ಮೈಸೂರು: ವರ್ಷದ ಮೊದಲ ಹಬ್ಬವಾದ ನಾಗರ ಪಂಚಮಿಯನ್ನು ನಗರದಾಂತ್ಯ ಸಂಭ್ರಮದಿಂದ ಆಚರಿಸಲಾಯಿತು. ವಿಶೇಷವಾಗಿ ಮಹಿಳೆಯರು ಆಚರಿಸಲ್ಪಡುವ ಈ ಹಬ್ಬದಲ್ಲಿ ಮಹಿಳೆಯರು ಹೊಸ ಬಟ್ಟೆ ತೊಟ್ಟು ಕುಟುಂಬ ಸಮೇತ ನಾಗರಕಲ್ಲಿಗೆ ಹಾಲೆರೆದರು, ಹುತ್ತಕ್ಕೆ ತನಿ ಎರೆದು ಭಕ್ತಿಭಾವ ಮೆರೆದರು.
ನಗರದ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಗಳು, ಅಮೃತೇಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೋತ್ಸವ ಜರುಗಿತು. ದೇವಸ್ಥಾನ ಆವರಣದಲ್ಲಿರುವ ಅರಳಿಕಟ್ಟೆಯ ನಾಗರಕಲ್ಲಿಗೆ ಪೂಜೆ ಸಲ್ಲಿಸಿ ಹಾಲೆರೆದು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪೂಜೆ ಸಲ್ಲಿಸಿದರೆ, ಕೆಲವರು ಹರಕೆ ತೀರಿಸಿದರು. ಇನ್ನೂ ನಗರದಲ್ಲಿರುವ ಹುತ್ತಗಳಿಗೆ ತನಿ ಎರೆದು ಪೂಜೆ ಸಲ್ಲಿಸಲಾಯಿತು.
ನಗರದ ಹೊರ ವಲಯದಲ್ಲಿರುವ ಸಿದ್ದಲಿಂಗಪುರದ ಸುಬ್ರಹ್ಮಣ್ಯಸ್ವಾಮಿ ಹಾಗೂ ವಿಶ್ವೇಶ್ವರ ನಗರದ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಕೈಂಕರ್ಯ ನಡೆಯಿತು. ನೂರಾರು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ ಪೂಜೆ ಸಲ್ಲಿಸಿದರು. ಇದರ ಜತೆಗೆ ಹರಕೆ ಹೊತ್ತವರು ಹರಕೆ ತೀರಿಸಿದರು.
ನಗರದ ದಿವಾನ್ ರಸ್ತೆಯಲ್ಲಿರುವ ಅಮೃತೇಶ್ವರ ದೇವಸ್ಥಾನದ ಆವರಣದಲ್ಲಿರುವ ನಾಗರಕಲ್ಲಿಗೆ ಪೂಜೆ ಸಲ್ಲಿಸಲು ಮುಗಿಬಿದ್ದರು. ಬೆಳಗಿನ ಜಾವಾದಿಂದಲೇ ಪೂಜೆ ಸಲ್ಲಿಸಲು ಆರಂಭಿಸಿದರು. ತಮ್ಮ ತಮ್ಮ ಮನೆ ಸಮೀಪ ವಿರುವ ನಾಗರ ಕಲ್ಲಿಗೆ ಹಾಲೆರೆದರು. ಇನ್ನೂ ಇದೇ ದಿನ ಹಿಂದೂ ಸಂಪ್ರದಾಯದ ಪ್ರಕಾರ ರಕ್ಷ ಬಂಧನವಾಗಿರುವುದರಿಂದ ಅಲ್ಲಲ್ಲಿ ರಕ್ಷ ಬಂಧನವು ನಡೆಯಿತು.
ವಿಶ್ವೇಶ್ವರ ನಗರದಲ್ಲಿರುವ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಸುಬ್ರಹ್ಮಣ್ಯ ಸ್ವಾಮಿ ಟೆಂಪಲ್ ಟ್ರಸ್ಟ್‌ನಿಂದ ವಿವಿಧ ಧಾರ್ಮಿಕ ಕಾರ್ಯ ಹಮ್ಮಿಕೊಳ್ಳಲಾಯಿತು. ಸ್ವಾಮಿಗೆ ಕ್ಷೀರಾ, ಪಂಚಾಮೃತ, ಗಂಧ, ವಿಭೂತಿ, ಪುಷ್ಪಾಭಿಷೇಕ ನೆರವೇರಿಸಲಾಯಿತು. ಮಹಾಮಂಗಳಾರತಿ ನೆರವೇರಿಸಿ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಯಿತು. ನಂತರ ಪ್ರಸಾದ ವಿನಿಯೋಗ ಮಾಡಲಾಯಿತು.