Advertisement

ನಾಗರಹೊಳೆ ಹುಲಿ ಹತ್ಯೆ ಪ್ರಕರಣ: ಮತ್ತಿಬ್ಬರು ಬಂಧಿತರಿಂದ ಹುಲಿ ತಲೆ ಬುರುಡೆ,ಬಂದೂಕು ವಶ

06:44 AM Feb 20, 2022 | Team Udayavani |

ಹುಣಸೂರು: ನಾಗರಹೊಳೆ ಉದ್ಯಾನದಲ್ಲಿ ನಡೆದಿದ್ದ ಹುಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ ಎರಡು ಕೋವಿಗಳು, ಕಾಡತೂಸುಗಳು, ಮನೆಯಲ್ಲಿ ಹೂತಿಟ್ಟಿದ್ದ ಹುಲಿಯ ತಲೆ ಬುರುಡೆ, ಮೂಳೆಗಳು ಮತ್ತಿತರ ಪದಾರ್ಥಗಳನ್ನು ಅರಣ್ಯ ಇಲಾಖೆಯ ವಿಶೇಷ ತಂಡ ವಶಪಡಿಸಿಕೊಂಡಿದೆ.

Advertisement

ಪ್ರಕರಣದ ಪ್ರಮುಖ ಆರೋಪಿಗಳಾಗ ಚನ್ನಯ್ಯನ ಕೋಟೆಯ ಗ್ರಾ.ಪಂ. ಸದಸ್ಯ, ಆದಿವಾಸಿ ಮುಖಂಡ ಮಾಲ್ದಾರೆ ಹಾಡಿಯ ಅಪ್ಪಾಜಿ ಹಾಗೂ ಮನೋಜ್ ಅ. ಮನು ಕಡುಕಂಡಿ ಬಂಧಿತರು. ಈವರೆಗೆ ಒಟ್ಟು ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಘಟನೆ ಹಿನ್ನೆಲೆ:

ಫೆ.14ರಂದು ಮಡಿಕೇರಿ ಅರಣ್ಯ ಸಂಚಾರಿ ದಳದವರು ಅಕ್ರಮವಾಗಿ ಹುಲಿಯ ಅಂಗಾಗಗಳನ್ನು ಮಾರಾಟ ಮಾಡಲೆತ್ನಿಸುತ್ತಿದ್ದ ಪ್ರಕರಣಕ್ಕೆ   ಸಂಬಂಧಿಸಿದಂತೆ ನಾಲ್ವರು ಬಂಧಿಸಿ ಹುಲಿಯ ಚರ್ಮ, ಉಗುರು, ಎರಡು ಹಿಂಗಾಲು, ಮೀಸೆಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಆನೆಚೌಕೂರು ವನ್ಯಜೀವಿ ಅರಣ್ಯ ವಲಯದ ವಲಯ ಅರಣ್ಯಾಧಿಕಾರಿಗಳಿಗೆ  ಪ್ರಕರಣ ಹಸ್ತಾಂತರಿಸಿದ್ದರು.

ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಪ್ರಕಾರ ಅರಣ್ಯ ಮೊಕದಮ್ಮೆ ದಾಖಲಿಸಿ, ಹೆಚ್ಚಿನ ವಿಚಾರಣೆ ಹಾಗೂ ಉಳಿದ ಆರೋಪಿಗಳ ಮತ್ತು ಹುಲಿಯ ಅಂಗಾಗಗಳ ಪತ್ತೆಗಾಗಿ ಡಿಸಿಎಫ್ ಮಹೇಶ್‌ಕುಮಾರ್ ರವರು ಎ.ಸಿ.ಎಫ್.ಸತೀಶ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು.

Advertisement

ಹರೀಶ್ ಮನೆಯಲ್ಲಿ ತಲೆ ಬುರುಡೆ ಪತ್ತೆ:

ವಿಶೇಷ ತಂಡವು ಡಿಸಿಎಫ್ ಮಹೇಶ್‌ಕುಮಾರ್ ಮಾರ್ಗದರ್ಶನದಲ್ಲಿ ಬಂಡೀಪರದ ರಾಣಾ, ಮುದೋಳಿನ ಮಾರ್ಗಿ ಶ್ವಾನಗಳ ನೆರವಿನಿಂದ ಗ್ರಾ.ಪಂ.ಸದಸ್ಯ ಅಪ್ಪಾಜಿ ಹಾಗೂ ಮನು ಅ.ಮನೋಜ್ ಕುಡಕಂಡಿಯವರ ಬಂಧಿಸಿ ವಿಚಾರಣೆ ನಡೆಸಿದ ವೇಳೆ ಹುಲಿ ಕೊಂದಿದ್ದು ತಾವೇ ಎಂದು ಒಪ್ಪಿಕೊಂಡಿದ್ದರು. ಮಾಲ್ದಾರೆಯ ಹರೀಶ್ ಮನೆಯ ಸುತ್ತಮುತ್ತ ಶೋಧನೆ ನಡೆಸಲಾಗಿ ಮಣ್ಣಿನಡಿಯಲ್ಲಿ ಹೂತಿಟ್ಟಿದ್ದ ಹುಲಿಯ ತಲೆ ಬುರುಡೆ, ಮೂಳೆಗಳು ಪತ್ತೆಯಾದವು.

ಆರೋಪಿಗಳ ಮನೆಯಲ್ಲಿ ಶೋಧಿಸಲಾಗಿ ಹುಲಿಯ ಹತ್ಯೆಗೆ ಬಳಸಲಾಗಿದ್ದ ಎರಡು ಬಂದೂಕು,  ಕಾಡತೂಸುಗಳು, ಬಾಕಿ ಒಂದು ಉಗುರು ಹುಲಿ ಗಣತಿ ವೇಳೆ ಕಳುವಾಗಿದ್ದ ಎರಡು ಟ್ರಾಪಿಂಗ್ ಕ್ಯಾಮರ, 2 ಕೆ.ಜಿಯಷ್ಟು ಗಂಧದ ತುಂಡು, ಉರುಳಿಗೆ ಬಳಸುವ ವೈರ್ ಹಾಗೂ ಹುಲಿ ಅಂಗಾಂಗಗಳನ್ನು ಮಾರಾಟ ಮಾಡಲು ಬಳಸಿದ್ದ ಕಾರು ಹಾಗೂ ಸ್ಕೂಟರನ್ನು ಮುಟ್ಟುಗೋಲು ಹಾಕಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ, ಮತ್ತೊಂದು ಹುಲಿ ಉಗುರು ಸಿಗಬೇಕಿದ್ದು, ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳು ತಲೆ ಮರೆಸಿಕೊಂಡಿದ್ದು, ತನಿಖೆ ಮುಂದುವರೆದಿದೆ ಎಂದು ಎಸಿಎಫ್ ಸತೀಶ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ನಾಗರಹೊಳೆ ಎಸಿಎಫ್ ಗೋಪಾಲ್, ವಿವಿಧ ವಲಯಗಳ ಆರ್.ಎಫ್.ಓ.ಗಳಾದ ಕಿರಣ್‌ಕುಮಾರ್, ನಮನ್ ನಾರಾಯಣ ನಾಯಕ್, ಮಹಮದ್‌ಜೀಷಾನ್, ಗಿರೀಶ್‌ಚೌಗುಲೆ, ಸಂತೋಷ್‌ಹೂಗಾರ್, ಹನುಮಂತರಾಜು, ಎಸ್‌ಟಿಪಿಎಫ್‌ನ ಅಮೃತೇಶ್,ಅರುಣ್ ಹಾಗೂ ಡಿ.ಆರ್.ಎಫ್.ಓ. ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next