Advertisement

ನಾಗರತ್ನ ಬಂಧನಕ್ಕೆ ಪೊಲೀಸರ ಶೋಧ

09:36 AM Oct 29, 2018 | |

ಬೆಂಗಳೂರು: ನಟ ದುನಿಯಾ ವಿಜಯ್‌ ಕೌಟುಂಬಿಕ ಕಲಹ ಇದೀಗ ಮತ್ತೂಂದು ತಿರುವು ಪಡೆದುಕೊಂಡಿದ್ದು, ವಿಜಯ್‌ ಎರಡನೇ ಪತ್ನಿ ಕೀರ್ತಿಗೌಡ ಮೇಲೆ ಮೊದಲ ಪತ್ನಿ ನಾಗರತ್ನ ಚಪ್ಪಲಿಯಿಂದ ಹಲ್ಲೆ ನಡೆಸಿದ ವಿಡಿಯೋ
ವೈರಲ್‌ ಆಗಿರುವ ಹಿನ್ನೆಲೆಯಲ್ಲಿ ನಾಗರತ್ನ ಅವರ ಬಂಧನಕ್ಕೆ ಪೊಲೀಸರು ಶೋಧ ನಡೆಸಿದ್ದಾರೆ.

Advertisement

ಈ ಸಂಬಂಧ ಹಿಂದೆ ನಾಗರತ್ನ ವಿರುದ್ಧ ದಾಖಲಿಸಿದ್ದ ಪ್ರಕರಣಕ್ಕೆ ಹೆಚ್ಚಿನ ಸೆಕ್ಷನ್‌ಗಳನ್ನು ದಾಖಲಿಸಿ ಕ್ರಮ ಕೈಗೊಳ್ಳುವಂತೆ ಕೀರ್ತಿಗೌಡ ಗಿರಿನಗರ ಠಾಣೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾಗರತ್ನ ಅವರ ಇಬ್ಬರು ಪುತ್ರಿಯರಾದ ಮೋನಿಕಾ ಮತ್ತು ಮೋನಿಷಾರನ್ನು ಪೊಲೀಸರು ಭಾನುವಾರ ಠಾಣೆಗೆ ಕರೆಸಿಕೊಂಡು ಒಂದೂವರೆ ಗಂಟೆಗೂ ಅಧಿಕ ಕಾಲ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡು ಬಿಡುಗಡೆ ಮಾಡಿದ್ದಾರೆ.

ಮತ್ತೂಂದೆಡೆ ವಿಡಿಯೋ ವೈರಲ್‌ ಆಗಿ, ತಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ನಾಗರತ್ನ ಹಾಗೂ ಅವರ ಸಹೋದರ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಈ ನಡುವೆ ಗಿರಿನಗರ ಠಾಣೆಗೆ ಕುಟುಂಬ ಸಮೇತ
ಆಗಮಿಸಿದ ನಟ ವಿಜಯ್‌ ತಮ್ಮ ಇಬ್ಬರು ಪುತ್ರಿಯರನ್ನು ಪ್ರಕರಣದಿಂದ ಕೈ ಬಿಡುವಂತೆ ಮನವಿ ಮಾಡಿದ್ದು, ಹೇಳಿಕೆ ಪಡೆದುಕಳುಹಿಸಿಕೊಂಡುವಂತೆ ಕೇಳಿಕೊಂಡರು.

ವಿಡಿಯೋ ವೈರಲ್‌: ವಿಜಯ್‌ ಮೊದಲ ಪತ್ನಿ ನಾಗರತ್ನ ಅವರು ಕೀರ್ತಿಗೌಡ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸುವ ಸಿಸಿಟಿವಿ ದೃಶ್ಯಾವಳಿ ವೈರಲ್‌ ಆಗಿದೆ. ಸೆ.23ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಮನೆಗೆ ಬಂದ ನಾಗರತ್ನ
ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ. ಆಗ ಬಿಡಿಸಲು ಮುಂದಾದ ಇಬ್ಬರು ಪುತ್ರಿಯರು, ವಿಜಯ್‌ ಪೋಷಕರು ಹಾಗೂ ಸಂಬಂಧಿಕರ ಮೇಲೂ ಹಲ್ಲೆ ನಡೆಸಿದ್ದಾರೆ. ಈ ಕೃತ್ಯಕ್ಕೆ ಪುತ್ರಿ ಮೋನಿಕಾ ಸಹಕಾರ ನೀಡಿದ್ದಾರೆ ಎಂದು ಹೇಳಲಾಗಿದೆ.

ಮೊದಲ ಪತ್ನಿ ನಾಗರತ್ನರಿಂದ ದೂರವಾದ ವಿಜಯ್‌ ಇಬ್ಬರು ಪುತ್ರಿ ಹಾಗೂ ಒಬ್ಬ ಪುತ್ರನನ್ನು ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದರು. ಈ ಮಧ್ಯೆ ಪಾನಿಪೂರಿ ಸೂರಿ ಸಂಬಂಧಿಕರ ಮೇಲಿನ ಹಲ್ಲೆ ಪ್ರಕರಣ ಸಂಬಂಧ ವಿಜಯ್‌ ಸೆ.23ರಂದು ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಈ ವೇಳೆ ಹೊಸಕೆರೆಹಳ್ಳಿಯ ಮನೆಗೆ ಬಂದ ನಾಗರತ್ನ,
ಕೀರ್ತಿಗೌಡಗೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದರು. ಆದರೆ ನಾಗರತ್ನ ಗಿರಿನಗರ ಠಾಣೆಯಲ್ಲಿ ವಿಜಯ್‌ ಮನೆಯಲ್ಲಿದ್ದ ದಾಖಲೆಯೊಂದನ್ನು ತರಲು ಹೋದಾಗ ಕೀರ್ತಿಗೌಡ ನನ್ನ ಮೇಲೆ ಹಲ್ಲೆ ನಡೆಸಿದ್ದರು ಎಂದು ಪ್ರಕರಣ
ದಾಖಲಿಸಿದ್ದರು.

Advertisement

ಪುತ್ರಿಯರಿಂದ ಡಿವಿಆರ್‌ ನಾಶ?: ಈ ಸಂಬಂಧ ಪೊಲೀಸರು ಕೀರ್ತಿಗೌಡರನ್ನು ಠಾಣೆಗೆ ಕರೆದೊಯ್ದ ವೇಳೆ ಮನೆಯಲ್ಲಿದ್ದ ಪುತ್ರಿಯರು ಸಿಸಿಟಿವಿ ದೃಶ್ಯಾವಳಿಯ ಡಿವಿಆರ್‌ ಅನ್ನು ನಾಶಪಡಿಸಿದ್ದರು ಎಂದು ಹೇಳಲಾಗಿದೆ. ಆದರೆ, ಇದಕ್ಕೂ ಮೊದಲು ಮೋನಿಕಾ ಹಲ್ಲೆಯ ಇಡೀ ದೃಶ್ಯಾವಳಿಯನ್ನು ಪೆನ್‌ಡ್ರೈವ್‌ನಲ್ಲಿ ಸಂಗ್ರಹಿಸಿಟ್ಟು
ತನ್ನ ಕಬೋರ್ಡ್‌ನಲ್ಲಿದ್ದ ಬಟ್ಟೆಗಳ ಕೆಳಗೆ ಇಟ್ಟಿದ್ದರು. ನಂತರ ತಾಯಿ ನಾಗರತ್ನ ಮನೆಗೆ ತೆರಳಿದ್ದರು.
ಒಂದೆರಡು ದಿನಗಳ ಬಳಿಕ ಪೆನ್‌ಡ್ರೈವ್‌ ಕೊಂಡೊಯ್ಯಲು ಬಂದ ಮೋನಿಕಾರನ್ನು ವಿಜಯ್‌ ಕುಟುಂಬ ಸದಸ್ಯರು ಮನೆಯೊಳಗೆ ಬರಲು ಅವಕಾಶ ನೀಡಿಲ್ಲ. ಇದರಿಂದ ಆಕ್ರೋಶಗೊಂಡ ಮೋನಿಕಾ ಬಾಗಿಲು ಮತ್ತು ಕಿಟಕಿಗೆ ಹೊಡೆದಿದ್ದರು. ಈ ಸಂಬಂಧ ತಂದೆ ವಿಜಯ್‌ ಹಾಗೂ ಚಿಕ್ಕಮ್ಮ ಕೀರ್ತಿಗೌಡ ವಿರುದ್ಧ ಹಲ್ಲೆ ಪ್ರಕರಣ ದಾಖಲಿಸಿದ್ದರು.

ಪೆನ್‌ಡ್ರೈವ್‌ ಪತ್ತೆ: ಪುತ್ರಿ ಮೋನಿಕಾ ನೀಡಿದ ದೂರು ಸಂಬಂಧ ಗಿರಿನಗರ ಪೊಲೀಸರು ವಿಜಯ್‌ ಹಾಗೂ ಕೀರ್ತಿಗೌಡರನ್ನು ವಿಚಾರಣೆ ನಡೆಸಿದ ಪೊಲೀಸರು ಬೇರೆ ಯಾವುದೋ ಬಹುಮುಖ್ಯವಾದ ದಾಖಲೆ ನಿಮ್ಮ ಮನೆಯಲ್ಲಿರುವ ಸಾಧ್ಯತೆ ಇದ್ದು, ಪತ್ತೆ ಹಚ್ಚುವಂತೆ ಸಲಹೆ ನೀಡಿದ್ದರು. ಅದರಂತೆ ಇಡೀ ಮನೆ ಹುಡುಕಾಟ
ನಡೆಸಿದಾಗ ಮೋನಿಕಾಳ ಕಬೋರ್ಡ್‌ನಲ್ಲಿ ಪೆನ್‌ಡ್ರೈವ್‌ ಪತ್ತೆಯಾಗಿತ್ತು. ಇದರಲ್ಲಿದ್ದ ದೃಶ್ಯಾವಳಿಗಳನ್ನು ವೀಕ್ಷಿಸಿದಾಗ ನಾಗರತ್ನ ಕೃತ್ಯ ಬಯಲಾಗಿದೆ ಎಂದು ಪೊಲೀಸರು ಹೇಳಿದರು

ಪುತ್ರಿಯರ ಮೇಲೆಯಾವುದೇ ಪ್ರಕರಣ ಬೇಡ 
ಘಟನೆ ಸಂಬಂಧ ಮೋನಿಕಾ ಹಾಗೂ ಮೋನಿಷಾರನ್ನು ಗಿರಿನಗರ ಪೊಲೀಸರು ವಿಚಾರಣೆಗೊಳಪಡಿಸಿದ್ದರು. ಇದನ್ನು ತಿಳಿದ ವಿಜಯ್‌, ಪತ್ನಿ ಹಾಗೂ ಪೋಷಕರ ಜತೆ ಠಾಣೆಗೆ ಬಂದು ಪತ್ನಿ ನಾಗರತ್ನ ಮಾಡಿರುವ ಕೃತ್ಯಕ್ಕೆ ಅಪ್ರಾಪ್ತ ವಯಸ್ಸಿನ ಮಕ್ಕಳ ಭವಿಷ್ಯ ಹಾಳಾಗುತ್ತದೆ. ದಯವಿಟ್ಟು ಅವರನ್ನು ಪ್ರಕರಣದಿಂದ ಕೈಬಿಡುವಂತೆ ಕೋರಿದ್ದಾರೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಪೊಲೀಸರು ಇಬ್ಬರಿಂದ ಹೇಳಿಕೆ ದಾಖಲಿಸಿಕೊಂಡು ಮುಚ್ಚಳಿಕೆ ಬರೆಸಿಕೊಂಡು ವಾಪಸ್‌ ಕಳುಹಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next