Advertisement

ಕೋವಿಡ್ ಭಯ ಲೆಕ್ಕಿಸದ 87ರ ಡಾಕ್ಟರ್‌!

01:40 AM Oct 19, 2020 | mahesh |

ನಾಗ್ಪುರ: ಕೋವಿಡ್ ಭಯದಿಂದಾಗಿ ವೃದ್ಧರ್ಯಾರೂ ಮನೆಯಿಂದ ಹೊರಗೆ ಕಾಲಿಡುತ್ತಿಲ್ಲ. ಆದರೆ, ಇಲ್ಲೊಬ್ಬರು 87 ವರ್ಷದ ನಿವೃತ್ತ ವೈದ್ಯ ಹಳ್ಳಿಹಳ್ಳಿಗಳಿಗೆ ಹೋಗಿ ಬಡವರಿಗೆ ಚಿಕಿತ್ಸೆ ನೀಡುತ್ತಾ ಮಾದರಿಯಾಗಿದ್ದಾರೆ. ಹೌದು, ಈ ವೈದ್ಯ ಸಾಹಸಿ ಹೆಸರು ಡಾ| ರಾಮಚಂದ್ರ ದಾಂಡೇಕರ್‌! ಕೊರೊನಾ ಆತಂಕವನ್ನು ಲೆಕ್ಕಿಸದೆ ಇವರು ಚಂದ್ರಾಪುರ ಜಿಲ್ಲೆಯ ಹಳ್ಳಿಯ ಮೂಲೆಗಳಿಗೆ ಬರಿಗಾಲಿನಲ್ಲಿ ಸೈಕಲ್‌ ತುಳಿದುಕೊಂಡು ಬಡಜನರಿಗೆ ವೈದ್ಯಕೀಯ ನೆರವು ನೀಡುತ್ತಾರೆ. ರಸ್ತೆ ಸರಿ ಇಲ್ಲದ ಪ್ರದೇಶಗಳಿಗೆ ಕೆಲವೊಮ್ಮೆ ಹತ್ತಾರು ಕಿ.ಮೀ. ನಡೆದುಕೊಂಡು ಹೋಗಿ, ಚಿಕಿತ್ಸೆ ನೀಡಿದ್ದೂ ಇದೆ.|

Advertisement

ಮುಲ್‌, ಪೊಂಭುರ್ನಾ, ಬಲ್ಲಾಶಾ ತಾಲೂಕಿನಲ್ಲಿ ಕಳೆದ 60 ವರ್ಷಗಳಿಂದ ಇವರ ಸೇವೆ ಚಿರಪರಿಚಿತ. “ಲಾಕ್‌ಡೌನ್‌ ಇದ್ದಾಗಲೂ ನಾನು ಬಡವರಿಗೆ ಆರೋಗ್ಯ ಸೇವೆ ನಿಲ್ಲಿಸಿರಲಿಲ್ಲ. ನಾನು ಈ ಕೆಲಸವನ್ನು ಸ್ವಪ್ರೇರಣೆಯಿಂದ ಮಾಡುತ್ತಿದ್ದೇನೆ’ ಎಂದು ಹೇಳುತ್ತಾರೆ, ಡಾ| ರಾಮಚಂದ್ರ.
ಸರಳ ಮನುಷ್ಯ: ಮೊಬೈಲ್‌ ಬಳಸದೆ, ವಾಚ್‌ ಕಟ್ಟದೆ, ಯಾವುದೇ ಶಿಫ್ಟ್ಗಳನ್ನು ಅಳವಡಿಸಿ ಕೊಳ್ಳದೆ ಇವರು ಸೇವೆ ಸಲ್ಲಿಸುತ್ತಿದ್ದಾರೆ. ಔಷಧಗಳನ್ನೊಳಗೊಂಡ ಮೆಡಿಕಲ್‌ ಕಿಟ್‌ ಅನ್ನು ಸೈಕಲ್‌ ಹಿಂಭಾಗಕ್ಕೆ ಕಟ್ಟಿಕೊಂಡು ಮಾತ್ರವೇ ಇವರ ಬಳಿ ಇರುತ್ತದೆ.

ವೇಳಾಪಟ್ಟಿ ಇದೆ!: ಹೋಮಿಯೊಪಥಿ, ಆಯುರ್ವೇದ ಚಿಕಿತ್ಸೆ ನೀಡುವ ಇವರು, ಈ ವಾರ ಯಾವ ಹಳ್ಳಿಗೆ ಹೋಗಬೇಕು ಎಂಬುದರ ವೇಳಾಪಟ್ಟಿಯನ್ನು ಪ್ರತೀ ತಿಂಗಳ ಆರಂಭದಲ್ಲಿಯೇ ಸಿದ್ಧಪಡಿಸುತ್ತಾರೆ. ಪ್ರತೀ ಹಳ್ಳಿಯಲ್ಲೂ ಕನಿಷ್ಠ 20 ಮನೆಗಳಿಗೆ ಭೇಟಿ ನೀಡದೆ ಮನೆಗೆ ಮರಳುವುದಿಲ್ಲ.

ಹಳ್ಳಿಯಲ್ಲೇ ವಾಸ್ತವ್ಯ
“ಹಳ್ಳಿಗಳಿಂದ ಹೊರಡುವುದು ತಡವಾದರೆ, ಸೈಕಲ್‌ ಅನ್ನು ಅಲ್ಲಿಯೇ ಬಿಟ್ಟು, ಬಸ್ಸಿನಲ್ಲಿ ಮನೆಗೆ ಮರಳುತ್ತಾರೆ. ಕೆಲವೊಮ್ಮೆ ರೋಗಿಗಳ ಮನೆಯಲ್ಲಿ ಉಳಿದು, ಶುಶ್ರೂಷೆ ನೀಡಿದ್ದೂ ಇದೆ’ ಎನ್ನು ತ್ತಾರೆ,
ಡಾ| ರಾಮಚಂದ್ರ ಅವರ ಪುತ್ರ.

Advertisement

Udayavani is now on Telegram. Click here to join our channel and stay updated with the latest news.

Next