Advertisement

Crime; ಪರಪ್ಪನ ಅಗ್ರಹಾರ ಜೈಲಿನಲ್ಲಿ ನಾಗನ ದರ್ಬಾರ್;‌ ಯಾರು ಈ ವಿಲ್ಸನ್‌ ಗಾರ್ಡನ್‌ ನಾಗ?

07:15 PM Aug 26, 2024 | Team Udayavani |

ಮಣಿಪಾಲ: ಕೊಲೆ ಕೇಸಿನಲ್ಲಿ ಜೈಲು ಸೇರಿರುವ ನಟ ದರ್ಶನ್‌ ಗೆ ಪರಪ್ಪನ ಅಗ್ರಹಾರ ಕಾರಾಗ್ರಹದಲ್ಲಿ (Parappana Agrahara Prison) ರಾಜಾತಿಥ್ಯ ನೀಡುತ್ತಿರುವ ಸುದ್ದಿ ಹೊರಬೀಳುತ್ತಿದ್ದಂತೆ ಜೈಲಿನ ನಿಯಮಗಳ ಬಗ್ಗೆ ಮಾತುಗಳು ಆರಂಭವಾಗಿದೆ. ದರ್ಶನ್‌ ಜೈಲು ಆವರಣದಲ್ಲಿ ಮಗ್‌ ಮತ್ತು ಸಿಗರೇಟ್‌ ನೊಂದಿಗೆ ಹರಟೆ ಹೊಡೆಯುವ ಫೋಟೋಗಳು ವೈರಲ್‌ ಆಗಿದ್ದು, ಪರಿಣಾಮ ಏಳು ಮಂದಿ ಜೈಲಾಧಿಕಾರಿಗಳ ತಲೆದಂಡವಾಗಿದೆ.

Advertisement

ವೈರಲ್ ಆಗಿರುವ ಫೋಟೋದಲ್ಲಿ, ದರ್ಶನ್ ಮತ್ತು ಇತರರು ರೌಡಿಶೀಟರ್‌ ಒಬ್ಬನ ಜತೆ ಹರಟೆ ಹೊಡೆಯುತ್ತಿರುವುದನ್ನು ಕಾಣಬಹುದು. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಡದ ಆ ವ್ಯಕ್ತಿ ಮತ್ಯಾರು ಅಲ್ಲ, ಹಲವಾರು ಪ್ರಕರಣಗಳನ್ನು ಎದುರಿಸುತ್ತಿರುವ ರೌಡಿ ಶೀಟರ್‌ ಜೆ.ನಾಗರಾಜ್‌ ಅಲಿಯಾಸ್‌ ವಿಲ್ಸನ್‌ ಗಾರ್ಡನ್‌ ನಾಗ (Wilson Garden Naga)

ಯಾರು ಈ ವಿಲ್ಸನ್‌ ಗಾರ್ಡನ್‌ ನಾಗ?

ದರ್ಶನ್ ಜೊತೆಗಿನ ವೈರಲ್ ಫೋಟೋದಲ್ಲಿ ಕಾಣಿಸಿಕೊಂಡಿರುವ ಜೆ ನಾಗರಾಜ್ ಅಲಿಯಾಸ್ ವಿಲ್ಸನ್ ಗಾರ್ಡನ್ ನಾಗ ತನ್ನ ಕುಖ್ಯಾತ ಕ್ರಿಮಿನಲ್ ಕೆಲಸಗಳಿಂದ ಹೆಸರುವಾಸಿಯಾದ ರೌಡಿ ಶೀಟರ್. “ರೌಡಿ ಶೀಟರ್” ಎಂಬ ಪದವು ಕ್ರಿಮಿನಲ್ ಚಟುವಟಿಕೆಗಳ ಸುದೀರ್ಘ ದಾಖಲೆಯನ್ನು ಹೊಂದಿರುವ ಮತ್ತು ಪೊಲೀಸರಿಂದ ನಿಕಟವಾಗಿ ಮೇಲ್ವಿಚಾರಣೆ ಮಾಡುವ ವ್ಯಕ್ತಿಗಳನ್ನು ಸೂಚಿಸುತ್ತದೆ. ಅವರಲ್ಲಿ ಈ ನಾಗನೂ ಒಬ್ಬ.

ಬೆಂಗಳೂರಿನವನೇ ಆದ ನಾಗ, ಕೊಲೆ, ಸುಲಿಗೆ ಮತ್ತು ಡಕಾಯಿತಿ ಮುಂತಾದ ಹಲವು ಪ್ರಕರಣಗಳಲ್ಲಿ ಭಾಗಿಯಾದ ಕ್ರಿಮಿನಲ್.‌ ಕಳೆದೆರಡು ದಶಕಗಳಿಂದ ಕ್ರಿಮಿನಲ್‌ ಲೋಕದಲ್ಲಿ ಈ ನಾಗ ಸಕ್ರಿಯನಾಗಿದ್ದಾನೆ.

Advertisement

ಈ ನಾಗ ಈ ಹಿಂದೆ ಹಲವು ಬಾರಿ ಜೈಲುವಾಸ ಅನುಭವಿಸಿದ್ದಾನೆ. ಈಗಲೂ ಹಲವು ಕೇಸುಗಳಲ್ಲಿ ವಿಚಾರಣೆ ಎದುರಿಸುತ್ತಿದ್ದಾನೆ. 2007ರಲ್ಲಿ ಮತ್ತೊಬ್ಬ ರೌಡಿ ʼಕೋರಮಂಗಲ ಬಬ್ಲಿʼ ಎಂಬಾತನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಕಾರಣದಿಂದ ಬಂಧನಕ್ಕೆ ಒಳಗಾಗಿದ್ದ. ವರದಿಯ ಪ್ರಕಾರ ನಾಗ ‘ಕೋರಮಂಗಲ ಬಬ್ಲಿ’ ಜೊತೆ ಗ್ಯಾಂಗ್ ವಾರ್‌ ನಲ್ಲಿ ಭಾಗಿಯಾಗಿದ್ದ ಎಂದು ಹೇಳಲಾಗಿದೆ.

ವಿಲ್ಸನ್‌ ಗಾರ್ಡನ್‌ ನಾಗ ಸದ್ಯ ಐದು ಕೊಲೆ ಮತ್ತು ಕೊಲೆಯತ್ನ ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿದ್ದಾನೆ. ಕಳೆದ 20 ವರ್ಷಗಳಲ್ಲಿ ಈತನ ವಿರುದ್ದ 23 ಕ್ರಿಮಿನಲ್ ಪ್ರಕರಣಗಳು‌ ದಾಖಲಾಗಿದೆ. ಅದರಲ್ಲಿ ಏಳು ಕೊಲೆ ಪ್ರಕರಣಗಳಾಗಿದೆ. ರಿಯಲ್ ಎಸ್ಟೇಟ್ ವಿವಾದಗಳಲ್ಲಿ ಭಾಗಿಯಾಗಿ, ಆಗಾಗ್ಗೆ ಹಿಂಸಾತ್ಮಕ ಮಾರ್ಗಗಳ ಮೂಲಕ ಅವುಗಳನ್ನು ಪರಿಹರಿಸುವ ಮೂಲಕ ನಗರದ ಭೂಗತ ಜಗತ್ತಿನಲ್ಲಿ ನಾಗ (ಕು) ಖ್ಯಾತಿ ಪಡೆದಿದ್ದಾನೆ.

2021ರಲ್ಲಿ ವಿಲ್ಸನ್‌‌ ಗಾರ್ಡನ್ ನಾಗನ ವಿರುದ್ದ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಪ್ರಕರಣದಲ್ಲಿ (NDPS ಆಕ್ಟ್) ಕೇಸು ದಾಖಲಾಗಿತ್ತು. ಇದು ನ್ಯಾಯಾಲಯದಲ್ಲಿದೆ.

‌ಮಹೇಶ-ನಾಗ ಗ್ಯಾಂಗ್‌ ವಾರ್

ನಾಗ ಮತ್ತು ಅವನ ಗ್ಯಾಂಗ್ ದಕ್ಷಿಣ ಬೆಂಗಳೂರಿನ ಮತ್ತೊಂದು ಗ್ಯಾಂಗ್‌ ಸ್ಟರ್ ಸಿದ್ದಾಪುರ ಮಹೇಶ್ ನೊಂದಿಗೆ ಗ್ಯಾಂಗ್ ವಾರ್‌ ನಡೆಸಿತ್ತು. 2020ರ ಡಿಸೆಂಬರ್‌ ನಲ್ಲಿ ಬೆಂಗಳೂರಿನ ಕುಖ್ಯಾತ ಗ್ಯಾಂಗ್‌ ಸ್ಟರ್‌ ಲಿಂಗರಾಜು ಅಲಿಯಾಸ್‌ ಶಾಂತಿನಗರ ಲಿಂಗನ ಕೊಲೆಯಿಂದಾಗಿ ಈ ಗ್ಯಾಂಗ್‌ ವಾರ್‌ ಆರಂಭವಾಗಿತ್ತು. ಶಾಂತಿನಗರ ಲಿಂಗನು ಸಿದ್ದಾಪುರ ಮಹೇಶನಿಗೆ ಕ್ರೈಮ್‌ ಲೋಕದಲ್ಲಿ ಮಾರ್ಗದರ್ಶನ ನೀಡಿದ್ದ, ಈ ಕೊಲೆಯ ನಂತರ ಮಹೇಶ್, ನಾಗನ ಪ್ರಾಬಲ್ಯಕ್ಕೆ ಸವಾಲು ಹಾಕಲು ಕಾರಣವಾಯಿತು.

2024ರ ಆಗಸ್ಟ್‌ 4ರಂದು ಮಹೇಶನ ಕೊಲೆಯೊಂದಿಗೆ ಈ ಗ್ಯಾಂಗ್‌ ವಾರ್‌ ಅಂತ್ಯಕಂಡಿತ್ತು. ಜಾಮೀನಿನ ಮೇಲೆ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಬೆಂಗಳೂರು ಕೇಂದ್ರ ಕಾರಾಗೃಹದ ಹೊರಗೆ ಸಿದ್ದಾಪುರ ಮಹೇಶನ ಕೊಲೆಯಾಗಿತ್ತು. ಈ ಕೊಲೆಗೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ವಿಲ್ಸನ್‌ ಗಾರ್ಡನ್‌ ನಾಗ, ಆತನ ಸಹಚರ ಡಬಲ್‌ ಮೀಟರ್‌ ಮೋಹನ್‌ ಮತ್ತು 20 ಜನರ ವಿರುದ್ದ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.

ಈ ವರ್ಷದ ಆರಂಭದಲ್ಲಿ ಬೆಂಗಳೂರು ನಗರ ಪ್ರದೇಶಕ್ಕೆ ಒಂದು ವರ್ಷದ ಮಟ್ಟಿಗೆ ಪ್ರವೇಶಿಸದಂತೆ ನಾಗನಿಗೆ ಪೊಲೀಸರು ನಿರ್ಬಂಧ ವಿಧಿಸಿದ್ದರು.

2024ರ ಆಗಸ್ಟ್‌ 18ರಂದು ಸಿದ್ದಾಪುರ ಮಹೇಶನ ಕೊಲೆಗೆ ಸಂಬಂಧಿಸಿದಂತೆ ವಿಲ್ಸನ್‌ ಗಾರ್ಡನ್‌ ನಾಗ ಸಹಚರ ಡಬಲ್‌ ಮೀಟರ್‌ ಮೋಹನನ ಜತೆ ಕೋರ್ಟ್‌ ನಲ್ಲಿ ಶರಣಾಗಿದ್ದ.

ದರ್ಶನ್‌ ಆತಿಥ್ಯಕ್ಕೆ ಪೈಪೋಟಿ

ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಜೈಲು ಸೇರಿದ ಆರಂಭದಲ್ಲಿ ಅವರಿಗೆ ರಾಜಾತಿಥ್ಯ ನೀಡಲು ರೌಡಿಗಳಾದ ವಿಲ್ಸನ್‌ ಗಾರ್ಡನ್‌ ನಾಗ ಮತ್ತು ಸೈಕಲ್‌ ರವಿ ಗ್ಯಾಂಗ್‌ ಪೈಪೋಟಿ ನಡೆಸಿದ್ದರು ಎಂದು ಈ ಹಿಂದೆ ಭಾರೀ ಸುದ್ದಿಯಾಗಿತ್ತು. 13 ವರ್ಷಗಳ ಹಿಂದೆ ಪತ್ನಿ ಮೇಲೆ ಹಲ್ಲೆ ನಡೆಸಿ ಮೊದಲ ಬಾರಿಗೆ ಜೈಲು ಸೇರಿದ್ದ ದರ್ಶನ್‌ ಗೆ ರೌಡಿಶೀಟರ್‌ ಸೈಕಲ್‌ ರವಿ ಹಾಗೂ ಆತನ ಸಹಚರರು ಜೈಲಿನಲ್ಲಿ ಆತಿಥ್ಯ ನೀಡಿದ್ದರು. ಈಗ ಸಿದ್ದಾಪುರ ಮಹೇಶ್‌ ಕೊಲೆ ಪ್ರಕರಣದಲ್ಲಿ ಕಳೆದ 11 ತಿಂಗಳಿಂದ ಜೈಲಿನಲ್ಲಿರುವ ರೌಡಿ ವಿಲ್ಸನ್‌ ಗಾರ್ಡನ್‌ ನಾಗ ಹಾಗೂ ಆತನ ಗ್ಯಾಂಗ್‌ ಜೈಲಿನಲ್ಲಿ ನಟ ದರ್ಶನ್‌ ಸೇವೆಯಲ್ಲಿ ತೊಡಗಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next