ಮಾಡುತ್ತವೆ.

ಕೆಲವೊಂದು ಸಂದರ್ಭದಲ್ಲಿ ಕೃತಕ ನೈಲ್ ಪಾಲಿಶ್ ಗಳು ಕೂಡ ಇವೆ. ಕೆಲವರಿಗೆ ನೈಲ್ ಪಾಲಿಶ್ ನ ವಾಸನೆ ಒಂದು ಚಟವಾಗಿಯೂ ಇರತ್ತದೆ. ನೈಲ್ ಪಾಲಿಶ್ ಉಪಯೋಗಿಸುವುದರಿಂದಾಗುವ ಹಾನಿಗಳಲ್ಲಿ ಬಂಜೆತನದಿಂದ ಹಿಡಿದು ಕ್ಯಾನ್ಸರ್ ತನಕ ಸೇರಿದೆ. ನೈಲ್ ಪಾಲಿಶ್ ನಲ್ಲಿ ಬಳಸುವ ಕೆಲವೊಂದು ರಾಸಾಯನಿಕಗಳು ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ನೈಲ್ ಪಾಲಿಶ್ ವಾಸನೆ ಆರೋಗ್ಯಕ್ಕೆ ಹಾನಿಕಾರಕ. ಇದು ಆರೋಗ್ಯಕ್ಕೆ ಯಾವ ರೀತಿ ಹಾನಿ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳಲು ಮುಂದೆ ಓದಿ..

ಟೊಲ್ಯೂನ್

ನೈಲ್ ಪಾಲಿಶ್ ಗಳಲ್ಲಿ ಟೊಲ್ಯೂನ್ ಎಂಬ ದ್ರಾವಕ ಬಳಸಲಾಗುತ್ತದೆ. ಇದು ಉಗುರುಗಳಿಗೆ ಫಿನಿಶಿಂಗ್ ನೀಡುವುದು ಮತ್ತು ಬಣ್ಣ ಕಾಯ್ದಿಡುತ್ತದೆ. ಉಗುರಿನಾದ್ಯಂತ ಮೃದುವಾದ ಮುಕ್ತಾಯ ರಚಿಸಲು ಈ ದ್ರಾವಕವನ್ನು ಸೇರಿಸಲಾಗುತ್ತದೆ ಮತ್ತು ಬಾಟಲಿಯಲ್ಲಿ ಬಣ್ಣವನ್ನು ಬೇರ್ಪಡಿಸದಂತೆ ಮಾಡಲು ಇದನ್ನು ಉಪಯೋಗಿಸಲಾಗುತ್ತದೆ. ಈ ರಾಸಾಯನಿಕವನ್ನು ಸಾಮಾನ್ಯವಾಗಿ ಕಾರಿಗೆ ಇಂಧನ ತುಂಬುವ ಗ್ಯಾಸೋಲಿನ್‌ನಲ್ಲಿ ಬಳಸಲಾಗುತ್ತದೆ. ಇದು ಕೇಂದ್ರ ನರಮಂಡಲವನ್ನು ಹಾನಿಗೊಳಿಸುತ್ತದೆ. ಮೆದುಳು ಮತ್ತು ನರಗಳ ಮೇಲೆ ಪರಿಣಾಮ ಬೀರಬಹುದು. ಟೊಲ್ಯೂನ್ ಅಂಶ ಕಿಡ್ನಿ, ಯಕೃತ್ ಮತ್ತು ಸಂತಾನೋತ್ಪತ್ತಿ ಅಂಗಗಳನ್ನು ಹಾನಿಗೊಳಿಸುತ್ತದೆ. ಇತರ ಪರಿಣಾಮಗಳೆಂದರೆ ತಲೆನೋವು, ನಿಶ್ಯಕ್ತಿ, ಆಯಾಸ ಮತ್ತು ವಾಕರಿಕೆ, ಮರಗಟ್ಟುವಿಕೆ ಮತ್ತು ಕಣ್ಣು ಮತ್ತು ಗಂಟಲಿನ ಕಿರಿಕಿರಿ ಉಂಟಾಗಬಹುದು.

ಫಾರ್ಮಾಲ್ಡಿಹೈಡ್

ಫಾರ್ಮಾಲ್ಡಿಹೈಡ್ ಎನ್ನುವುದು ಬಣ್ಣವಿಲ್ಲದೆ ಇರುವಂತಹ ಗ್ಯಾಸ್ ಆಗಿದ್ದು, ಇದು ನೈಲ್ ಪಾಲಿಶ್ ಗಳು ದೀರ್ಘ ಕಾಲ ಬಾಳಿಕೆ ಬರಲು ಇದನ್ನು ಹೇರಳವಾಗಿ ಉಪಯೋಗಿಸಲಾಗುತ್ತದೆ. ಯಾವುದೇ ರೀತಿಯ ಅಲರ್ಜಿಯಿಂದ ಬಳಲುತ್ತಿದ್ದರೆ ಆಗ ಈ ನೈಲ್ ಪಾಲಿಶ್ ಗಳನ್ನು ಬಳಸಬಾರದು ಎಂದು ಸಲಹೆ ನೀಡಲಾಗುತ್ತದೆ. ಫಾರ್ಮಾಲ್ಡಿಹೈಡ್  ಸೋಂಕು ನಿವಾರಕವಾಗಿ ಬಳಸಲಾಗುತ್ತದೆ. ಇದು ಬ್ಯಾಕ್ಟೀರಿಯಾದ ಮಾಲಿನ್ಯ ತಡೆಯುತ್ತದೆ. ಇದರಿಂದಾಗಿ ಹೃದಯ ಬಡಿತದ ಸಮಸ್ಯೆ, ಸೆಳೆತ ಮತ್ತು ಕ್ಯಾನ್ಸರ್ ನಂತಹ ಕಾಯಿಲೆಗಳು ಬರಬಹುದು.

ಡಿಬುಟೈಲ್ ಫಾಥಲೇಟ್

ಇದನ್ನು ನೈಲ್ ಪಾಲಿಶ್ ಗಳಲ್ಲಿ ಒಂದು ದ್ರಾವಕವಾಗಿ ಬಳಸಲಾಗುತ್ತದೆ. ಇದು ಉಗುರಿನ ಬಣ್ಣಗಳಿಗೆ ಹೊಳಪು ನೀಡುತ್ತದೆ. ಇದು ನೈಲ್ ಪಾಲಿಶ್ ಬಿರುಕು ಬಿಡುವುದನ್ನು ತಪ್ಪಿಸುತ್ತದೆ. ಈ ವಿಷಕಾರಿ ರಾಸಾಯನಿಕ ಪದಾರ್ಥಗಳು ಕರ್ಪೂರವನ್ನು ಒಳಗೊಂಡಿರುತ್ತವೆ. ಇದು ಉಗುರು ಬಣ್ಣಗಳಿಗೆ ಹೊಳಪು ಮತ್ತು ಶಕ್ತಿಯನ್ನು ನೀಡುತ್ತದೆ.

ಯುರೋಪಿನ ಕೆಲವು ದೇಶಗಳಲ್ಲಿ ಥಾಲೇಟ್‌ಗಳ ಬಳಕೆಯನ್ನು ನಿಷೇಧಿಸಲಾಗಿದೆ. ನೈಲ್ ಪಾಲಿಶ್ ನಲ್ಲಿ ಈ ರಾಸಾಯನಿಕ ಇರುವ ಕಾರಣದಿಂದಾಗಿ ಅಂತಃಸ್ರಾವಕ ಕಾಯಿಲೆ, ಶ್ವಾಸಕೋಶದ ಕಾಯಿಲೆ ಮತ್ತು ಗರ್ಭಕೋಶದ ಕಾಯಿಲೆ ಬರಬಹುದು. ಸಂತಾನೋತ್ಪತ್ತಿ ಪ್ರದೇಶಕ್ಕೆ ತೀವ್ರ ಹಾನಿ ಉಂಟುಮಾಡಬಹುದು. ವಾಕರಿಕೆ, ತಲೆತಿರುಗುವಿಕೆ ಮತ್ತು ತಲೆನೋವುಗಳಿಗೆ ಕಾರಣವಾಗಬಹುದು. ನೈಲ್ ಪಾಲಿಶ್ ತೆಗೆಯಲು ಬಳಸುವ ಅಸಿಟೋನ್, ಉಗುರುಗಳನ್ನು ಒಣಗಿಸಲು ಮಾತ್ರವಲ್ಲದೆ ತೀವ್ರ ಅಲರ್ಜಿಯ ಪ್ರತಿಕ್ರಿಯೆಗಳು ಮತ್ತು ಡರ್ಮಟೈಟಿಸ್ ಕೂಡಾ ಕಾರಣವಾಗಬಹುದು.

ವಿಷಕಾರಿಯಲ್ಲದ ನೈಲ್ ಪಾಲಿಶ್ ಎಂಬುದನ್ನು ಆರಿಸುವುದು ಹೇಗೆ ?

ಹೆಚ್ಚಿನ ಸೌಂದರ್ಯ ಉತ್ಪನ್ನಗಳನ್ನು ಪರೀಕ್ಷಿಸಲಾಗಿಲ್ಲ ಅಥವಾ ಅಧಿಕೃತಗೊಳಿಸದ ಕಾರಣ ಇದು ಕಷ್ಟಕರವಾಗಬಹುದು. 0-2 ರೊಳಗೆ ಕಡಿಮೆ ರೇಟಿಂಗ್‌ನೊಂದಿಗೆ ಬರುವ ಉತ್ಪನ್ನಗಳನ್ನು ಪ್ರಯತ್ನಿಸಿ ಮತ್ತು ಆರಿಸಿಕೊಳ್ಳಿ. ಯಾವುದೇ ರೇಟಿಂಗ್ ಕಂಡುಹಿಡಿಯಲು ಸಾಧ್ಯವಾಗದಿದ್ದರೆ, ನೈಲ್ ಪಾಲಿಶ್ ನ ಟೊಲ್ಯೂನ್, ಫಾರ್ಮಾಲ್ಡಿಹೈಡ್, ಡೈಬ್ಯುಟೈಲ್ ಥಾಲೇಟ್ ಮತ್ತು ಕರ್ಪೂರದಂತಹ ರಾಸಾಯನಿಕಗಳಿಂದ ಮುಕ್ತವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಅದರಲ್ಲಿರುವ ಲೇಬಲ್ ಪರಿಶೀಲಿಸುವುದು ಉತ್ತಮ ಆಯ್ಕೆ. ಸಾವಯವ ಉಗುರು ಬಣ್ಣಗಳು ಇನ್ನೂ ಸುಲಭವಾಗಿ ಲಭ್ಯವಿಲ್ಲ.

ಸಲಹೆಗಳು:

ನೈಲ್ ಪಾಲಿಶ್ ಹಾನಿಕಾರಕವಾಗಿರುವುದರಿಂದ ಅವುಗಳನ್ನು ಬೇಕಾದ (ಅಗತ್ಯ) ಸಮಯದಲ್ಲಿ ಹಚ್ಚಿ ಬಳಿಕ ಸಾಧ್ಯವಾದರೆ ಅದೇ ದಿನ ತೆಗೆದು ಬಿಡಿ. ಬಾಕಿ ದಿನಗಳಲ್ಲಿ ಉಗುರುಗಳಿಗೆ ನೈಲ್‌ ಪಾಲಿಶ್ ಹಚ್ಚದೇ ಹಾಗೇ ಬಿಡಿ.

ನೈಲ್ ಪಾಲಿಶ್ ಬಾಟಲಿಯನ್ನು ತೆರೆದಾಗ ಬರುವ ಆವಿಗಳ ಇನ್ಹಲೇಷನ್ ತಪ್ಪಿಸಿ.

ನೈಲ್ ಪಾಲಿಶ್ ಕೊಳ್ಳುವ ಮುನ್ನ ಲೇಬಲ್ ಪರಿಶೀಲಿಸುವ ಬಗ್ಗೆ ಗಮನದಲ್ಲಿಡಿ. ಟೊಲ್ಯೂನ್, ಫಾರ್ಮಾಲ್ಡಿಹೈಡ್ ಮತ್ತು ಡೈಬ್ಯುಟೈಲ್ ಥಾಲೇಟ್‌ನಂತಹ ರಾಸಾಯನಿಕಗಳು ಹೆಚ್ಚಿರುವ ನೈಲ್ ಪಾಲಿಶ್ ಉಪಯೋಗಿಸುವುದು ಬೇಡ.

ವಿಷಕಾರಿಯಲ್ಲದ ನೈಲ್ ಪಾಲಿಶ್ ಗಳು, ಹರ್ಬಲ್ ನೈಲ್ ಪಾಲಿಶ್ ಗಳು ಮತ್ತು ನೈಲ್ ಪಾಲಿಶ್ ರಿಮೂವರ್‌ಗಳನ್ನು ಆರಿಸಿಕೊಳ್ಳಿ.

ನೈಲ್ ಪಾಲಿಶ್ ಬಳಸುವ ಮೊದಲು ಅದರಲ್ಲಿರುವ ರಾಸಾಯನಿಕಗಳ ಬಗ್ಗೆ ಸರಿಯಾಗಿ ತಿಳಿಯಿರಿ ಮತ್ತು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.

*ಕಾವ್ಯಶ್ರೀ

Advertisement

Udayavani is now on Telegram. Click here to join our channel and stay updated with the latest news.

Next