ಬೆಂಗಳೂರು: ಬ್ಲ್ಯಾಂಕ್ ಆ್ಯಂಡ್ ವೈಟ್ ದಂಧೆ ಆರೋಪಿ, ಮಾಜಿ ಕಾರ್ಪೋರೇಟರ್ ನಾಗರಾಜು ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಕೆಯೊಡ್ಡಿದ್ದ ಪ್ರಕರಣದಲ್ಲಿ ವಕೀಲ ಶ್ರೀರಾಮರೆಡ್ಡಿಗೆ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಗುರುವಾರ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ನಾಗನ ಪ್ರಕರಣದ ತನಿಖೆಯ ಉಸ್ತುವಾರಿ ವಹಿಸಿಕೊಂಡಿರುವ ಕೆ.ಆರ್‌ಪುರಂ ವಿಭಾಗದ ಎಸಿಪಿ ಕೆ.ಪಿ ರವಿಕುಮಾರ್ ಅವರನ್ನು ಭೇಟಿಯಾಗಿದ್ದ ವಕೀಲ ಶ್ರೀರಾಮರೆಡ್ಡಿ ಬೆದರಿಕೆ ಹಾಕಿ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಎದುರಿಸುತ್ತಿದ್ದಾರೆ. ಈ ಸಂಬಂಧ ತಮ್ಮ ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದು ಹಾಗೂ ನಿರೀಕ್ಷಣಾ ಜಾಮೀನು ಕೋರಿ ವಕೀಲ ಶ್ರೀರಾಮರೆಡ್ಡಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ 22ನೇ ಸಿಟಿ ಸಿವಿಲ್ ಕೋರ್ಟ್, 1 ಲಕ್ಷ ಬಾಂಡ್ ಹಾಗೂ ಒಬ್ಬರ ಭದ್ರತಾ ಖಾತ್ರಿ ಒದಗಿಸುವಂತೆ ಷರತ್ತು ವಿಧಿಸಿ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತು. ಅಲ್ಲದೆ ಈ ಅರ್ಜಿಯ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಿ ವಕೀಲರಿಗೆ ಸೂಚಿಸಿ ಶುಕ್ರವಾರಕ್ಕೆ ವಿಚಾರಣೆ ಮುಂದೂಡಿತು.
ಏನಿದು ಪ್ರಕರಣ?: ವಂಚನೆ ಅಪಹರಣ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಮಾಜಿ ಕಾರ್ಪೋರೇಟರ್ ನಾಗನ ಪರ ವಕಾಲತ್ತು ವಹಿಸಿದ್ದ ವಕೀಲ ಶ್ರೀರಾಮರೆಡ್ಡಿ ಮೇ 8ರಂದು ಬೆಳಿಗ್ಗೆ ಸುಮಾರು 11.15ಕ್ಕೆ ಬಾಣಸವಾಡಿಯಯಲ್ಲಿರುವ ಎಸಿಪಿ ಕಚೇರಿಗೆ ತೆರಳಿದ್ದರು.
ಈ ವೇಳೆ ಎಸಿಪಿ ರವಿಕುಮಾರ್ ಜೊತೆ ಮಾತನಾಡುತ್ತಾ, ನನ್ನ ಷರತ್ತುಗಳನ್ನು ಒಪ್ಪಿಕೊಂಡರೆ ನಾಗನನ್ನು ಶರಣಾಗತಿ ಮಾಡಿಸುತ್ತೇನೆ. ಇಲ್ಲದಿದ್ದರೆ ನೀವೂ ಸೇರಿದಂತೆ ಪೊಲೀಸ್ ಅಧಿಕಾರಿಗಳನ್ನು ಹೈಕೋರ್ಟ್ ಮುಂದೆ ನಿಲ್ಲಿಸುತ್ತೇನೆ ಎಂದು ಬೆದರಿಕೆ ಹಾಕಿದ್ದರು. ಜತೆಗೆ ಅನಗತ್ಯವಾಗಿ ವಾಗ್ವಾದ ನಡೆಸಿದ್ದರು.
ಈ ಹಿನ್ನೆಲೆಯಲ್ಲಿ ಎಸಿಪಿ ರವಿಕುಮಾರ್ ನೀಡಿದ ದೂರಿನ ಅನ್ವಯ, ನ್ಯಾಯಾಲಯದ ಅನುಮತಿ ಪಡೆದುಕೊಂಡಿದ್ದ ಬಾಣಸವಾಡಿ ಠಾಣೆ ಪೊಲೀಸರು ಶ್ರೀರಾಮರೆಡ್ಡಿ ವಿರುದ್ಧ ಬೆದರಿಕೆ ಹಾಗೂ ಸರ್ಕಾರಿ ಅಧಿಕಾರಿ ಕರ್ತವ್ಯಕ್ಕೆ ಅಡ್ಡಿ ಆರೋಪದಲ್ಲಿ ಎಫ್ಐಆರ್ ದಾಖಲಿಸಿದ್ದರು. ಈ ನಡುವೆ ನಾಗ ಮತ್ತು ಆತನ ಪುತ್ರರು ಜಾಮೀನಿಗಾಗಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.