ಹೊಸದಿಲ್ಲಿ : “ಪ್ರಧಾನಿ ನರೇಂದ್ರ ಮೋದಿ ಆಂಧ್ರ ಪ್ರದೇಶದ ಜನರಿಗೆ ದ್ರೋಹ ಬಗೆದಿದ್ದಾರೆ ಮತ್ತು ಕಳಂಕಿತ ರಾಜಕೀಯ ಪಕ್ಷಗಳನ್ನು, ವ್ಯಕ್ತಿಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ’ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.
ನ್ಯೂಸ್ 18 ಜತೆಗೆ ಮಾತನಾಡಿದ ನಾಯ್ಡು, ವೈಎಸ್‌ಆರ್ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ವಿರುದ್ಧದ ಘೋಷಿತ ಆದಾಯಕ್ಕೆ ಮೀರಿದ ಆಸ್ತಿ ಪ್ರಕರಣವನ್ನು ಉಲ್ಲೇಖೀಸಿ, “ಪ್ರಧಾನಿ ಮೋದಿ ಅವರು ಕಳಂಕಿತ ರಾಜಕೀಯ ಪಕ್ಷಗಳನ್ನು ಬೆಂಬಲಿಸುತ್ತಿದ್ದಾರೆ’ ಎಂದು ಹೇಳಿದರು .
“ನಾನು ಎನ್‌ಡಿಎ ಮೈತ್ರಿ ಕೂಟದಲ್ಲಿ ಇದ್ದಷ್ಟು ಕಾಲ ಯಾವುದೇ ಸಮಸ್ಯೆ ಇರಲಿಲ್ಲ; ಕೂಟದಿಂದ ಹೊರ ಬಂದ ಬಳಿಕ ನನ್ನ ಹಾಗೂ ಟಿಡಿಪಿ ಸರಕಾರದ ವಿರುದ್ಧ ಕೆಸರೆರಚಲಾಗುತ್ತಿದೆ. ಉದಾಹರಣೆಯಾಗಿ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರು “ಆಂಧ್ರಕ್ಕೆ ಕೇಂದ್ರ ಸರಕಾರ ಕೊಟ್ಟಿರುವ ಹಣಕಾಸು ನೆರವಿನ ಲೆಕ್ಕವನ್ನು ಚಂದ್ರಬಾಬು ನಾಯ್ಡು ನೀಡಿಲ್ಲ’ ಎಂದು ಹೇಳಿರುವುದು; ನನ್ನ ಮತ್ತು ನನ್ನ ಸರಕಾರದ ವಿರುದ್ಧ ನಿರಾಧಾರ ಆರೋಪಗಳನ್ನು ಮಾಡಲಾಗುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ’ ಎಂದು ನಾಯ್ಡು ಹೇಳಿದರು.
“ಎನ್‌ಡಿಎ ಮೈತ್ರಿಕೂಟದಿಂದ ಹೊರಬರಲು ನಾನು ಬಜೆಟ್ ಆಗುವ ವರೆಗೂ ಕಾದೆ. ಅಲ್ಲಿಯ ವರೆಗೂ ನಾನು ನನ್ನ ರಾಜ್ಯಕ್ಕೆ ನ್ಯಾಯೋಚಿತ ಸ್ಥಾನಮಾನ ಸಿಗುವುದೆಂಬ ವಿಶ್ವಾಸ ಹೊಂದಿದ್ದೆ. ಆದರೆ ಅಂತಿಮವಾಗಿ ನನಗೆ “14ನೇ ಹಣಕಾಸು ಆಯೋಗದ ಕಾರಣ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ಸಾಧ್ಯವಿಲ್ಲ’ ಎಂದು ಹೇಳಿದರು. ಇದು ಆಂಧ್ರ ಪ್ರದೇಶದ ಜನತೆಗೆ ಬಗೆಯಲಾದ ದ್ರೋಹ ಎಂದು ಅನ್ನಿಸಿದ ಕಾರಣ ನಾನು ಎನ್‌ಡಿಎ ಮೈತ್ರಿಕೂಟವನ್ನು ತೊರೆಯುವ ನಿರ್ಧಾರ ಮಾಡಿದೆ’ ಎಂದು ನಾಯ್ಡು ಹೇಳಿದರು.